ಮಗು ಬೆಳೆಯುತ್ತಾ ತಂದೆಯ ಹಾಗೋ, ತಾಯಿಯ ಹಾಗೋ, ತಾತ, ಅಜ್ಜಿಯ ಹಾಗೋ ಹಾವ ಭಾವ ಪ್ರದರ್ಶನ ಮಾಡಿದರೆ ಅದನ್ನು ನೋಡುವುದೇ ಚೆಂದ. ಇವ ನೋಡು ತೇಟ್‌ ತಾತನ ರೀತಿಯೇ, ಅಪ್ಪನ ಹಾಗೆ ನಡೆ. ಇವಳದ್ದು ಸೇಮ್‌ ಅಮ್ಮನ ಹಾಗೆಯೇ ಮೂಗು. ಅಪ್ಪನದ್ದೇ ರೂಪು ಇವಳಿಗೆ... ಹೀಗೆ ವಂಶವೃಕ್ಷದೊಂದಿಗೆ ಹೋಲಿಕೆ ಮಾಡಿಕೊಂಡು ಸಂಭ್ರವನ್ನು ಹಂಚುವ ಆಸೆ ಎಲ್ಲರಿಗೂ ಇರುತ್ತೆ.

ಇದು ಸೂಪರ್‌ಸ್ಟಾರ್‌ ರಜನಿಕಾಂತ್‌ ಮಗಳು ಸೌಂದರ್ಯ ರಜನಿಕಾಂತ್‌ಗೂ ಅನ್ವಯ. ಯಾಕೆಂದರೆ ತಂದೆ ರಜನಿಕಾಂತ್‌ ‘ಪೆಟ್ಟ’ ಸಿನಿಮಾದ ಪೋಸ್ಟರ್‌ನಲ್ಲಿ ನಿಂತಿರುವ ಭಂಗಿಯನ್ನೇ ಹೋಲುವ ಹಾಗೆ ನಾಲ್ಕು ವರ್ಷದ ಮಗ ವೇದ ನಿಂತಿರುವುದು ಸೌಂದರ್ಯ ರಜನಿಕಾಂತ್‌ ಸಂತೋಷವನ್ನು ನೂರುಪಟ್ಟು ಹೆಚ್ಚಿಸಿದೆ. 

 

‘ಪೆಟ್ಟ’ ಸಿನಿಮಾದ ಪೋಸ್ಟರ್‌ನಲ್ಲಿ ರಜನಿ ಎರಡೂ ಕೈಗಳನ್ನು ಪ್ಯಾಂಟ್‌ ಜೇಬಿನೊಳಗೆ ಇಳಿಸಿ, ಕಣ್ಣಿಗೊಂದು ಕೂಲಿಂಗ್‌ ಗ್ಲಾಸ್‌ ಹಾಕಿ ಘನ ಗಾಂಭೀರ್ಯದಲ್ಲಿ ತಲೆ ಎತ್ತಿ ನಿಂತಿರುವಂತೆಯೇ ಸೌಂದರ್ಯ ಮಗ ವೇದ ಮನೆಯ ಕಿಟಕಿ ಕಡೆಗೆ ಮುಖ ಮಾಡಿ ಥೇಟ್‌ ತಾತನ ರೀತಿಯೇ ಜೇಬಿಗೆ ಕೈ ಹಾಕಿ ತಲೆ ಎತ್ತಿ ನಿಂತಿದ್ದಾನೆ. ಇದನ್ನು ಫೋಟೋದಲ್ಲಿ ಸೆರೆ ಹಿಡಿದಿರುವ ತಾಯಿ ಸೌಂದರ್ಯ ತನ್ನ ಮಗನನ್ನು ತಂದೆಯೊಂದಿಗೆ ಸಮೀಕರಿಸಿ ಟ್ವೀಟ್‌ ಮಾಡಿದ್ದಾರೆ. ಇದನ್ನು ಕಂಡ ರಜನಿ ಅಭಿಮಾನಿಗಳು ಮರಿ ತಲೈವಾನನ್ನು ಕಂಡು ಹಿರಿ ಹಿರಿ ಹಿಗ್ಗಿದ್ದಾರೆ.