Asianet Suvarna News Asianet Suvarna News

ನಮ್ಮದು ಹತ್ತು ವರ್ಷದ ಸಂಬಂಧ: ಚಿರು ಜೊತೆಗಿನ ಲವ್ ಸ್ಟೋರಿ ಬಿಚ್ಚಿಟ್ಟ ಮೇಘನಾ ರಾಜ್

ಚಿರಂಜೀವಿ ಸರ್ಜಾ- ಮೇಘನಾ ರಾಜ್ ನಿಶ್ಚಿತಾರ್ಥ ಬಹಳ ದಿನಗಳಿಂದ ಸುದ್ದಿ ಮಾಡುತ್ತಿದೆ. ವಾರದ ಹಿಂದೆ ಮೇಘನಾ ರಾಜ್ ತಂದೆ ಸುಂದರ್ ರಾಜ್ ನಿಶ್ಚಿತಾರ್ಥ ಸುದ್ದಿಯನ್ನು ನಿರಾಕರಿಸಿ ಮಾಧ್ಯಮದ ದಾರಿ ತಪ್ಪಿಸಿದ್ದರು. ಆದರೆ ಈಗ ಎಲ್ಲಕ್ಕೂ ಉತ್ತರ ಸಿಕ್ಕಿದೆ. ಮೇಘನಾ ರಾಜ್ ತಮ್ಮ ಪ್ರೇಮಕತೆ ಹೇಳಿದ್ದಾರೆ.

Special interview Of Meghana Raj

ಚಿರಂಜೀವಿ ಸರ್ಜಾ- ಮೇಘನಾ ರಾಜ್ ನಿಶ್ಚಿತಾರ್ಥ ಬಹಳ ದಿನಗಳಿಂದ ಸುದ್ದಿ ಮಾಡುತ್ತಿದೆ. ವಾರದ ಹಿಂದೆ ಮೇಘನಾ ರಾಜ್ ತಂದೆ ಸುಂದರ್ ರಾಜ್ ನಿಶ್ಚಿತಾರ್ಥ ಸುದ್ದಿಯನ್ನು ನಿರಾಕರಿಸಿ ಮಾಧ್ಯಮದ ದಾರಿ ತಪ್ಪಿಸಿದ್ದರು. ಆದರೆ ಈಗ ಎಲ್ಲಕ್ಕೂ ಉತ್ತರ ಸಿಕ್ಕಿದೆ. ಮೇಘನಾ ರಾಜ್ ತಮ್ಮ ಪ್ರೇಮಕತೆ ಹೇಳಿದ್ದಾರೆ.

1.ನೀವು ಮತ್ತು ಚಿರಂಜೀವಿ ಸರ್ಜಾ ಪ್ರೇಮಿಗಳಾ?

ನಮ್ಮದು ಹತ್ತು ವರ್ಷದ ಸಂಬಂಧ. ಮೊದೆಲೆಲ್ಲಾ ನಿನ್ನ ಬೆಸ್ಟ್ ಫ್ರೆಂಡ್ ಯಾರು ಅಂತ ಯಾರಾದರೂ ಕೇಳಿದರೆ ನಾನು ಹೇಳುತ್ತಿದ್ದ ಹೆಸರು ಚಿರು. ನಾವಿಬ್ಬರೂ ಎಷ್ಟು ಒಳ್ಳೆಯ ಫ್ರೆಂಡ್ಸ್ ಆಗಿದ್ವಿ ಅಂದ್ರೆ ಯಾವಾಗ ನಾವು ಪ್ರೀತಿಯಲ್ಲಿ ಬಿದ್ವಿ ಅಂತಲೇ ಗೊತ್ತಾಗಲಿಲ್ಲ. ನನಗೆ ನೀನು, ನಿನಗೆ ನಾನು ಅನ್ನೋ ಭಾವ ನಾವು ಪರಸ್ಪರ ಹೇಳದೆಯೇ ನಮ್ಮಲ್ಲಿ ಹುಟ್ಟಿಕೊಂಡಿತು. ಚಿರು ಇದ್ದರೆ ನಾನು ತುಂಬಾ ಕಂರ್ಟೆಬಲ್ ಆಗಿ ಇರುತ್ತೇನೆ. ಹಾಗಾಗಿ ನಮ್ಮ ಕುಟುಂಬದವರು ನಮ್ಮನ್ನು ನೋಡಿಯೇ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದು ಮಾತಾಡಿಕೊಂಡಿದ್ದರು. ಈಗ ಇನ್ನೊಂದು ಹೆಜ್ಜೆ ಮುಂದಿಡುತ್ತಿದ್ದೇವೆ.

2. ನಿಶ್ಚಿತಾರ್ಥ ಆಗುತ್ತಿರುವುದು ನಿಜ..

ಹೌದು. ಅಕ್ಟೋಬರ್ 22ಕ್ಕೆ. ಬೆಂಗಳೂರು ಲೀಲಾ ಪ್ಯಾಲೇಸಿನಲ್ಲಿ ನಮ್ಮ ನಿಶ್ಚಿತಾರ್ಥ.

