Asianet Suvarna News Asianet Suvarna News

ಶಿವಣ್ಣ ಬರ್ತ್'ಡೇ ಆಚರಣೆ ಇಲ್ಲ!

ನಾಳೆ ಶಿವರಾಜ್‌ಕುಮಾರ್ ಜನ್ಮದಿನ. ಅವರ ತಾಯಿ, ಕನ್ನಡದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಸಲ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಈ ಸಲದ ಜನ್ಮದಿನಾಚರಣೆಯ ವಿಶೇಷತೆಗಳೇನು ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

Shivrajkumar Will Not Celebrate His Birthday Today

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಜುಲೈ ೧೨ ಮಹತ್ವದ ದಿನ. ಅಂದು ಅವರ ಹುಟ್ಟು ಹಬ್ಬ. ಆ ದಿನ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನಿವಾಸಕ್ಕೆ ಬರುವುದು ಮಾಮೂಲು. ಆದರೆ ಈ ವರ್ಷ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

ಇತ್ತೀಚೆಗಷ್ಟೇ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಚಿತ್ರರಂಗ ಕಳೆದುಕೊಂಡ ಹಿನ್ನೆಲೆಯಲ್ಲಿ ಜನ್ಮದಿನಾಚರಣೆ ಆಡಂಬರದಿಂದ ದೂರ ಉಳಿಯಲು ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ. ಹಾಗಂತ ಅಭಿಮಾನಿಗಳ ಸಂಭ್ರಮಕ್ಕೆ ತಡೆ ಒಡ್ಡಿಲ್ಲ. ಅವರ ಖುಷಿಗೆ ಯಾವುದೇ ತಕರಾರಿಲ್ಲ. ಆದರೆ ಹುಟ್ಟುಹಬ್ಬಕ್ಕಾಗಿ ಪೋಸ್ಟರ್, ಬ್ಯಾನರ್ ಅಂತ ಹಣ ದುಂದುವೆಚ್ಚ ಮಾಡುವ ಬದಲಿಗೆ ಅದನ್ನು ಅನಾಥಾಶ್ರಮಗಳಿಗೆ, ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳಿಗೆ, ಬಡ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಿಗೆ ವೆಚ್ಚ ಮಾಡಿದರೆ ಅದಕ್ಕೂ ಅರ್ಥವಿರುತ್ತದೆ ಎನ್ನುವ ಮಾತನ್ನು ಶಿವಣ್ಣ ಹೇಳಿಕೊಂಡಿದ್ದಾರೆನ್ನುತ್ತಿವೆ ಅವರ ಆಪ್ತ ಮೂಲಗಳು.

 ಶಿವಣ್ಣ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದಿದ್ದರೂ ಅಭಿಮಾನಿಗಳಿಗೆ ಅದು ಬೇಕು. ಅಂದು ಅಭಿಮಾನಿಗಳು ಅವರ ನಿವಾಸಕ್ಕೆ ಬಂದೇ ಬರುತ್ತಾರೆ. ಬಂದವರನ್ನು ಹಾಗೆಯೇ ಕಳುಹಿಸುವ ಸ್ವಭಾವ ಅವರದ್ದಲ್ಲ. ಹೀಗಾಗಿ ಸರಳತೆಯಲ್ಲಾದರೂ ಹುಟ್ಟು ಹಬ್ಬದ ಆಚರಣೆ ಇದ್ದೇ ಇರುತ್ತದೆ ಎನ್ನುವ ನಿರೀಕ್ಷೆ ಅಭಿಮಾನಿಗಳಿಗೂ ಇದೆ. ಮತ್ತೊಂದೆಡೆ ಬಿಡುಗಡೆಯಾಗಬೇಕಿರುವ ಹೊಸ ಚಿತ್ರಗಳ ಕಾರಣಕ್ಕೂ ಶಿವರಾಜ್ ಕುಮಾರ್ ಹುಟ್ಟು ಹಬ್ಬ ಹೆಚ್ಚು ಮಹತ್ವ ಪಡೆಯುತ್ತದೆ.

