Asianet Suvarna News Asianet Suvarna News

ಸುದೀಪ್ ನಾಟ್ ರೀಚಬಲ್!

ಸುಮಾರು ಹದಿನೆಂಟು ವರ್ಷ ಹಿಂದಿನ ಮಾತು. ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಮೂರು ನಾಲ್ಕು ವರ್ಷಗಳಾಗಿದ್ದವು. ಅವರ ಸಿನಿಮಾಗಳು ವರ್ಷಕ್ಕೆ ಆರೋ ಏಳೋ ಸೆಟ್ಟೇರುತ್ತಿದ್ದವು. ನಾಲ್ಕು, ಐದು, ಆರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಆಗೊಂದು ಸಂದರ್ಶನದಲ್ಲಿ ಸುದೀಪ್ ಅವರಿಗೊಂದು ಪ್ರಶ್ನೆ ಹಾಕಿದ್ದೆವು:

Sudeep Not Reachble

ಬೆಂಗಳೂರು (ಫೆ.02): ಸುಮಾರು ಹದಿನೆಂಟು ವರ್ಷ ಹಿಂದಿನ ಮಾತು. ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಮೂರು ನಾಲ್ಕು ವರ್ಷಗಳಾಗಿದ್ದವು. ಅವರ ಸಿನಿಮಾಗಳು ವರ್ಷಕ್ಕೆ ಆರೋ ಏಳೋ ಸೆಟ್ಟೇರುತ್ತಿದ್ದವು. ನಾಲ್ಕು, ಐದು, ಆರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಆಗೊಂದು ಸಂದರ್ಶನದಲ್ಲಿ ಸುದೀಪ್ ಅವರಿಗೊಂದು ಪ್ರಶ್ನೆ ಹಾಕಿದ್ದೆವು:

ನೀವು  ಎರಡು ತಿಂಗಳಿಗೊಂದು ಸಿನಿಮಾ ರಿಲೀಸ್ ಮಾಡುತ್ತಿದ್ದೀರಲ್ಲ, ಜಾಸ್ತಿಯಾಯಿತು ಅನ್ನಿಸುತ್ತಿಲ್ಲವೇ?

ಅದಕ್ಕೆ ಸುದೀಪ್ ಉತ್ತರಿಸಿದ್ದು ಹೀಗೆ: ನಾವೆಲ್ಲ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್- ಮೊದಲಾದವರ ಹಾಗೆ ಮೂವತ್ತೋ ನಲವತ್ತೋ ಐವತ್ತೋ ವರ್ಷ ಚಿತ್ರರಂಗದಲ್ಲಿ ಉಳಿಯುತ್ತೇವೆ ಅನ್ನುವ ನಂಬಿಕೆ ಇಲ್ಲ. ನಮ್ಮ ಅವಧಿ ಹೆಚ್ಚೆಂದರೆ ಹತ್ತು ವರ್ಷ ಮಾತ್ರ. ಈಗ ಕಾಲ ವೇಗವಾಗಿ ಬದಲಾಗುತ್ತಿದೆ. ಒಬ್ಬ ಹೀರೋ ಹತ್ತು ವರ್ಷ ಹೀರೋ ಆಗಿ ಉಳಿದರೆ ಅದೇ ಹೆಚ್ಚು. ದಿನೇ ದಿನೇ ಹೊಸಬರು ಬರುತ್ತಿದ್ದಾರೆ. ನಾವು ಹಿರಿಯರ ಜೊತೆಗೂ ಸ್ಪರ್ಧಿಸಬೇಕು, ಕಿರಿಯರ ಜೊತೆಗೂ ಸ್ಪರ್ಧೆಗೆ ಇಳಿಯಬೇಕು ಅನ್ನುವ ಸ್ಥಿತಿ ಇದೆ.

