ತಮಿಳಿನ ಅಜಿತ್‌ಗೆ u-Turn ಹೊಡೆದ ಸ್ಯಾಂಡಲ್‌ವುಡ್ ನಟಿ!
ಶ್ರದ್ಧಾ ಶ್ರೀನಾಥ್ ಮತ್ತೊಂದು ದೊಡ್ಡ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿಂದಿಯ ‘ಪಿಂಕ್’ ತಮಿಳಿಗೆ ರೀಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಮಿಳಿನ ಸೂಪರ್‌ಸ್ಟಾರ್ ಅಜಿತ್. ತಾಪ್ಸಿ ಪನ್ನು ಪಾತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅಜಿತ್ ಮತ್ತು ಪ್ರಖ್ಯಾತ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸುತ್ತಿದ್ದಾರೆ.
ಫೆಬ್ರವರಿಯಿಂದ ಚಿತ್ರಕ್ಕೆ ಚಿತ್ರೀಕರಣ ಶುರು. ಬಾಲಿವುಡ್‌ನ ಹೆಸರಾಂತ ನಟಿ ವಿದ್ಯಾ ಬಾಲನ್ ಕೂಡ ಈ ಚಿತ್ರದಲ್ಲಿದ್ದಾರೆ. ‘ವಿಕ್ರಂ ವೇದ’ ಚಿತ್ರದ ಮೂಲಕ ತಮಿಳು ಚಿತ್ರರಂಗದ ಗಮನ ಸೆಳೆದ ಶ್ರದ್ಧಾ ಅಲ್ಲೀಗ ಬಹು ಬೇಡಿಕೆಯ ನಟಿ. ಹಾಗಾಗಿಯೇ ಅಜಿತ್ ಸಿನಿಮಾದಲ್ಲಿ ನಟಿಸುವ ಅವಕಾಶ ಅವರನ್ನು ಅರಸಿಕೊಂಡು ಬಂದಿದೆ.
‘ನನ್ನ ಪಾಲಿಗೆ ಇದು ಅದೃಷ್ಟ. ಇಂತಹ ಅವಕಾಶ ಸಿಗಬಹುದು ಅಂತಂದುಕೊಂಡಿರಲಿಲ್ಲ. ಕನ್ನಡಕ್ಕೆ ಹೋಲಿಸಿದರೆ ಕಾಲಿವುಡ್‌ನಲ್ಲಿ ನನಗೆ ಹೆಚ್ಚು ಅವಕಾಶಗಳಿವೆ ಎನ್ನುವುದು ನಿಜ. ಹಾಗೆಯೇ ಸಿಕ್ಕ ಅವಕಾಶವಿದು. ಅದರಲ್ಲೂ ಅಜಿತ್ ಅವರದ್ದೇ ನಿರ್ಮಾಣದ ಸಿನಿಮಾ ಅಂದಾಗ ಹೆಚ್ಚು ಚರ್ಚೆ ಮಾಡದೆ ಒಪ್ಪಿಕೊಂಡೆ. ಅಂತಹ ಸ್ಟಾರ್ ಜತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಅವಕಾಶ, ಹಾಗೆಯೇ ದೊಡ್ಡ ಪ್ರೊಡಕ್ಷನ್ ಹೌಸ್ ನಿರ್ಮಾಣದ ಸಿನಿಮಾ, ಒಳ್ಳೆಯ ಅವಕಾಶವೇ ಅಂತ ನಿರ್ಧರಿಸಿದೆ’ ಎನ್ನುತ್ತಾರೆ ನಟಿ ಶ್ರದ್ಧಾ ಶ್ರೀನಾಥ್.
ಕನ್ನಡದಲ್ಲೂ ಒಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸಬೇಕೆನ್ನುವ ಆಸೆ ನಂಗಿದೆ. ಆದರೆ ನಾನು ಬಯಸುವಂಥಾ ಪಾತ್ರ ಮತ್ತು ಕತೆ ಇನ್ನು ಸಿಕ್ಕಿಲ್ಲ. ಈಗಾಗಲೇ ಸಾಕಷ್ಟುಕತೆಗಳನ್ನು ಕೇಳಿದ್ದೇನೆ. ಕೇಳುತ್ತಲೂ ಇದ್ದೇನೆ. ಆದ್ರೆ, ನನಗಿನ್ನು ಹಿಡಿಸುವ ಪಾತ್ರ ಸಿಕ್ಕಿಲ್ಲ. ‘ರುಸ್ತುಂ’ ಚಿತ್ರ ಬಂದ್ರೆ ಮತ್ತಷ್ಟುಒಳ್ಳೆಯ ಕತೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ. - ಶ್ರದ್ಧಾ ಶ್ರೀನಾಥ್, ನಟಿ
ಶ್ರದ್ಧಾ ಎದೆ ಮೇಲಿನ ಟ್ಯಾಟೂ ಕತೆ ಏನು?
ಪಿಂಕ್ ಸಿನಿಮಾ ನೋಡಿಲ್ಲ
‘ಲಕ್ಕಿ ಅಂದ್ರೆ ನಾನಿನ್ನು ಹಿಂದಿಯಲ್ಲಿನ ಮೂಲ ಸಿನಿಮಾ ನೋಡಿಲ್ಲ. ನೋಡ್ಲಿಕ್ಕೆ ಆಗ ಸಮಯ ಸಿಕ್ಕಿರಲಿಲ್ಲ. ಹಾಗಾಗಿ ನನಗೆ ಹೊಸದೊಂದು ಸಿನಿಮಾ ಅಂತಲೇ ಅಭಿನಯಿಸುವ ಭಾಗ್ಯ ಸಿಕ್ಕಿದೆ. ಸಿನಿಮಾ ನೋಡಿದ್ದರೆ ಕಷ್ಟವಾಗುತ್ತಿತ್ತೋ ಏನೋ, ಅದರಿಂದ ಬಚಾವ್. ಆದರೂ, ಮೂಲ ಪಾತ್ರಕ್ಕಿಂತ ಚೆನ್ನಾಗಿ ಅಭಿನಯಿಸಬೇಕು ಎನ್ನುವ ಸವಾಲು ಇದ್ದೇ ಇರುತ್ತದೆ. ಅದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ನನ್ನ ಸಿದ್ಧತೆ ನಡೆದಿದೆ’ ಎನ್ನುತ್ತಾರೆ. ಯುವ ನಿರ್ದೇಶಕ ವಿನೋದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಯುವನ್ ಶಂಕರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.