ಮನೆ ಬೇರೆಯಾದರೂ ಮನಸ್ಸು ಒಂದೇ: ಶಿವರಾಜ್‌ಕುಮಾರ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 8, Sep 2018, 7:18 AM IST
Shivrajkumar shares strong bond with Punith rajkumar and Ragavendra Rajkumar family
Highlights

ನಾವೆಲ್ಲ ಬೇರೆ, ಬೇರೆ ಮನೆಯಲ್ಲಿರಬಹುದು. ಆದರೆ ಮನಸ್ಸು ಮಾತ್ರ ಒಂದೇ. ಬೇರೆಯವರನ್ನು ಕಂಡು ನಾವೆಂದೂ ಹೊಟ್ಟೆಕಿಚ್ಚು ಪಟ್ಟವರಲ್ಲ. ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಯಾವತ್ತಿಗೂ ಜಗಳ ಮಾಡಿಕೊಂಡವರಲ್ಲ.

- ತುಂಬಿದ ಸಭೆಯದು. ವೇದಿಕೆ ಮೇಲಿದ್ದ ಶಿವರಾಜ್ ಕುಮಾರ್, ತಮ್ಮ ಸಹೋದರರ ನಡುವಿನ ಬಾಂಧವ್ಯದ ಅಂತರಂಗ ತೆರೆದಿಡುತ್ತಾ ಹೊರಟರು. ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲೇ ಕುಳಿತಿದ್ದರು. ಹಿರಿಯಣ್ಣ ಶಿವರಾಜ್ ಕುಮಾರ್ ಏನು ಹೇಳುತ್ತಾರೋ ಅಂತ ಅವರಿಗೂ ಕುತೂಹಲ. ಶಿವಣ್ಣ ಅದ್ಯಾಕೆ ಹಾಗೆ ಹೇಳುತ್ತಿದ್ದಾರೆ ಅಂತ ಅಚ್ಚರಿ. ಅತ್ತ ಎದುರಿಗಿದ್ದ ಸಭಿಕರಿಗೂ ಅದೇ ಪ್ರಶ್ನೆ. ಆದರೂ, ಶಿವರಾಜ್‌ಕುಮಾರ್ ಯಾರೋ, ಎಂದೋ ಆಡಿದ ಮಾತಿಗೆ ತಿರುಗೇಟು ನೀಡುವ ಹಾಗೆ ತುಂಬಿದ ಸಭೆಯಲ್ಲೇ ಸಹೋದರರ ಒಗ್ಗಟ್ಟಿನ ಗುಟ್ಟು ಬಿಚ್ಚಿಟ್ಟರು.

‘ಅಪ್ಪಾಜಿ ಮತ್ತು ಅಮ್ಮ ನಮ್ಮನ್ನು ಬೆಳೆಸಿದ ರೀತಿಯೇ ಹಾಗೆ. ಅಪ್ಪು ನನಗಿಂತ ಹದಿಮೂರು ವರ್ಷ ಚಿಕ್ಕವನು. ಆತನ ಬೆಳವಣಿಗೆ ನೋಡಿದರೆ ಖುಷಿ ಆಗುತ್ತದೆ. ಆತ ಗೆದ್ದಾಗೆಲ್ಲ ಮೊದಲು ಸಂಭ್ರಮಿಸುವುದು ನಾನೇ. ರಾಘಣ್ಣ ಮತ್ತು ನಾನು ಗೆಳೆಯರಂತೆ ಇದ್ದವರು. ನಾವೆಂದಿಗೂ ಜಗಳ ಮಾಡಿಕೊಂಡಿಲ್ಲ. ನಾವೆಲ್ಲ ಬೇರೆ, ಬೇರೆ ಮನೆಯಲ್ಲಿರಬಹುದು, ಮನಸ್ಸು ಮಾತ್ರ ಒಂದೇ. ಫ್ಯಾಮಿಲಿ ಅಂದ್ಮೇಲೆ ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಸಹಜ. ಅದು ಇರಬೇಕು ಕೂಡ. ಅದು ಇದ್ದಾಗಲೇ ಜೀವನ. ನಮ್ಮ ನಡುವೆ ಏನೇ ಮನಸ್ತಾಪ ಇರಬಹುದು. ಆದರೆ ಅದನ್ನೆಲ್ಲ ಎಂದಿಗೂ ನಾವು ತೋರಿಸಿಕೊಂಡಿಲ್ಲ. ಸಣ್ಣ ಪುಟ್ಟ ಅಂತಹ ಮನಸ್ತಾಪ ಬಂದಾಗೆಲ್ಲ ಮತ್ತಷ್ಟು ಹತ್ತಿರವಾಗಿದ್ದೇವೆ. ಅದೇ ಜೀವನ ಅಲ್ವೇ’ ಎಂದ ಶಿವಣ್ಣ, ಸಣ್ಣದೊಂದು ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಯಾರನ್ನು ದೂರ ಮಾಡಬಾರದು ಎಂದು ಎಚ್ಚರಿಕೆ ಕೊಟ್ಟರು.

