Asianet Suvarna News Asianet Suvarna News

ಸಿಪಾಯಿ ಸಿನಿಮಾ ವಿಮರ್ಶೆ: ಆವೇಷ ಕಾಣದ ಸಿಪಾಯಿ ದಂಗೆ

ನಿರ್ಮಾಪಕರೂ ಆಗಿರುವ ನಾಯಕ ನಟ ಸಿದ್ಧಾರ್ಥ್ ನಟನೆಗಿಂತ ಸಾಹಸ ಸನ್ನಿವೇಶಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುವುದು ಹೆಚ್ಚು. ಶ್ರುತಿ ಹರಿಹರನ್ ಅವರ ಸಹಜ ಅಭಿನಯ ಆಪ್ತವಾಗುತ್ತದೆ. ಸಂಚಾರಿ ವಿಜಯ್ ಸಹಜ ನಟ ಎಂಬುದನ್ನು ಇಲ್ಲೂ ಸಾಬೀತು ಮಾಡಿದ್ದಾರೆ. ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

sipayi kannada movie review

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

ಚಿತ್ರ: ಸಿಪಾಯಿ
ಭಾಷೆ: ಕನ್ನಡ
ತಾರಾಗಣ: ಸಿದ್ಧಾರ್ಥ್ ಮಹೇಶ್, ಶ್ರುತಿ ಹರಿಹರನ್, ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳ್, ಸಂಯುಕ್ತ ಹೆಗಡೆ
ನಿರ್ದೇಶನ: ರಜತ್ ಮಯೀ
ಸಂಗೀತ: ಅಜನೀಸ್ ಲೋಕನಾಥ್
ಛಾಯಾಗ್ರಹಣ: ಪರಮೇಶ್
ನಿರ್ಮಾಣ: ಆರೆಂಜ್ ಪಿಕ್ಸೆಲ್ಸ್

ದುಡ್ಡಿದ್ರೆ ಹೀರೋ ಆಗೋದೇನು, ನೀರು ಕುಡಿದಷ್ಟೇ ಸುಲಭ. ಆದ್ರೆ ನಟನೆಯೇ ಇಲ್ಲದ ಹೀರೋ ತೆರೆಯಲ್ಲಿ ಸಾಹಸದ ಎಷ್ಟೇ ಕಸರತ್ತು ತೋರಿಸಿದ್ರೂ ಪ್ರೇಕ್ಷಕ ಒಪ್ಪಿಕೊಳ್ಳುವುದು ತುಂಬಾ ಕಷ್ಟ. ‘ಸಿಪಾಯಿ’ ಚಿತ್ರ ನೋಡಿ ಬರುವ ಪ್ರೇಕ್ಷಕನಿಗೆ, ಅಲ್ಲಿ ಕಾಣುವ ನಾಯಕ ನಟ ಸಿದ್ಧಾರ್ಥ್ ಮಹೇಶ್ ಅಭಿನಯಕ್ಕೆ ನೀಡುವ ಮೊದಲ ಪ್ರತಿಕ್ರಿಯೆ ಹೀಗೆ ಇರುತ್ತೆ. ಆದರೂ, ಈ ಚಿತ್ರ ಇಷ್ಟವಾಗೋದಿಕ್ಕೆ ಇಲ್ಲಿ ಹಲವು ಕಾರಣಗಳಿವೆ. ಮೊದಲ ಚಿತ್ರವಾದರೂ ಸಿದ್ಧಾರ್ಥ್ ಮಹೇಶ್ ಪ್ರದರ್ಶಿಸಿದ ಮೈ ನವೀರೇಳಿಸುವ ಸಾಹಸ, ಆಕರ್ಷಣೆ ಹುಟ್ಟು ಹಾಕುವ ಶ್ರುತಿ ಹರಿಹರನ್ ಅಭಿನಯ, ಸಂಚಾರಿ ವಿಜಯ್ ಅವರ ಕಾಮಿಡಿ ಕಿಕ್, ಮನಸ್ಸಿಗೆ ಹಿತ ಎನಿಸುವ ಸಂಗೀತ, ಕಣ್ಣಿಗೆ ಮುದ ನೀಡುವ ಛಾಯಾಗ್ರಹಣ ಹೀಗೆ ಎಲ್ಲವೂ ನೋಡುವ ನೋಟಕ್ಕೆ ಆಪ್ತವಾಗುವುದು ಈ ಚಿತ್ರದ ಪ್ಲಸ್ ಪಾಯಿಂಟ್.