3. ಇಷ್ಟು ದಿನ ಕೇಳಿದವರಿಗೆಲ್ಲಾ ಇಲ್ಲ ಅಂತಲೇ ಹೇಳುತ್ತಿದ್ದಿರಿ ಯಾಕೆ?

ಇಷ್ಟು ದಿನ ಕೇಳಿದವರೆಲ್ಲಾ ನೀವು ಚಿರು ಜೊತೆ ಡೇಟ್ ಮಾಡುತ್ತಿದ್ದೀರಾ ಅಂತಲೇ ಕೇಳುತ್ತಿದ್ದರು. ಡೇಟಿಂಗ್ ಅಂದರೆ ಸುತ್ತಾಡುವುದು ಅಷ್ಟೇ. ನಾವು ಡೇಟ್ ಮಾಡುತ್ತಿರಲಿಲ್ಲ. ನಮ್ಮ ಸಂಬಂಧವೇ ಬೇರೆ. ಈ ಸಂಬಂ‘, ಬಾಂಧವ್ಯ ಡೇಟಿಂಗ್ ಅಷ್ಟೇ ಅಲ್ಲ. ಅದಕ್ಕಾಗಿ ಇಲ್ಲ ಅನ್ನುತ್ತಿದ್ದೆ. ನೀವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಕೇಳಿದ್ದರೆ ಹೌದು ಅನ್ನುತ್ತಿದ್ದೆ. ನಮಗೆ ಈ ಸಂಬಂಧವನ್ನು ಮುಚ್ಚಿಡುವ ಅವಶ್ಯಕತೆ ಇರಲಿಲ್ಲ. ಆದರೆ ಅದನ್ನು ಜನರಿಗೆ ಹೇಳುವ ಸಂದರ್ಭ ಕೂಡಿ ಬಂದಿರಲಿಲ್ಲ. ನಾವಿಬ್ಬರೂ ಕಲಾವಿದರಾದ್ದರಿಂದ ಜನರಿಗೆ ಕುತೂಹಲ ಇರುತ್ತದೆ. ಹಾಗಾಗಿ ಮಾತಾಡಿಕೊಳ್ಳುತ್ತಾರೆ. ನಾವೂ ಹೇಳುವಾಗ ಸ್ವಲ್ಪ ತಡ ಮಾಡಿಬಿಟ್ವಿ. ಸೋ ಬೇಜಾರಿಲ್ಲ.

4. ಕಳೆದವಾರ ನಿಮ್ಮ ತಂದೆಯ ಬಳಿ ಕೇಳಿದಾಗ ಅವರು ಇಲ್ಲ ಅಂತಲೇ ಹೇಳಿದ್ದರು..

ನಿಶ್ಚಿತಾರ್ಥ ಫಿಕ್ಸ್ ಆಗಿದ್ದು ಸಡನ್ ಆಗಿ. ಅಲ್ಲದೇ ಇದು ತುಂಬಾ ಖಾಸಗಿ ವಿಷಯ ಅಲ್ವಾ. ಅದನ್ನು ಹೇಳುವುದಕ್ಕೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು. ಚಿರು ಹುಟ್ಟಿದ ಹಬ್ಬ ಇತ್ತಲ್ವಾ ಕಳೆದವಾರ. ಅವತ್ತು ಚಿರು ವಿಶೇಷ ದಿನ. ಅವತ್ತು ಅವರು ವಿಷಯ ಹೇಳಿದರು.

5. ನಿಮ್ಮ ಫ್ರೆಂಡ್'ಶಿಪ್ ಶುರುವಾಗಿದ್ದು ಹೇಗೆ?

ಹತ್ತು ವರ್ಷದ ಹಿಂದೆ. ಒಂದು ಕಾರ್ಯಕ್ರಮ. ಅಲ್ಲಿಯವರೆಗೆ ನನಗೆ ಚಿರು ಬಗ್ಗೆ ಗೊತ್ತಿತ್ತು. ಚಿರುಗೆ ನನ್ನ ಬಗ್ಗೆ ಗೊತ್ತಿತ್ತು. ಅವತ್ತು ತಾಯಿ ನನಗೆ ಚಿರುನ ಪರಿಚಯ ಮಾಡಿಸಿದರು. ಅರ್ಜುನ್ ಅಂಕಲ್ ತಂಗಿ ಮಗ ಅಂತ. ಅವತ್ತು ನಾವು ಮಾತಾಡಿಕೊಂಡು ಫ್ರೆಂಡ್ಸ್ ಆದೆವು.

6. ಚಿರು ಯಾಕಿಷ್ಟ ನಿಮಗೆ?

ತುಂಬಾ ನಾಚಿಕೆ ಸ್ವಭಾವದ ಕರುಣಾಮಯಿ ಅವರು. ನೋಡೋಕೆ ರಫ್ ಅನ್ನಿಸುತ್ತದೆ. ಆದರೆ ಮನಸ್ಸು ಮೃದು. ಯಾರೇ ಹೆಲ್ಪ್ ಕೇಳಿದರೂ ಇಲ್ಲ ಅನ್ನೋರಲ್ಲ.

