ಟೇಕ್ ಮಾಡುವುದರಲ್ಲಿ ಅವರು ಸಿಕ್ಕಾಪಟ್ಟೆ ಫಾಸ್ಟ್. ನಾನು ಲೇಟು. ಸಾಕಷ್ಟು ಬಾರಿ ಅವರು ನನ್ನ ಬಳಿ ಬಂದ ಸಲಹೆ ಕೊಡುತ್ತಿದ್ದರು. ಶಿವಣ್ಣ ಜತೆಗ ನಟಿಸಿದ್ದು ನನಗೆ ಜೀವನದಲ್ಲಿ ಸಿಕ್ಕ ಮರೆಯಲಾಗದ ಉಡುಗೊರೆ.

1) ಮಫ್ತಿ ಅಂದ್ರೆ ಏನು? ಕತೆಗೆ ಈ ಹೆಸರು ಹೇಗೆ ಸೂಕ್ತ?

ಮು: ಮಫ್ತಿ ಅಂದ್ರೆ ಅಂಡರ್ ಕವರ್ ಅಂತ. ಇದನ್ನು ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಬಳಸುತ್ತಾರೆ. ಅಂಡರ್ ಕವರ್ ಪೊಲೀಸ್‌ಗೆ ಮಫ್ತಿಯಲ್ಲಿರುವವರು ಅಂತಾರೆ. ಇಲ್ಲಿ ಯಾರು ಮಫ್ತಿಯಲ್ಲಿರುತ್ತಾರೆ, ಯಾಕೆ ಫ್ತಿಯಾಗಿರುತ್ತಾರೆ ಅನ್ನೋದು ಸಿನಿಮಾ. ಅಂದರೆ ಒಬ್ಬನಲ್ಲಿ ಎರಡು ಮುಖ ಇದೆ. ರಾಮ ಮತ್ತು ರಾವಣ. ಯಾರು ಯಾವಾಗ ಹೊರಗೆ ಬರುತ್ತಾರೆ ಎಂಬುದನ್ನು ಎರಡು ಪಾತ್ರಗಳ ಮೂಲಕ ಹೇಳುತ್ತೇವೆ. ಈಗ ನಾನು ಮಫ್ತಿಯಲ್ಲಿರೋ ಕ್ಯಾರೆಕ್ಟರ್. ಈ ಕ್ಯಾರೆಕ್ಟರ್ ಕೆಲವರಿಗೆ ಕೆಟ್ಟವನಾಗಿ ಕಂಡರೂ ನನಗೆ ಅದು ಒಳ್ಳೆಯದಾಗಿ ಕಾಣುತ್ತದೆ. ನನಗೆ ಒಳ್ಳೆಯದಾಗಿ ಕಂಡಾಗ ಬೇರೆಯವರಿಗೆ ಕೆಟ್ಟದ್ದನ್ನು ಅನಿಸುತ್ತದೆ. ಈ ಭಾವನೆಗಳನ್ನು ನಿಭಾಯಿಸುವಂತಹ ಒಂದು ಪಾತ್ರ. ಮೇಲ್ನೋಟಕ್ಕೆ ಪೊಲೀಸ್ ಕತೆ ಅನಿಸಿದರೂ ಇಲ್ಲಿ ಸಾಕಷ್ಟು ವಿಷಯಗಳಿವೆ. ಅವುಗಳನ್ನು ಮಾತಿನಲ್ಲಿ ಹೇಳುವುದಕ್ಕಿಂತ ತೆರೆ ಮೇಲೆ ನೋಡಬೇಕು

2) ಟ್ರೈಲರ್ ನೋಡಿದವರು ಮತ್ತೊಂದು ಉಗ್ರಂ, ರಥಾವರದಂತೆ ಅನ್ನುತ್ತಿದ್ದಾರಲ್ಲ?