ಸುದ್ದಿ ಸೃಷ್ಟಿಸುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಮಾಫಿಯಾದ ವಿರುದ್ಧ ಸಿಪಾಯಿಯಂತೆ ಸಮರ ಸಾರುವುದು ಕೂಡ ಆತನ ಕರ್ತವ್ಯ ಎನ್ನುವ ಥೀಮ್ ಈ ಚಿತ್ರದ್ದು. ಡ್ರಗ್ಸ್ ಮಾಫಿಯಾದ ಅಕ್ರಮ ಬಯಲು ಮಾಡಲು ವಾಹಿನಿಯೊಂದಕ್ಕೆ ವರದಿಗಾರನಾಗಿ ಸೇರುವ ಚಿತ್ರದ ನಾಯಕ ಸಿದ್ಧು, ತನಗೆ ಕೊಟ್ಟ ಕೆಲಸವನ್ನು ನಿರ್ವಹಿಸುವುದಕ್ಕಾಗಿ ತಂದೆ ನರಸಿಂಹರಾಜು ಜತೆಗೆ ಮಂಗಳೂರಿಗೆ ಹೊರಡುತ್ತಾನೆ. ದಾರಿ ಮಧ್ಯೆ ರೌಡಿಗಳು ಆತನ ಮೇಲೆ ಅಟ್ಯಾಕ್ ಮಾಡುತ್ತಾರೆ. ಆತನ ತಂದೆ ನರಸಿಂಹರಾಜು ಅವರನ್ನು ರೌಡಿಗಳು ಕೊಲೆ ಮಾಡಿ ಸಾಕ್ಷಿ ಸಿಗದಂತೆ ಸುಟ್ಟು ಹಾಕುತ್ತಾರೆ. ಗಾಯಗೊಂಡು ನೆನಪಿನ ಶಕ್ತಿಯನ್ನೇ ಕಳೆದುಕೊಂಡ ಸಿದ್ದು ಎಚ್ಚರ ತಪ್ಪಿ ಬಿದ್ದಾಗ ಸಕಲೇಶಪುರದ ಕಾಡಿನ ನಡುವೆ ಅಪರಿಚಿತ ಕುಟುಂಬದಿಂದ ಆರೈಕೆ ಪಡೆಯುವ ಮೂಲಕ ತೆರೆಯಲ್ಲಿ ‘ಸಿಪಾಯಿ’ ದಂಗೆ ಶುರುವಾಗುತ್ತದೆ.

ಮಾಫಿಯಾ ಗ್ಯಾಂಗ್‌ನ ಅಕ್ರಮ ಬಯಲು ಮಾಡಲು ಹೊರಟು, ರೌಡಿಗಳ ದಾಳಿಗೆ ಸಿಲುಕಿ ನೆನಪಿನ ಶಕ್ತಿಯನ್ನೆ ಕಳೆದುಕೊಂಡ ಸಿದ್ದು, ತನ್ನ ಗೆಳೆಯ ಮಂಜು ಮತ್ತು ಪ್ರೇಯಸಿ ದಿವ್ಯಾಳ ಕಣ್ಣಿಗೆ ಬೀಳುವ ಹೊತ್ತಿಗೆ ಅರ್ಧ ಸಿನಿಮಾ ಖಲಾಸ್. ಈ ನಡುವೆಯೇ ಸಿದ್ಧು ಕಾಲೇಜಿಗೆ ಎಂಟ್ರಿಯಾಗಿದ್ದು, ಅಕಸ್ಮಿಕವಾಗಿ ಪರಿಚಯವಾದ ದಿವ್ಯಾಳ ಜತೆಗೆ ಪ್ರೀತಿ ಶುರುವಾಗಿದ್ದು, ಅಲ್ಲಿಂದ ವಾಹಿನಿಗೆ ವರದಿ ಮಾಡುವುದಕ್ಕಾಗಿ ಸಿದ್ದು ಮಾರುವೇಷದಲ್ಲಿ ಕ್ರಿಮಿನಲ್ ಅಭಯ್ ಗ್ಯಾಂಗ್‌ಗೆ ಸೇರಿಕೊಂಡ ಚಿತ್ರಣ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಇದೆಲ್ಲವನ್ನು ತೋರುವ ಮೊದಲರ್ಧ ಲವಲವಿಕೆಯಿಂದಲೇ ಪ್ರೇಕ್ಷಕರನ್ನು ರಂಜಿಸುತ್ತದೆ.