ಸುದೀಪ್ ಚಿತ್ರರಂಗಕ್ಕೆ ಬಂದು ಮೊನ್ನೆಗೆ ಇಪ್ಪತ್ತೆರಡು ವರ್ಷ. ಈ ಇಪ್ಪತ್ತೆರಡು  ವರ್ಷಗಳಲ್ಲಿ ಅವರು ಅಪ್ರಸ್ತುತರಾಗಿಲ್ಲ. 2010 ರಲ್ಲಿ, ಅವರು ಚಿತ್ರರಂಗಕ್ಕೆ  ಕಾಲಿಟ್ಟು 14 ವರ್ಷಗಳಾದ ನಂತರ, ಸುದೀಪ್ ಅವರ ಹತ್ತು ಸಿನಿಮಾ ಒಂದೇ ವರ್ಷ ಬಿಡುಗಡೆಯಾಗಿತ್ತು. ಅವುಗಳಲ್ಲಿ ಕನ್ನಡ ಮಾತ್ರವಲ್ಲ, ಹಿಂದಿ, ತೆಲುಗು ಸಿನಿಮಾಗಳೂ ಇದ್ದವು. ತನ್ನ ಬಾಳಿಕೆಯ ಬಗ್ಗೆ ತನಗೇ ಅನುಮಾನ ಇಟ್ಟುಕೊಂಡ ನಟ, ನಿಜಕ್ಕೂ ಹೇಗೆ ತನ್ನ ಬೆಳವಣಿಗೆಯನ್ನು ತಾನೇ ನಿರ್ಧರಿಸಬಲ್ಲ ಎಂಬ ಆತ್ಮವಿಶ್ವಾಸಕ್ಕೆ ಸುದೀಪ್ ಸಾಕ್ಷಿ. ಸ್ವಾತಿಮುತ್ತು ಚಿತ್ರವನ್ನು ಪ್ರೇಕ್ಷಕ ಸ್ವೀಕರಿಸದೇ ಹೋದಾಗ, ಈ ಸಿನಿಮಾ ಸಹವಾಸ ಸಾಕು ಎಂಬಂತೆ ಕಣ್ತುಂಬಿಕೊಂಡಿದ್ದ ಅವರು, ನಂತರ ಒಂದು ಥರದ ವೈರಾಗ್ಯ ತಮ್ಮನ್ನು  ಆವರಿಸಿಕೊಂಡಿದೆಯೇನೋ ಎಂಬಂತೆ ಸಿನಿಮಾ ಮಾಡುತ್ತಾ ಬಂದರು. ಆ ನಿಷ್ಠೆಯೇ ಅವರನ್ನು 22 ವರ್ಷಗಳ ಕಾಲ ಎತ್ತರದಲ್ಲೇ ಇಟ್ಟಿದೆ. ನಂಬರ್‌'ಗೇಮ್‌'ಗಳಲ್ಲಿ ನಂಬಿಕೆ ಇಲ್ಲ ಅಂದವರು ಸುದೀಪ್. ಅವರು ಖ್ಯಾತಿಯ ಹಿಂದೆ ಬೀಳಲಿಲ್ಲ. ಹಟಕ್ಕೆ ಬಿದ್ದವರಂತೆ ಸಿನಿಮಾ ಮಾಡಲಿಲ್ಲ. ಈಗಲೂ ವರ್ಷಕ್ಕೆ ನಾಲ್ಕೋ ಐದೋ ಸಿನಿಮಾಗಳಲ್ಲಿ ನಟಿಸುವ ಅವಕಾಶ ಇದ್ದರೂ ಸುದೀಪ್ ನಿಧಾನವೇ ಪ್ರಧಾನ ಅನ್ನುತ್ತಾರೆ. ಬೇರೆ ಸಂತೋಷಗಳೂ ಬದುಕಿನಲ್ಲಿ ಇವೆ ಎಂಬಂತೆ ಜೀವಿಸುತ್ತಿದ್ದಾರೆ. ಚಿಕ್ಕ ಹುಡುಗರ ಜೊತೆ ಸಲ್ಲಾಪದಲ್ಲಿ ತೊಡಗುತ್ತಾರೆ.

ಮನೆಯಲ್ಲೊಂದಷ್ಟು ಗೆಳೆಯರನ್ನು ಕರೆಸಿ ಅಡುಗೆ ಮಾಡುತ್ತಾರೆ. ಬಿಗ್‌'ಬಾಸ್  ಮನೆಯ ಕೋಣೆಯಲ್ಲಿ ಅಡಗಿ ಕುಳಿತು ಕಣ್ಣಾಮುಚ್ಚಾಲೆ ಆಡುತ್ತಾರೆ. ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ನಟ ನಟಿಯರ ಜೊತೆ ನಿರ್ದೇಶಕರ ಜೊತೆ ಕೇಕು, ಪಲಾವ್