ಮು: ಹೌದು. ಇದರಲ್ಲೇನು ತಪ್ಪಿಲ್ಲ. ಯಾಕೆಂದರೆ ಶ್ರೀಮುರಳಿ ಅಂದ್ರೆ ಉಗ್ರಂ ಅಂತಾರೆ. ಉಗ್ರಂ ಅಂದ್ರೆ ಶ್ರೀಮುರಳಿ ಅಂತಾರೆ. ನನಗೆ ಉಗ್ರಂ ಸಿನಿಮಾ ಲೈಫ್ ಕೊಟ್ಟಿದೆ. ಆ ಇಮೇಜ್ ಅನ್ನು ನಾನು ಕ್ಯಾರಿ ಮಾಡಿದ್ದೇನೆ. ಹಾಗಂತ ಮಫ್ತಿ ಚಿತ್ರ ಮತ್ತೊಂದು ಉಗ್ರಂ ಅಲ್ಲ. ಅದರ ಸ್ಟ್ಯಾಂಡರ್ಡ್ ಹೆಚ್ಚಾಗಿದೆ. ನನಗೆ ಮತ್ತೊಂದು ಹೊಸ ಬೆಸ್ಟ್ ಸಿನಿಮಾ ಅನಿಸುತ್ತಿದೆ. ಹೀಗಾಗಿ ಉಗ್ರಂ, ರಥಾವರ ಹೇಗೆ ನನ್ನ ಹಂತ ಹಂತವಾಗಿ ಗುರುತಿಸುತ್ತ ಬಂದವೋ ಹಾಗೆ ಮಫ್ತಿ ಚಿತ್ರ ಕೂಡ ಮತ್ತೊಂದು ಹಂತಕ್ಕೆ ನನ್ನ ಕರೆದುಕೊಂಡು ಹೋಗುವ ಸಿನಿಮಾ.

3) ಮಫ್ತಿ ಚಿತ್ರವನ್ನು ನೋಡಕ್ಕೆ ಪ್ರೇಕ್ಷಕರಿಗೆ ಸಿಗುವ ಮೊದಲ ಕಾರಣಗಳೇನು?

ಮು: ಸಿನಿಮಾ ತಾಂತ್ರಿಕವಾಗಿ ಸೂಪರ್ ಆಗಿದೆ. ಈ ಚಿತ್ರಕ್ಕೆ ನಾವು ಬಳಸಿರುವ ಬಿಜಿಎಂ, ಸಂಗೀತ, ಕ್ಯಾಮೆರಾ ವರ್ಕ್ ನೋಡಲು ಮೊದಲು ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ. ಬಂದ ಮೇಲೆ ಅವರಿಗೆ ಕಲಾವಿದರ ನಟನೆ, ಕತೆ ಇಷ್ಟವಾಗುತ್ತದೆ.

4) ಇದು ಡಾನ್ ಮತ್ತು ಪೊಲೀಸ್ ಕತೆನಾ? ಇಲ್ಲಿ ಯಾರು ಪೊಲೀಸು, ಯಾರು ಡಾನ್?

ಮು: ಪಾತ್ರಗಳ ವಿಚಾರಕ್ಕೆ ಬಂದರೆ ಇಲ್ಲಿ ಒಬ್ಬರು ಡಾನ್. ಮತ್ತೊಬ್ಬರು ಪೊಲೀಸ್. ಅಷ್ಟನ್ನು ಮಾತ್ರ ಹೇಳುವೆ.

5) ಶಿವರಾಜ್‌ಕುಮಾರ್ ಅವರನ್ನು ಈ ಚಿತ್ರಕ್ಕೆ ಕರೆತರುವ ಐಡಿಯಾ ಹೊಳೆದಿದ್ದು ಹೇಗೆ?

ಮು: ಈ ಚಿತ್ರಕ್ಕೆ ಶಿವಣ್ಣ ಅವರನ್ನು ಕರೆತರಬೇಕೆಂಬುದು ನನ್ನದೇ ಐಡಿಯಾ. ಆದರೆ, ಅದೊಂದು ದೊಡ್ಡ ಸವಾಲಾಗಿತ್ತು. ಆ ಸವಾಲಿನಲ್ಲಿ ಗೆಲ್ಲುವುದಕ್ಕೆ ಸಹಕಾರಿಯಾಗಿದ್ದು ನಮ್ಮ ಚಿತ್ರದ ಕತೆ. ಅವರು ಕತೆ ಕೇಳಿದ ಮೇಲೆ ಮರು ಮಾತನಾಡಿಲ್ಲ. ಶಿವಣ್ಣ ಈ ಚಿತ್ರದಲ್ಲಿ ನಟಿಸುವುದು ಚಿತ್ರಕ್ಕೆ ಡಬಲ್ ಶಕ್ತಿ ಬಂದಂತೆ. ಚಿತ್ರದ ಕಮರ್ಷಿಯಲ್ ವ್ಯಾಪ್ತಿ ಹೆಚ್ಚಾಗಿದೆ. ಅವರ ಮಾತು ಕೂಡ ಅಷ್ಟೇ ತೂಕವಾಗಿದೆ.