ಸದ್ಯಕ್ಕೀಗ ‘ ಮಾಸ್ ಲೀಡರ್’ ರಿಲೀಸ್‌ಗೆ ರೆಡಿ ಆಗಿದೆ. ‘ ಟಗರು’ ಮತ್ತು‘ ದಿ ವಿಲನ್’ ಚಿತ್ರೀಕರಣದ ಹಂತದಲ್ಲಿವೆ. ‘ಖದರ್, ‘ಈಸೂರು ದಂಗೆ’, ‘ಬಾದ್‌ಷಾ’ ಚಿತ್ರಗಳ ಜತೆಗೆ ಮಲಯಾಳಂನ ‘ಒಪ್ಪಂ’ ರಿಮೇಕ್ ಸೇರಿದಂತೆ ಹಲವು ಚಿತ್ರಗಳು ಸೆಟ್ಟೇರಬೇಕಿದೆ. ಶಿವಣ್ಣ ಈ ವರ್ಷ ಅದ್ಧೂರಿ ಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿದ್ದರೂ, ಈ ಚಿತ್ರ ತಂಡಗಳು ಅವರ ಹುಟ್ಟು ಹಬ್ಬಕ್ಕೆ ತಮ್ಮದೇ ಕೊಡುಗೆ  ನೀಡಲು ಮುಂದಾಗಿವೆ.

ಈಗಾಗಲೇ ‘ಟಗರು’ ಚಿತ್ರತಂಡ ಶಿವಣ್ಣ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಪೊಲೀಸ್ ಪರಿಹಾರ ನಿಧಿಗೆ ₹೧ ಲಕ್ಷ ಪರಿಹಾರದ ಚೆಕ್ ನೀಡಿದೆ. ಎಡಿಜಿಪಿ ಭಾಸ್ಕರ್ ರಾವ್ ಅವರ ಮೂಲಕ ಚಿತ್ರದ ನಾಯಕ ನಟ ಶಿವರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ಸೂರಿ ಪರಿಹಾರದ ಚೆಕ್ ವಿತರಿಸಿದರು.‘ ಕರ್ನಾಟಕ ಪೊಲೀಸ್‌ರ ಸೇವೆ ಮಹತ್ವದ್ದು. ಈ ಚಿತ್ರದಲ್ಲೂ ಪೊಲೀಸ್ ಇಲಾಖೆಯನ್ನು ಬಳಸಿಕೊಂಡಿದ್ದೇವೆ. ಆ ಕಾರಣಕ್ಕಾಗಿ ಇಲಾಖೆಯ ಪರಿಹಾರ ನಿಧಿಗೆ ಈ ದೇಣಿಗೆ ನೀಡಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಶ್ರೀಕಾಂತ್. ‘

ಮಾಸ್‌ಲೀಡರ್’ ಚಿತ್ರತಂಡ ಶಿವಣ್ಣ ಹುಟ್ಟು ಹಬ್ಬಕ್ಕೆ ಮೇಕಿಂಗ್ ವಿಡಿಯೋ ಲಾಂಚ್ ಮಾಡಲು ಫ್ಲ್ಯಾನ್ ಮಾಡಿಕೊಂಡಿದೆ. ಅದನ್ನು ಸರಳವಾಗಿ ಬಿಡುಗಡೆ ಮಾಡಲೂ ನಿರ್ಧರಿಸಿದೆ. ಈ ನಡುವೆ ಶಿವಣ್ಣ ಹುಟ್ಟುಹಬ್ಬದ ಅದ್ಧೂರಿತನಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಕೆಲವು ಚಿತ್ರತಂಡಗಳೂ ಅದ್ದೂರಿ ಸಮಾರಂಭಗಳಿಗೆ ತಡೆ ಹಾಕಿಕೊಂಡಿದ್ದಾರೆ. ‘ಲಿರಿಕಲ್ ವಿಡಿಯೋ ಸಾಂಗ್ ಲಾಂಚ್‌ಗೆ ನಾವು ಸಿದ್ಧತೆ

ನಡೆಸಿದ್ದೆವು. ಆದರೆ ಶಿವಣ್ಣ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದು ಗೊತ್ತಾಗಿ ನಾವು ನಮ್ಮ ಯೋಜನೆ ಕೈ ಬಿಟ್ಟೆವು’ ಎನ್ನುತ್ತಾರೆ ‘ಈಸೂರು ದಂಗೆ’ ಚಿತ್ರದ ನಿರ್ದೇಶಕ ವೈಭವ್.

 

Follow Us:
Download App:
  • android
  • ios