ನಿರ್ದೇಶಕ ದಿನೇಶ್‌ ಕಂಪ್ಲಿ ಆಯ್ಕೆ ಮಾಡಿಕೊಂಡಿದ್ದು ತೀರಾ ತೆಳುವಾದ ಕತೆ. ಯಾವುದೇ ಆ್ಯಂಗಲ್‌'ನಲ್ಲೂ ಈ ಕತೆಗೆ ಪ್ರೇಕ್ಷಕರನ್ನು ಆಕರ್ಷಿಸುವ ಶಕ್ತಿ ಇಲ್ಲ. ಅಸಲಿಗೆ ಆ ಟೈಟಲ್‌'ಗೆ ಎಲ್ಲೂ ಹೋಲಿಕೆ ಆಗುವುದಿಲ್ಲ. ಕತೆಯ ನಿರೂಪಣೆ ಕೂಡ ಅತ್ಯಂತ ಕಳಪೆ. ಹೀಗಾಗಿ ಕತೆಯ ಯಾವುದೇ ಸಂಗತಿಗಳು ಪ್ರೇಕ್ಷಕರಲ್ಲಿ ಅಚ್ಚರಿ ತರಿಸುವುದಿಲ್ಲ.
ಚಿತ್ರ: ಸೋಜಿಗ
ಭಾಷೆ: ಕನ್ನಡ
ತಾರಾಗಣ: ವಿಕ್ರಾಂತ್ ಹೆಗಡೆ, ಅಖಿಲಾ ಪ್ರಕಾಶ್
ನಿರ್ದೇಶನ: ದಿನೇಶ್ ಕಂಪ್ಲಿ
ಛಾಯಾಗ್ರಹಣ,
ಸಂಗೀತ: ಸುನದಾ ಗೌತಮ್
ನಿರ್ಮಾಣ: ಎನ್.ಎಸ್. ಹೆಗಡೆ
ರೇಟಿಂಗ್: **
ಸೋಜಿಗದ ಮತ್ತೊಂದು ಅರ್ಥ ಅಚ್ಚರಿ. ಈ ಸೋಜಿಗದಲ್ಲಿ ಅಚ್ಚರಿಯೇ ಇಲ್ಲ ಎನ್ನುವುದೊಂದು ತಮಾಷೆ! ಅಚ್ಚರಿ ಘಟನೆಗಳ ಕತೆಯನ್ನು ಮಿಕ್ಕಿ ಮೌಸ್ ಶೈಲಿಯಲ್ಲಿ ಹೇಗೆ ಕಾಮಿಡಿಯಾಗಿಯೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ದಿನೇಶ್ ಕಂಪ್ಲಿ. ನಾಯಕನ ಬದುಕಿನಲ್ಲಿ ಸಂಭವಿಸುವ ಅಚ್ಚರಿ ಘಟನೆಗಳನ್ನು ಹೇಳುವುದಕ್ಕೆ ಅವರು ‘ಸೋಜಿಗ' ಶೀರ್ಷಿಕೆಯನ್ನು ಆರಿಸಿಕೊಂಡಿದ್ದರೂ, ಇಲ್ಲಿ ಅಂಥ ‘ವ್ಹಾವ್' ಎನ್ನುವಂಥ ಸನ್ನಿವೇಶಗಳಿಲ್ಲ.
ದೊಡ್ಡ ಉದ್ಯಮಿ ಜಗನ್ನಾಥ್ ರಾವ್ ಪುತ್ರ ವಿಕ್ಕಿ ಅಲಿಯಾಸ್ ವಿಕ್ರಾಂತ್ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಸ್ವದೇಶಕ್ಕೆ ವಾಪಸಾದ ನಂತರ ನಡೆಯುವ ಕತೆಯಿದು. ಪುತ್ರ ವಿಕ್ಕಿ ವಿದೇಶದಲ್ಲಿ ಎಂಬಿಎ ಪದವಿ ಮುಗಿಸಿಕೊಂಡು ಬಂದಿದ್ದಾನೆ ಎನ್ನುವ ವಿಶ್ವಾಸ ತಂದೆ ಜಗನ್ನಾಥ್ ರಾವ್ ಅವರದ್ದು. ಅದೇ ನಂಬಿಕೆಯಲ್ಲಿ ತನ್ನ ಇಡೀ ಉದ್ಯಮದ ಉಸ್ತುವಾರಿಯನ್ನು ಪುತ್ರನ ಹೆಗಲಿಗೆ ವಹಿಸುವಾಗ ವಿಕ್ಕಿಯ ವಿದ್ಯಾಭ್ಯಾಸದ ನಿಜ ಸ್ಥಿತಿ ಬಯಲಾಗುತ್ತದೆ. ‘ನಮ್ಮ ಕನಸು, ನಿರೀಕ್ಷೆ ಹಾಗೂ ಆಕಾಂಕ್ಷೆಗಳನ್ನು ನುಚ್ಚು ನೂರು ಮಾಡಿದ್ದೇನೆ. ನೀವಂದುಕೊಂಡಂತೆ ಓದಲಾಗದೆ, ನನ್ನ ಹೃದಯ ಹೇಳಿದ್ದನ್ನು ಮಾಡಿದ್ದೇನೆ' ಎನ್ನುವ ವಿಕ್ಕಿ ಮಾತು ಜಗನ್ನಾಥ್'ರಾವ್ ಅವರಿಗೆ ಸಿಟ್ಟು ತರಿಸುತ್ತದೆ. ಪ್ರತಿಷ್ಠೆಗೆ ಬಿದ್ದು, ಮಗನನ್ನು ಮನೆಯಿಂದ ಹೊರ ಹಾಕುತ್ತಾರೆ. ಅಲ್ಲಿಂದ ಕತೆಗೆ ತಿರುವು. ನಾಯಕಿ ಶ್ರಾವ್ಯಾಳ ಅಣ್ಣನ ಕೊಲೆ ಆಗುತ್ತದೆ. ಮಾರ್ಷಲ್ ಆರ್ಟ್ಸ್'ನಲ್ಲಿ ಪರಿಣತಿ ಪಡೆದವರು ‘ನಾಕೌಟ್ ಕಿಕ್' ಮೂಲಕ ಆತನನ್ನು ಸಾಯಿಸಿರುತ್ತಾರೆ. ಆ ಕೊಲೆ ಪ್ರಕರಣದ ಆರೋಪ ವಿಕ್ಕಿ ಮೇಲೆ ಬರುತ್ತದೆ. ಆದರೆ, ವಿಕ್ಕಿ ಜಾಗದಲ್ಲಿ ಇನ್ನೊಬ್ಬ ಕೊಲೆ ಮಾಡಿರುವ ಶಂಕೆ ಪೊಲೀಸರದ್ದು. ಮುಂದೇನಾಗುತ್ತೆ ಎನ್ನುವುದು ಚಿತ್ರದ ಒನ್'ಲೈನ್ ಸ್ಟೋರಿ.
ನಿರ್ದೇಶಕ ದಿನೇಶ್ ಕಂಪ್ಲಿ ಆಯ್ಕೆ ಮಾಡಿಕೊಂಡಿದ್ದು ತೀರಾ ತೆಳುವಾದ ಕತೆ. ಯಾವುದೇ ಆ್ಯಂಗಲ್'ನಲ್ಲೂ ಈ ಕತೆಗೆ ಪ್ರೇಕ್ಷಕರನ್ನು ಆಕರ್ಷಿಸುವ ಶಕ್ತಿ ಇಲ್ಲ. ಅಸಲಿಗೆ ಆ ಟೈಟಲ್'ಗೆ ಎಲ್ಲೂ ಹೋಲಿಕೆ ಆಗುವುದಿಲ್ಲ. ಕತೆಯ ನಿರೂಪಣೆ ಕೂಡ ಅತ್ಯಂತ ಕಳಪೆ. ಹೀಗಾಗಿ ಕತೆಯ ಯಾವುದೇ ಸಂಗತಿಗಳು ಪ್ರೇಕ್ಷಕರಲ್ಲಿ ಅಚ್ಚರಿ ತರಿಸುವುದಿಲ್ಲ. ಸುನದಾ ಗೌತಮ್ರ ಸಂಗೀತ ಬ್ಯುಲ್ಡಪ್ಗೆ ಸೀಮಿತವಾಗಿದೆ. ಕಿವಿ ಕಚ್ಚುವ ಹಾಗೆ ಅಬ್ಬರಿಸುತ್ತದೆ. ಇನ್ನು ಅವರದ್ದೇ ಕ್ಯಾಮೆರಾದಲ್ಲಿ ವಿಶೇಷತೆ ಎನ್ನುವುದನ್ನು ಕಾಣಲಾಗದು. ಅಲ್ಲಲ್ಲಿ ಅವರ ಕ್ಯಾಮೆರಾದ ನಡುಕ, ಪರದೆಯನ್ನೇ ಅಲುಗಾಡಿಸುತ್ತದೆ.
ನಾಯಕನಾಗಿ ವಿಕ್ರಾಂತ್, ನಾಯಕಿ ಅಖಿಲಾ ಪ್ರಕಾಶ್ ಒಳಗೊಂಡಂತೆ ಅಭಿನಯದಲ್ಲಿ ಯಾರೂ ಪ್ರೇಕ್ಷಕರ ಮನದಲ್ಲಿ ಉಳಿಯುವುದಿಲ್ಲ. ‘ನಾನು ಜಾಕೀಚಾನ್ ಅಭಿಮಾನಿ' ಎಂದುಕೊಂಡೇ ಈ ಚಿತ್ರದ ಸಾಹಸಗಳ ಬಗ್ಗೆ ವಿಕ್ರಾಂತ್ ಹೇಳಿಕೊಂಡಿದ್ದು ಓವರ್ ಬ್ಯುಲ್ಡಪ್ ಎನ್ನುವುದು ಚಿತ್ರ ನೋಡಿದಾಗಲೇ ಗೊತ್ತಾಗುತ್ತದೆ. ಅಖಿಲಾಗೆ ಬಣ್ಣ ಹಚ್ಚಿದ್ದಷ್ಟೇ ಲಾಭ. ಪ್ರಶಾಂತ್ ಸಿದ್ದಿ ಕಾಮಿಡಿ ಸಿದ್ಧಿಸುವುದಿಲ್ಲ.
(epaper.kannadaprabha.in)