6) ಚಿತ್ರೀಕರಣದ ಸೆಟ್‌ನಲ್ಲಿ ನೀವು ಕಂಡಂತೆ ಶಿವಣ್ಣ ಹೇಗೆ?

ಮು: ಶಿವಣ್ಣ ಸೆಟ್‌ನಲ್ಲಿ ಮಗು ಥರ ಇರುತ್ತಿದ್ದರು. ಶಾಟ್ ನಡುವೆ ಸಿಕ್ಕರೆ ಜತೆಗಾರರ ಜತೆ ಹರಟೆ , ಕ್ರಿಕೆಟ್ ಆಡೋರು. ಸಿನಿಮಾಗಳ ಬಗ್ಗೆ ಮಾತನಾಡೋರು. ಆದರೆ, ಶಾಟ್‌ಗೆ ಕ್ಯಾಮೆರಾ ಮುಂದೆ ಬಂದು ನಿಂತರೆ ಆಗ ನಮಗೆ ಮತ್ತೊಂದು ಶಿವಣ್ಣ ಕಾಣುತ್ತಿದ್ದರು ಆ್ಯಕ್ಟರ್ ಈಸ್ ನೆವರ್ ಡೈ ಅನ್ನೋ ಮಾತಿಗೆ ಮೂರ್ತ ರೂಪದಂತೆ ಕಂಡಿದ್ದು ಶಿವಣ್ಣ. ಟೇಕ್ ಮಾಡುವುದರಲ್ಲಿ ಅವರು ಸಿಕ್ಕಾಪಟ್ಟೆ ಫಾಸ್ಟ್. ನಾನು ಲೇಟು. ಸಾಕಷ್ಟು ಬಾರಿ ಅವರು ನನ್ನ ಬಳಿ ಬಂದ ಸಲಹೆ ಕೊಡುತ್ತಿದ್ದರು. ಶಿವಣ್ಣ ಜತೆಗ ನಟಿಸಿದ್ದು ನನಗೆ ಜೀವನದಲ್ಲಿ ಸಿಕ್ಕ ಮರೆಯಲಾಗದ ಉಡುಗೊರೆ.

7) ಮಫ್ತಿ ಚಿತ್ರದಲ್ಲಿನ ನಿಮ್ಮ ನಿರೀಕ್ಷೆಗಳೇನು?

ಮು: ಹಿಂದಿಗಿಂತ ಭಾರಿ ದೊಡ್ಡ ಕ್ಯಾನ್‌ವಾಸ್ ಇದೆ. ಹೀಗಾಗಿ ಒಳ್ಳೆದಾಗುತ್ತದೆ ಎನ್ನುವ ಭರವಸೆಯಲ್ಲಿ ಕಾಯುತ್ತಿರುವೆ. ಈ ಸಿನಿಮಾದಿಂದ ನನಗೆ ಮತ್ತಷ್ಟು ಒಳ್ಳೆಯದಾಗುವ ಎಲ್ಲ ಲಕ್ಷಣಗಳು ಇವೆ. ಜತೆಗೆ 400 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಜಯಣ್ಣ ಅವರಂತಹ ದೊಡ್ಡ ನಿರ್ಮಾಪಕರು ಈ ಚಿತ್ರದ ಜತೆಗಿದ್ದಾರೆ. ಹೀಗಾಗಿ ನಿರೀಕ್ಷೆಗಳು ಸಹಜವಾಗಿ ಹೆಚ್ಚಾಗಿವೆ. ಸಾಮಾನ್ಯವಾಗಿ ನಾವು ಸಿನಿಮಾ ಗಳನ್ನು ಬೆಂಗಳೂರು, ಮೈಸೂರು, ಬಿಕೆಟಿಗೆ ಸೀಮಿತ ಮಾಡುತ್ತೇವೆ. ಉತ್ತರ ಕರ್ನಾಟಕದ ಕಡೆ ಹೋಗಲ್ಲ. ಆದರೆ ಈ ಚಿತ್ರವನ್ನು ಕರ್ನಾಟಕದ ಎಲ್ಲ ಭಾಗಗಳಿಗೂ ತಲುಪಿಸಬೇಕು ಎಂಬುದು ನನ್ನ ಆಸೆ. ಹೇಗೆ ನಾವು ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ಮೂಲೆ ಮೂಲೆಯಲ್ಲೂ ನೋಡುತ್ತೇವೋ ಹೇಗೆ ಕನ್ನಡದ ಸಿನಿಮಾಗಳ ಪ್ರದರ್ಶನ ರಾಜ್ಯದ ಎಲ್ಲ ಭಾಗಗಳಿಗಳಲ್ಲೂ ರಾರಾಜಿಸಬೇಕು.

