ಈ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡು ತ್ತಿದ್ದಾರೆ. ಮಹೇಶ್ ‘ಅಯೋಗ್ಯ’ ಚಿತ್ರದ ನಂತರ, ಉಮಾ ಪತಿ ಅವರು ‘ಹೆಬ್ಬುಲಿ’ ಹಾಗೂ ‘ಒಂದಲ್ಲಾ ಎರಡಲ್ಲಾ’ ಚಿತ್ರಗಳ ನಂತರ ‘ಮದಗಜ’ನಿಗೆ ಕೈ ಹಾಕಿದ್ದಾರೆ. ಇದರ ಜತೆಗೇ ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ.

ದರ್ಶನ್ ಕೊಡಿಸಿದ ಟೈಟಲ್ ಮದಗಜ:

‘ಮದಗಜ’ ಸಿನಿಮಾ ಸೆಟ್ಟೇರಿದಾಗ ಚಿತ್ರದ ಟೈಟಲ್‌ಗಾಗಿಯೇ ಸಾಕಷ್ಟು ವಿವಾದ ನಡೆದಿತ್ತು. ಈ ಶೀರ್ಷಿಕೆ ನಟ ದರ್ಶನ್ ಅವರಿಗಾಗಿಯೇ ಎಂ ಜಿ ರಾಮಮೂರ್ತಿ ಅವರು ನೋಂದಣಿ ಮಾಡಿಕೊಂಡಿದ್ದರು. ಈ ವಿಷಯ ಗೊತ್ತಿಲ್ಲದೆ ಚಿತ್ರದ ಹೆಸರನ್ನು ಶ್ರೀಮುರಳಿ ನಟನೆಯಲ್ಲಿ ನಿರ್ದೇಶಕ ಮಹೇಶ್ ಘೋಷಣೆ ಮಾಡಿದ್ದರು. ಈ ವಿಚಾರ ದರ್ಶನ್ವರೆಗೂ ಹೋದ ಮೇಲೆ ‘ಶ್ರೀಮುರಳಿ ಅವರು ನನ್ನ ಹಾಗೆ ಒಬ್ಬ ಕಲಾವಿದರು. ಈಗಾಗಲೇ ಅವರು ಹೆಸರು ಅನೌನ್ಸ್ ಮಾಡಿಕೊಂಡಿದ್ದಾರೆ. ಅವರಿಗೇ ಹೆಸರು ಬಿಟ್ಟುಕೊಡಿ’ ಎಂದು ಸ್ವತಃ ದರ್ಶನ್ ಅವರೇ ಎಂ ಜಿ ರಾಮಮೂರ್ತಿ ಅವರಿಗೆ ಸೂಚಿದ ಮೇಲೆ ವಿವಾದ ತಣ್ಣಗಾಯಿತು. ಈಗ ವಿಶೇಷ ಅಂದರೆ ಚಿತ್ರದ ಫಸ್ಟ್ ಲುಕ್ ಅನ್ನು ನಟ ದರ್ಶನ್ ಅವರೇ ಬಿಡುಗಡೆ ಮಾಡುವ ಮೂಲಕ ಸ್ನೇಹ ಮೆರೆದಿದ್ದಾರೆ.

ನಾರ್ವೆ, ಜಾರ್ಜಿಯಾ ಚಿತ್ರೀಕರಣ:

ಜನವರಿ 15ಕ್ಕೆ ಮುಹೂರ್ತ, ಫೆಬ್ರವರಿ ಕೊನೆ ಅಥವಾ ಮಾರ್ಚ್ ತಿಂಗಳಿನಿಂದ ‘ಮದಗಜ’ನಿಗೆ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ನಾರ್ವೆ ಹಾಗೂ ಜಾರ್ಜಿಯಾ ದೇಶದಲ್ಲೇ ಶೇ.40 ಭಾಗ ಚಿತ್ರೀಕರಣ ಮಾಡುವ ಪ್ಲಾನ್ ನಿರ್ದೇಶಕರದ್ದು. ಈಗಾಗಲೇ ಆ ನಿಟ್ಟಿನಲ್ಲಿ ಮಹೇಶ್ ಕುಮಾರ್ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಒಟ್ಟು ಚಿತ್ರದ ಶೂಟಿಂಗ್ ಶೆಡ್ಯೂಲ್ 80 ದಿನ.

ಜಗಪತಿ, ರವಿಶಂಕರ್ ವಿಲನ್:

ಮಹೇಶ್ ಕುಮಾರ್ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಮದಗಜ’ನಿಗೆ ಶ್ರೀಶ ಕೂದುವಳ್ಳಿ ಕ್ಯಾಮೆರಾ, ಅರ್ಜುನ್ ಜನ್ಯ ಸಂಗೀತ ಹಾಗೂ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ನೀಡಲಿದ್ದಾರೆ. ಇನ್ನೂ ಚಿತ್ರದಲ್ಲಿ ಇಬ್ಬರು ಖಳನಟರು ನಟಿಸುತ್ತಿದ್ದಾರೆ. ಈ ಜಾಗಕ್ಕೆ ಈಗಾಗಲೇ ರವಿಶಂಕರ್ ಹಾಗೂ ತೆಲುಗಿನ ಜಗಪತಿ ಬಾಬು ಆಯ್ಕೆ ಆಗಿದ್ದಾರೆ. ಇನ್ನೂ ಚಿತ್ರದ ನಾಯಕಿ ಯಾರೆಂಬುದು ಸದ್ಯ ಬಾಕಿ ಉಳಿದಿದೆ. ‘ಪರಭಾಷೆಯ ನಟಿಯನ್ನು ಕರೆತರಲ್ಲ. ಖಂಡಿತ ಕನ್ನಡದ ಬಹು ಬೇಡಿಕೆಯ ನಟಿಯೇ ನಮ್ಮ ಚಿತ್ರದ ನಾಯಕಿ ಆಗಲಿದ್ದಾರೆ’ ಎನ್ನುತ್ತಾರೆ ಮಹೇಶ್ ಕುಮಾರ್.  

ಭರಾಟೆಯ ಟೀಸರ್ ಬಂತು
ಮದಗಜನ ಜತೆಗೆ ‘ಭರಾಟೆ’ಯ ಟೀಸರ್ ಕೂಡ ಬಿಡುಗಡೆಯಾಗಿದೆ. ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ರೀಮುರಳಿ ನಾಯಕ, ಶ್ರೀಲೀಲಾ ನಾಯಕಿ. ಈ ಚಿತ್ರದ ಟೀಸರ್ ಅನ್ನೂ ನಟ ದರ್ಶನ್ ಬಿಡುಗಡೆ ಮಾಡಿದರು. ಅಲ್ಲಿಗೆ ಶ್ರೀಮುರಳಿಯ ಡಬಲ್ ಧಮಾಕ ಸಂಭ್ರಮಕ್ಕೆ ನಟ ದರ್ಶನ್ ಅವರೇ ಸಾರಥಿ ಆದರು. ‘ಇದು ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ನೀಡುತ್ತಿರುವ ಗಿಫ್ಟ್. ಟೀಸರ್‌ನಷ್ಟೆ ಸಿನಿಮಾ ಕೂಡ ತುಂಬಾ ಚೆನ್ನಾಗಿ ಮೂಡಿ ಬರಲಿದೆ. ದೊಡ್ಡ ಕ್ಯಾನ್ವಾಸ್‌ನ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.