ದತ್ತಣ್ಣ ಬೆಳ್ಳಿಹೆಜ್ಜೆ: ದತ್ತಣ್ಣ ಕುರಿತ ಪುಟ್ಟದೊಂದು ಕಿರುಚಿತ್ರ
ಇಂದು ಸಂಜೆ ಶಿವಾನಂದ ವೃತ್ತದಲ್ಲಿರುವ ಗಾಂಧೀಭವನದಲ್ಲಿ ದತ್ತಣ್ಣ ಕುರಿತ ಪುಟ್ಟದೊಂದು ಕಿರುಚಿತ್ರ, ಅವರೊಂದಿಗೆ ಸಂವಾದ, ಅವರಿಗೊಂದು ಸನ್ಮಾನ ನಡೆಯಲಿದೆ.
ಹೆಚ್ ಜಿ ದತ್ತಾತ್ರೇಯ ಉರುಫ್ ದತ್ತಣ್ಣ , ಬೆಳ್ಳಿಹೆಜ್ಜೆಯ ಅತಿಥಿ ಆಗಿದ್ದಾರೆ. 76ರ ಚಿರಯುವಕ ದತ್ತಣ್ಣ ಭಾರತೀಯ ವಾಯುಸೇನೆಯಲ್ಲಿದ್ದವರು. ವೃತ್ತಿಯಲ್ಲಿದ್ದಾಗಲೇ ನಾಟಕಗಳಲ್ಲಿ ನಟನೆ, ನಿವೃತ್ತಿಯ ನಂತರ ಪೂರ್ಣಪ್ರಮಾಣದಲ್ಲಿ ರಂಗಭೂಮಿ ಮತ್ತು ಸಿನಿಮಾಗಳಲ್ಲಿ ತೊಡಗಿಸಿಕೊಂಡವರು. 190 ಸಿನಿಮಾ, 40 ಪ್ಲಸ್ ನಾಟಕಗಳಲ್ಲಿ ನಟಿಸಿರುವ ದತ್ತಣ್ಣನವರ ಕನ್ನಡಿಗರ ಕಣ್ಣಿಗೆ ಬಿದ್ದದ್ದು ಮಾಯಾಮೃಗ ಧಾರಾವಾಹಿಯ ಶಾಸ್ತ್ರಿಯಾಗಿ. ಪಿ. ಶೇಷಾದ್ರಿಯವರ ಸಿನಿಮಾಗಳ ಆಸ್ಥಾನ ಕಲಾವಿದ ಎನ್ನುವಷ್ಟರ ಮಟ್ಟಿಗೆ ಅವರ ಚಿತ್ರಗಳಲ್ಲಿ ದತ್ತಣ್ಣ ನಟಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದಲ್ಲೂ ದತ್ತಣ್ಣನವರಿಗೊಂದು ಪಾತ್ರ ಖಾಯಂ.
ದತ್ತಣ್ಣ ಅವಿವಾಹಿತ ತುಂಟ ಅನ್ನುವವರಿದ್ದಾರೆ. ಅದನ್ನು ಅವರು ನಿಜವಾಗಿಸಿದ್ದು ನೀರ್‌ದೋಸೆ ಚಿತ್ರದಲ್ಲಿ. ಅದಾದ ನಂತರ ಅದೇ ಶೈಲಿಯ ಸಿನಿಮಾಗಳಿಂಗ ಒಂದರ ಹಿಂದೊಂದರಂತೆ ಕರೆ ಬಂದರೂ ದತ್ತಣ್ಣ ಅತ್ತ ಆಕರ್ಷಿತರಾಗಲಿಲ್ಲ. ಅಖಂಡ ಬ್ರಹ್ಮಚಾರಿಯೂ ಗೆಳೆಯರ ಬಂಧುವೂ ನಡುರಾತ್ರಿ ಹೋಗಿ ಕರೆದರೂ ಥಟ್ಟನೆ ಹೊರಟುಬಿಡುವ ಆಪತ್ಬಾಂಧವರೂ ಮೊನ್ನೆ ಮೊನ್ನೆಯ ತನಕ ಮೊಬೈಲು ಬೇಡ ಅಂತ ಸ್ಥಿರದೂರವಾಣಿಗೇ ಅಂಟಿಕೊಂಡ ಸಂಯಮಚಿತ್ತರೂ ಆಗಿದ್ದ ದತ್ತಣ್ಣ ಅವರನ್ನು ಬೆಳ್ಳಿಹೆಜ್ಜೆಗೆ ಕರೆಸುವ ಮೂಲಕ ಚಲನಚಿತ್ರ ಅಕಾಡೆಮಿ ಒಳ್ಳೆಯ ಕೆಲಸ ಮಾಡಿದೆ. ಶುಕ್ರವಾರ ಸಂಜೆ ಆರು ಗಂಟೆಗೆ ದತ್ತಣ್ಣ ಮಾತು ಕೇಳಲು ಮರೆಯದಿರಿ. ಅವರೊಳಗೊಬ್ಬಜಾಣತುಂಟನೂ ತರಲೆ ಪುಟ್ಟನೂ ಇದ್ದಾನೆ!