8) ಉಗ್ರಂ ನಂತರ ಕೇವಲ ಹೊಸ ನಿರ್ದೇಶಕರ ಜತೆಯೇ ಕೆಲಸ ಮಾಡಬೇಕೆಂಬ ನಿರ್ಧಾರ ಮಾಡಿದಂತಿದೆ?

ಮು: ನಾನು ಹೊಸಬರು ಹಳಬರು ಅಂತ ನೋಡಲ್ಲ. ಮೊದ್ಲು ನೋಡೋದು ಚಿತ್ರಕತೆ ಮತ್ತು ಸ್ಕ್ರಿಪ್ಟ್. ಅದು ಚೆನ್ನಾಗಿದ್ದರೆ ಸಾಕು. ನಾನು ಡೈರೆಕ್ಟರ್ ಮುಖ ನೋಡಿ ಸಿನಿಮಾ ಒಪ್ಪಿಕೊಳ್ಳುವ ಜಾಯಮಾನದವನಲ್ಲ. ಸ್ಕ್ರಿಪ್ಟ್ ನೋಡಿ ಒಪ್ಪುತ್ತೇನೆ. ಚಿತ್ರರಂಗದ ಯಾವುದೇ ಅನುಭವ ಇಲ್ಲದವರು ಕೂಡ ಒಳ್ಳೆಯ ಚಿತ್ರಕತೆ ಜತೆ ನನ್ನ ಬಳಿ ಬಂದ್ರೆ ನಾನು ಆತನ ಸಿನಿಮಾ ಮಾಡಕ್ಕೆ ರೆಡಿ. ಪ್ರಶಾಂತ್ ನೀಲ್, ಚಂದ್ರಶೇಖರ್ ಬಂಡಿಯಪ್ಪ, ಈಗ ನರ್ತನ್ ಬಂದಿದ್ದು ಅಂಥ ಒಳ್ಳೆಯ ಸ್ಕ್ರಿಪ್ಟ್‌ಗಳಿಂದಲೇ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ಹೊಸಬರಾಗಿದ್ದರೂ ಉಳಿದವರು ಹಳಬರೇ ಆಗಿರುತ್ತಾರೆ. ಇದೊಂದು ಟೀಮ್ ವರ್ಕ್. ನನ್ನ ತಂಡದಲ್ಲಿ ಒಂದು ವೃತ್ತಿಪರ ಸೀಕ್ರೇಟ್ ಇದೆ. ಅದೇನು ಅಂತ ಬಿಟ್ಟುಕೊಡಲ್ಲ. ಆ ಸೀಕ್ರೇಟ್ ನನ್ನಿಂದ ಹೊಸ ರೀತಿಯ ಸಿನಿಮಾಗಳನ್ನು ಮಾಡಿಸುತ್ತಿದೆ. ಶ್ರೀಮುರಳಿ ಫೀನಿಕ್ಸ್‌ನಂತೆ ಎದ್ದು ಬರುವುದಕ್ಕೆ ಅವಕಾಶ ಕೊಟ್ಟಿದೆ.

9)ನಿರ್ದೇಶಕ ನರ್ತನ್ ಕುರಿತು ಹೇಳುವುದಾದರೆ?

ಮು: ಹಾಗೆ ನೋಡಿದರೆ ನರ್ತನ್ ಹೊಸಬರೇನು ಅಲ್ಲ. ನನ್ನದೆ ಹಿಂದಿನ ಚಿತ್ರಗಳಾದ ಉಗ್ರಂ, ರಥಾವರ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿವರು. ಪರ್ಫೆಕ್ಷನ್‌ಗೆ ಮತ್ತೊಂದು ಹೆಸರು ನರ್ತನ್. ತಾನು ಅಂದುಕೊಂಡಿದ್ದನ್ನು ಬಾರದಿದ್ದಾಗ ಪದೇ ಪದೇ ಟೇಕ್ ಮಾಡಿಸುತ್ತಾರೆ. ಆತನ ಡೆಡಿಕೇಷನ್ ನನಗೆ ಇಷ್ಟವಾಗಿ ನಾವಿಬ್ಬರು ಮಫ್ತಿಯಲ್ಲಿ ಜತೆಯಾಗಿದ್ದೇವೆ.