7. ಜೊತೆಗಿದ್ದ ಕ್ಷಣಗಳು ಹೇಗಿರುತ್ತವೆ?

ನಾವು ಸಿಕ್ಕಾಪಟ್ಟೆ ಕಿತ್ತಾಡುತ್ತೇವೆ. ಎಷ್ಟು ಜಗಳಾಡುತ್ತೇವೆ ಅಂದ್ರೆ ಹೊಡೆಯುವುದಷ್ಟೇ ಬಾಕಿ. ನಮ್ಮ ಮನೆಯಲ್ಲೆಲ್ಲಾ ಬೈಯುತ್ತಿರುತ್ತಾರೆ.

8. ಯಾರು ಕೋಪಿಸಿಕೊಳ್ಳುವುದು ಮೊದಲು?

ನಾನೇ. ಅವರು ಯಾವಾಗಲೂ ಕೂಲ್ ಆಗಿರುತ್ತಾರೆ. ಆದರೆ ನನಗೆ ಕೋಪ ಬಂದರೆ ಜಗಳಾಡಲೇಬೇಕು. ಅದಕ್ಕೆ ಅವರು ತನ್ನಷ್ಟಕ್ಕೆ ಕೋಪ ಇಳಿಯಲು ಬಿಡುತ್ತಾರೆ.

9. ಒಂದು ಮರೆಯಲಾಗದ ಘಟನೆ..

ಅದೊಂದು ದಿನ ಅಮ್ಮನಿಗೆ ಹುಷಾರಿರಲಿಲ್ಲ. ರಾತ್ರಿಯಾಗಿತ್ತು. ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಾದ ಸಂದರ್ಭ. ಅಪ್ಪ ಬೇರೆ ಊರಲ್ಲಿ ಇರಲಿಲ್ಲ. ನಾನೊಬ್ಬಳೇ ಇದ್ದೆ. ಚಿರು ಬೇರೆ ಸುಮಾರು 200 ಕಿಮೀ ದೂರದಲ್ಲಿ ಇದ್ದರು. ಅವರ ಕೆಲಸದ ನಿಮಿತ್ತ. ಮೊದಲು ಅಪ್ಪನಿಗೆ ಕಾಲ್ ಮಾಡಿದೆ. ನಂತರ ನನಗೇ ಗೊತ್ತೇ ಇಲ್ಲದೆ ಚಿರುಗೆ ಕಾಲ್ ಮಾಡಿದೆ. ಚಿರು ನಂಗೊತ್ತಿಲ್ಲ, ನೀವಿರಬೇಕು ಇಲ್ಲಿ ಅಂದೆ. ಕೆಲವೇ ಗಂಟೆಯಲ್ಲಿ ಚಿರು ನನ್ನ ಜೊತೆ ಇದ್ದರು. ಅವತ್ತಿಡೀ ಅಮ್ಮನನ್ನು ನೋಡಿಕೊಂಡರು. ಒಂದು ವೇಳೆ ಅವರು ಬರದಿದ್ದರೆ ನನಗೆ ಬಹಳ ಕಷ್ಟ ಆಗುತ್ತಿತ್ತು. ಆ ದಿನವನ್ನು ನಾನು ಯಾವತ್ತೂ ಮರೆಯಲಾರೆ.

10. ಯಾವಾಗ ಮದುವೆ?

ಸದ್ಯಕ್ಕಂತೂ ಇಲ್ಲ. ನಾವು ನಿಶ್ಚಿತಾರ್ಥ ಆಗಬೇಕು ಅಂತ ನಿರ್ಧಾರ ಮಾಡುವ ಮೊದಲೇ ಬೇರೆಯವರು ನಿರ್ಧರಿಸಿದ್ದರು. ಈಗ ಮದುವೆ ದಿನ ಕೂಡ ಡಿಸೈಡ್ ಮಾಡುತ್ತಿದ್ದಾರೆ. ಆದರೆ ನಾವಿನ್ನೂ ಪ್ಲಾನ್ ಮಾಡಿಲ್ಲ. ಸದ್ಯ ನಿಶ್ಚಿತಾರ್ಥದ ತಯಾರಿ ನಡೆಯುತ್ತಿದೆ. ಮದುವೆ ನಿರ್ಧಾರವನ್ನು ಹಿರಿಯರಿಗೆ ಬಿಟ್ಟಿದ್ದೇವೆ. ಆ ಬಗ್ಗೆ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು. ಜಾಸ್ತಿ ತಲೆ ಕೆಡಿಸಿಕೊಂಡರು ಸೌಂದರ್ಯ ಹಾಳಾಗುತ್ತದೆ. ಮದುವೆ ಆಗುವಾಗ ಎಲ್ಲರಿಗೂ ಹೇಳುತ್ತೇವೆ. ಈಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೇವೆ. ಎಲ್ಲರೂ ಆಶೀರ್ವದಿಸಿ.

-ರಾಜೇಶ್ ಶೆಟ್ಟಿ, ಕನ್ನಡಪ್ರಭ

Latest Videos
Follow Us:
Download App:
  • android
  • ios