ಆದರೆ, ದ್ವಿತೀಯಾರ್ಧದ ಕತೆ ಇನ್ನೊಂದು ತಿರುವಿಗೆ ಹೊರಳುತ್ತದೆ. ಸಿದ್ಧು ತನ್ನ ಮನೆಗೆ ಬರುವ ಹೊತ್ತಿಗೆ ನೆನಪಿನ ಶಕ್ತಿ ಬರುತ್ತದೆ. ಅಲ್ಲಿಂದ ತನ್ನ ಕರ್ತವ್ಯ ನಿರ್ವಹಿಸಲು ಪಣ ತೊಡುವ ಆತ, ಹೇಗೆ ಮಾಫಿಯಾ ಗ್ಯಾಂಗ್ ಅನ್ನು ಮಟ್ಟ ಹಾಕುತ್ತಾನೆ ಎನ್ನುವುದಕ್ಕೆ ಚಿತ್ರವನ್ನೇ ನೋಡಬೇಕು. ತೀರಾ ವಿಶೇಷ ಎನಿಸದ ಈ ಕತೆ ಹೇಳಲು ನಿರ್ದೇಶಕ ರಜತ್ ಮಯೀ ತೆಗೆದುಕೊಂಡಿದ್ದು ಸರಿ ಸುಮಾರು 2 ಗಂಟೆ ಕಾಲ. ಆದರೆ ಆ ಕತೆಗೆ ಹೆಣೆದಿರುವ ದೃಶ್ಯರೂಪ ಅನೇಕ ಏಳು ಬೀಳುಗಳ ನಡುವೆ ಗೊಂದಲಕ್ಕೆ ಸಿಲುಕಿದೆ. ಹಾಗೆ ನೋಡಿದರೆ, ಅಜನೀಸ್ ಲೋಕನಾಥ್ ಸಂಗೀತ ಹಾಗೂ ಪರಮೇಶ್ ಅವರ ಛಾಯಾಗ್ರಹಣ ಪ್ರೇಕ್ಷಕರ ತಾಳ್ಮೆ ಮೀರದಂತೆ ನೋಟಕ್ಕೆ ಮೆರಗು ತಂದಿವೆ. ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರವೊಂದಕ್ಕೆ ಸಂಗೀತ ನೀಡಿರುವ ಅಜನೀಸ್, ಎಲ್ಲ ಹಾಡುಗಳ ಮೂಲಕವೂ ಇಷ್ಟವಾಗುತ್ತಾರೆ. ನಿರ್ಮಾಪಕರೂ ಆಗಿರುವ ನಾಯಕ ನಟ ಸಿದ್ಧಾರ್ಥ್ ನಟನೆಗಿಂತ ಸಾಹಸ ಸನ್ನಿವೇಶಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುವುದು ಹೆಚ್ಚು. ಶ್ರುತಿ ಹರಿಹರನ್ ಅವರ ಸಹಜ ಅಭಿನಯ ಆಪ್ತವಾಗುತ್ತದೆ. ಸಂಚಾರಿ ವಿಜಯ್ ಸಹಜ ನಟ ಎಂಬುದನ್ನು ಇಲ್ಲೂ ಸಾಬೀತು ಮಾಡಿದ್ದಾರೆ. ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

(ರೇಟಿಂಗ್ 3/5)

Latest Videos
Follow Us:
Download App:
  • android
  • ios