10) ನೀವು ಕಂಡಂತೆ ನಮ್ಮಲ್ಲಿ ಆಗಿರುವ ಬದಲಾವಣೆಗಳೇನು?

ಮು: ಉಗ್ರಂ ನಂತರ ನಾನು ಕೇವಲ ಒಂದು ಚಿತ್ರಕ್ಕೆ ಸಂಭಾವನೆ ತೆಗೆದುಕೊಂಡು ನಟಿಸುವುದಕ್ಕೆ ಮಾತ್ರ ಸೀತವಾಗಿರುವ ನಟ ಅಲ್ಲ. ಚಿತ್ರದ ಪ್ರತಿಯೊಂದು ವಿಭಾಗದಲ್ಲೂ ನನ್ನ ತೊಡಗಿಸಿಕೊಳ್ಳುತ್ತಿದ್ದೇನೆ. ನಾನು ನಟನಾ

ಗಿಯೇ ಉಳಿಯಕ್ಕೆ ಇಷ್ಟಪಡಲ್ಲ. ಅದು ನನಗೆ ಅರ್ಥವಾಗಿದ್ದು ಉಗ್ರಂ ನಂತರ. ಈ ಸಿನಿಮಾ ನಂತರ ನನ್ನ ನಿಜವಾದ ದಾರಿ ಗೊತ್ತಾಗಿದೆ. ಆ ದಾರಿಯಲ್ಲಿ ಮಫ್ತಿ ಮತ್ತಷ್ಟು ರಂಗೇರಿದೆ. ಕೇವಲ ಹೀರೋ ಆಗಿದ್ದು ಕೊಂಡು ಶಾರ್ಟ್ ಕಟ್ ಕೆರಿಯರ್ ಕಟ್ಟುಕೊಳ್ಳುವುದಕ್ಕಿಂತ ಹಾರ್ಡ್ ವರ್ಕ್ ಮಾಡಿ ಒಳ್ಳೆಯ ಕಲಾವಿದ ಅನಿಸಿಕೊಳ್ಳಬೇಕೆಂಬ ಜವಾಬ್ದಾರಿ ಬಂದಿದೆ.

11) ಗೆದ್ದ ಹೀರೋಗಳು ಸಾಕಷ್ಟು ಸಮಯ ತೆಗೆದುಕೊಂಡು ಸಿನಿಮಾ ಮಾಡುವುದು ಪ್ಯಾಷನ್ ಆಗಿದೆಯಲ್ಲ?

ಮು: ಮಫ್ತಿಗೆ ನಾನು ಎರಡು ವರ್ಷ ತೆಗೆದುಕೊಂಡಿದ್ದೇನೆ ನಿಜ. ಆದರೆ, ನಾನು ವರ್ಷಕ್ಕೆ ಎರಡು ಸಿನಿಮಾ ಮಾಡುವ ಉತ್ಸಾಹ ಇದೆ. ಆದರೂ ತಡವಾಗುತ್ತಿದೆ. ಲೇಟ್ ಯಾಕೆ ಅನ್ನೋದು ಈಗ ಮುಖ್ಯ ಅಲ್ಲ. ಸಿನಿಮಾ ಹೇಗೆ ಬಂದಿದೆ ಅನ್ನೋದು ಮುಖ್ಯ. ಗೆದ್ದ ಹೀರೋಗಳು ಎರಡ್ಮೂರು ವರ್ಷ ಟೈಮ್ ತೆಗೆದುಕೊಂಡು ಸಿನಿಮಾ ಮಾಡುವುದು ಪ್ಯಾಷನ್ ಅಥವಾ ನಮ್ಮ ಶ್ರಮದ ಸುದೀರ್ಘ ಪ್ರಯಾಣ ಅದು.

- ಆರ್.ಕೇಶವಮೂರ್ತಿ, ಕನ್ನಡಪ್ರಭ