‘ಸು ಫ್ರಂ ಸೋ’ ಖ್ಯಾತಿಯ ಜೆ.ಪಿ. ತೂಮಿನಾಡ್ ಮಂಜು ವಾರಿಯರ್ ಅಭಿನಯದ ಮಲಯಾಳಂ ಸಿನಿಮಾ ‘ಹ್ಯಾಪಿ ಲೂಪ್’ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ನಾಲ್ಕು ಹೊಸ ಸಿನಿಮಾಗಳೂ ಅವರ ಕೈಯಲ್ಲಿವೆ.
‘ಸು ಫ್ರಂ ಸೋ’ ನಟ, ನಿರ್ದೇಶಕ ಜೆ.ಪಿ. ತೂಮಿನಾಡ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದ್ದಾರೆ. ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಹಾಗೂ ಮುಕೇಶ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ‘ವಾಳ 1’ ಖ್ಯಾತಿಯ ಆನಂದ್ ಮೆನನ್ ನಿರ್ದೇಶನದ ‘ಹ್ಯಾಪಿ ಲೂಪ್’ ಚಿತ್ರದಲ್ಲಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
‘ಹ್ಯಾಪಿ ಲೂಪ್’ನಲ್ಲಿ ಹೊಸ ಅವತಾರ!
ಈ ಬಗ್ಗೆ ಮಾತನಾಡಿದ ನಟ ಜೆ.ಪಿ. ತೂಮಿನಾಡ್, ‘ನಾನು ನಟಿಸಿದ ‘ಸು ಫ್ರಮ್ ಸೋ’ ಚಿತ್ರ ಮಲಯಾಳಂನಲ್ಲೂ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ನನಗೆ ಮಲಯಾಳಂ ಭಾಷೆ ಚೆನ್ನಾಗಿ ಅರ್ಥವಾಗುತ್ತದೆ, ಮಾತನಾಡಲೂ ಬರುತ್ತದೆ. ಆ ಚಿತ್ರದ ನಂತರ ಮಲಯಾಳಂ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಬಂದಿದ್ದವು. ಆದರೆ ಆನಂದ್ ಮೆನನ್ ಅವರ ನಿರ್ದೇಶನ, ಮಂಜು ವಾರಿಯರ್ ಅವರಂತಹ ಅದ್ಭುತ ಕಲಾವಿದರ ಉಪಸ್ಥಿತಿ ಮತ್ತು ಫೀಲ್-ಗುಡ್, ಕಾಮಿಡಿ ಹಾಗೂ ರೊಮ್ಯಾನ್ಸ್ ಅಂಶಗಳನ್ನೊಳಗೊಂಡ ಸೊಗಸಾದ ಕಥೆ ಇಷ್ಟವಾಗಿ ‘ಹ್ಯಾಪಿ ಲೂಪ್’ ಒಪ್ಪಿಕೊಂಡೆ.
ಚಿತ್ರದುದ್ದಕ್ಕೂ ಸಾಗುವ ಒಂದು ಪ್ರಮುಖ ಮತ್ತು ಇಂಪಾರ್ಟೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.‘ಮಲಯಾಳಂ ಚಿತ್ರರಂಗದ ಕೆಲಸದ ವೇಗ ಮತ್ತು ಬದ್ಧತೆ ಅದ್ಭುತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿಯಿದೆ. ‘ಕೆಜಿಎಫ್’, ‘ಕಾಂತಾರ’ದಂತಹ ಚಿತ್ರಗಳನ್ನು ಕೊಂಡಾಡುವ ಅವರು, ಕನ್ನಡದ ಹಳೆಯ ಕ್ಲಾಸಿಕ್ ಚಿತ್ರಗಳನ್ನೂ ಅಪಾರವಾಗಿ ಪ್ರೀತಿಸುತ್ತಾರೆ. ಪರಭಾಷೆಯ ಚಿತ್ರರಂಗದಲ್ಲೂ ನಮ್ಮ ಕನ್ನಡದ ಕಲಾವಿದರಿಗೆ ಸಿಗುತ್ತಿರುವ ಈ ಮನ್ನಣೆ ಖುಷಿ ತಂದಿದೆ’ ಎನ್ನುತ್ತಾರೆ ಜೆ.ಪಿ.
ನಾಲ್ಕು ಸಿನಿಮಾಗಳ ಲೈನ್‌ಅಪ್
ಕನ್ನಡದಲ್ಲೂ ಜೆ.ಪಿ. ತೂಮಿನಾಡ್ ಬತ್ತಳಿಕೆಯಲ್ಲಿ 4 ಚಿತ್ರಗಳಿವೆ. ‘ನಾನು ನಟನೆಯ ಜೊತೆಗೆ ಕಥೆ-ಚಿತ್ರಕಥೆ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಸದ್ಯ ಕನ್ನಡದಲ್ಲಿ ನಾಯಕನಾಗಿ ನಾಲ್ಕು ಸಿನಿಮಾಗಳು ಲೈನ್‌ಅಪ್‌ನಲ್ಲಿದ್ದು, ಎಲ್ಲವೂ ವಿಭಿನ್ನ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿವೆ. ಶೀಘ್ರದಲ್ಲೇ ಅವುಗಳ ಅಧಿಕೃತ ಘೋಷಣೆಯಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.