ಮಾಡುತ್ತಾ ರಂಜಿಸುತ್ತಾರೆ. ಹೀಗೆ ಸಿನಿಮಾವನ್ನು ಮೀರಿಯೂ ಸಂತೋಷ ಇದೆ ಅನ್ನುವುದನ್ನು ಕಂಡುಕೊಂಡಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಅವರು ಸ್ಟಾರ್‌ಗಿರಿಯನ್ನೂ ಮೀರಿ ಬೆಳೆದಿದ್ದಾರೆ ಎಂದು ಕಾಣುತ್ತದೆ. ಇವತ್ತು ಸುದೀಪ್ ಅತ್ಯುತ್ತಮ ಸಿನಿಮಾಗಳನ್ನು ನೋಡದೇ ಇರುವವರಿಗೂ ಸುದೀಪ್ ಚೆನ್ನಾಗಿಯೇ ಗೊತ್ತಿದೆ. ಅವರ ಪ್ರತಿಭೆಯೂ ಗೊತ್ತಿದೆ. ಅವರ ಸಿಟ್ಟು, ತಮಾಷೆ, ಗಾಂಭೀರ್ಯ, ಹುಡುಗಾಟ ಎಲ್ಲವೂ ಎಲ್ಲರಿಗೂ ಪರಿಚಿತ. ಅವರ ಮತ್ತೊಂದು ಆಯಾಮವನ್ನು ತೆರೆದಿಟ್ಟದ್ದು ಅವರು ನಡೆಸಿಕೊಟ್ಟ ಟೀವಿ ಷೋ.

ಅವರ ಅಭಿಮಾನಿಗಳ ಪಟ್ಟಿಯಲ್ಲಿ ಕೇವಲ ಸಿನಿಮಾ ಪ್ರೇಕ್ಷಕರು ಮಾತ್ರ ಇಲ್ಲ. ಪುಟ್ಟ ಹುಡುಗರು, ಟ್ವಿಟರ್‌ಗಳಲ್ಲಿ ಅವರ ಹೇಳಿಕೆಗಳನ್ನು ನೋಡುವವರು, ಗಂಭೀರವಾಗಿ ಅವರನ್ನು ಗಮನಿಸುವವರು- ಹೀಗೆ ಎಲ್ಲಾ ವರ್ಗ ಮತ್ತು ವಯಸ್ಸಿನವರೂ ಸುದೀಪ್‌ಗೆ ಆಪ್ತರೇ. ಅವರೆಲ್ಲ ಸುದೀಪ್ ಹೊಸ ಸಿನಿಮಾಗಳನ್ನು ನೋಡುತ್ತಾರೆ ಎಂದು ಹೇಳಲಾಗದು. ಆದರೆ ಸುದೀಪ್ ಬಗ್ಗೆ ಅವರ ಮೆಚ್ಚುಗೆ ಮಾತ್ರ ಅಬಾಧಿತ.

22 ನೇ ಸಿನಿಮಾ ವಾರ್ಷಿಕೋತ್ಸವ ಹೀಗೆ ಶ್ರೀಮಂತವಾಗುವುದು ಒಬ್ಬ ನಟನ ಪಾಲಿಗೆ ಸಂಭ್ರಮವೇ. ಆ ಸಂಭ್ರಮವನ್ನು ಸುದೀಪ್ ಹಂಚಿಕೊಂಡಿದ್ದಾರೆ.

ಸುದೀಪ್ ಅವರನ್ನು ಸಂಪರ್ಕಿಸಬೇಕು ಅನ್ನುವವರಿಗೆ ಅವರು  ಸುಲಭಕ್ಕೆ ಸಿಗುವುದಿಲ್ಲ. ಅವರ ಫೋನ್ ಸದಾ ಸ್ವಿಚಾಫ್ ಆಗಿರುತ್ತದೆ. ಹೀಗಾಗಿ ಅವರದು ತೆರೆದಷ್ಟೇ ಬಾಗಿಲು. ಸಾಮಾಜಿಕವಾಗಿ ಮಾತ್ರ ಅವರು ಲಭ್ಯ. ನೀವು ಅವರಿಗೆ ಟ್ವೀಟ್ ಮಾಡಬಹುದು, ಟ್ವೀಟಲ್ಲಿಯೇ ಗ್ರೀಟ್ ಮಾಡಬಹುದು. ಅವರು ಅಲ್ಲಿಯೇ ನಿಮಗೆ ಉತ್ತರಿಸುತ್ತಾರೆ. ಹೀಗಾಗಿ ಎಲ್ಲಾ ಅರ್ಥದಲ್ಲೂ ಅವರು ನಾಟ್ ರೀಚೆಬಲ್. ಅದು ಅವರ ಎತ್ತರ ಮತ್ತು ಉತ್ತರ.

-ಜೋಗಿ

 

Follow Us:
Download App:
  • android
  • ios