ಅವರ ಈ ಮಾತುಗಳಿಗೆ ವೇದಿಕೆ ಆಗಿದ್ದು ‘ಗ್ರಾಮಾಯಣ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ. ಇದು ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಚಿತ್ರ. ಮೂರ್ತಿ ಇದರ ನಿರ್ಮಾಪಕರು. ದೇವನೂರು ಚಂದ್ರು ನಿರ್ದೇಶಕ. ವಿನಯ್ ಅಭಿನಯದ ಚಿತ್ರ ಎನ್ನುವ ಕಾರಣಕ್ಕೆ ಮೂರು ಮಂದಿ ರಾಜ್ ಪುತ್ರರೂ ಅಲ್ಲಿಗೆ ಬಂದಿದ್ದರು. ಹಾಗೆಯೇ, ಅವರ ಮಾವ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಕೂಡ ಭಾಗವಹಿಸಿದ್ದರು. ಟೀಸರ್ ವೀಕ್ಷಿಸಿ ಮಾತಿಗೆ ನಿಂತ ಶಿವಣ್ಣ ಬಾಲ್ಯದ ದಿನಗಳಿಗೆ ಜಾರಿದರು.

ಶಿವಣ್ಣ ಈಜು ಕಲಿತಿದ್ದು, ಗಾಜನೂರು ಹೊಳೆಯಲ್ಲಿ ಮೀನು ಹಿಡಿದಿದ್ದು: ಆಗ ಅಪ್ಪು ಹುಟ್ಟಿರಲಿಲ್ಲ. ಫೈನಲ್ ಎಕ್ಸಾಂ ಮುಗಿದರೆ ಸಾಕು ನಾನು, ರಾಘಣ್ಣ, ಲಕ್ಷ್ಮಿ ಗಾಜನೂರಿಗೆ ಹೋಗುತ್ತಿದ್ದೆವು. ಪೂರ್ಣಿಮಾ ಬರುತ್ತಿರಲಿಲ್ಲ. ಅವಳಿಗೆ ಟ್ರಾವೆಲ್ ಅಷ್ಟಾಗಿ ಆಗುತ್ತಿರಲಿಲ್ಲ. ಅಂಬಾಸಿಡರ್ ಕಾರು, ಎಲ್ಲಪ್ಪ ಅಂತ ಡ್ರೈವರು. ಒಂದೇ ಕಾರಿನಲ್ಲಿ ೨೫ ಜನ. ಬೆಳಗ್ಗೆ ಮನೆ ಬಿಟ್ಟರೆ ಹತ್ತು ಗಂಟೆ ಹೊತ್ತಿಗೆ ಅಪ್ಪಾಜಿ ಶೂಟಿಂಗ್ ಸ್ಥಳಕ್ಕೆ ತಲುಪುತ್ತಿದ್ದೆವು. ಮಧ್ಯಾಹ್ನದ ಹೊತ್ತಿಗೆ ಮೈಸೂರು. ಅಲ್ಲಿ ಬಿರಿಯಾನಿ ಊಟ. ಅಲ್ಲಿಂದ ಮತ್ತೆ ಗಾಜನೂರು ಕಡೆ ಪ್ರಯಾಣ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ನಂಜನಗೂಡು. ಅಲ್ಲೊಂದು ನದಿ, ಅಲ್ಲಿ ಕಾರು ನಿಲ್ಲಿಸಿ, ಮನೆಯಿಂದ ತಂದ ತಿಂಡಿ ತಿಂದು ಊರು ಕಡೆ ಮುಖ. ಗಾಜನೂರಿಗೆ ಆಗ ಸೇತುವೆ ಇರಲಿಲ್ಲ. ಊರಿಗೆ ಹೋಗಬೇಕಾದ್ರೆ ಹೊಳೆ ದಾಟ ಬೇಕಿತ್ತು. ಕಾರು ಹೋಗುತ್ತಿರಲಿಲ್ಲ. ಅಲ್ಲಿಯೇ ನಿಲ್ಲಿಸಿ, ಕೈ ಕಾಲು ಮುಖ ತೊಳೆದು ಕೊಂಡು ನಡೆದು ಕೊಂಡೇ ಹೋಗುತ್ತಿದ್ದೆವು. ನಡೆಯುವುದರಲ್ಲೂ ಖುಷಿಯಿತ್ತು. ನಾನು ಈಜು ಕಲಿತಿದ್ದೇ ಗಾಜನೂರಿನಲ್ಲಿ.

ಒಂದ್ಸಾರಿ ಹೊಳೆಗೆ ಹೋಗಿದ್ದೆವು. ಅಲ್ಲಿ ನಂಗೆ ತುಂಬಾ ಫ್ರೆಂಡ್ಸ್ ಇದ್ದಾರೆ. ಅದರಲ್ಲಿ ಒಬ್ಬ, ಹಿಂದಿನಿಂದ ಬಂದು ಹೊಳೆಗೆ ನೂಕಿಬಿಟ್ಟ. ಆತ ಮಾತ್ರ ದಂಡೆಯಲ್ಲಿ ನಿಂತ್ಕೊಂಡ್ ಹಂಗೆಯಾ, ಹಂಗೆಯಾ.. ನೀರಲ್ಲಿ ಕೈ ಬಡಿ, ಕಾಲು ಮೇಲಕ್ಕೆ ಹಾರಿಸು ಎನ್ನುತ್ತಿದ್ದ. ಈಜು ಬರುತ್ತಿಲ್ಲ, ನಂಗೆ ಭಯ. ಜೀವ ಭಯ ನೋಡಿ, ಈಜು ಕಲಿತೇ ಬಿಟ್ಟೆ. ಯಾವ ಕೋಚು ಇಲ್ಲ, ಪೋಚು ಇಲ್ಲ. ಅಲ್ಲೇ ನಾವು ಮೀನು ಹಿಡಿಯುತ್ತಿದ್ದೆವು. ಗಾಳಕ್ಕೆ ಒಂದು ಎರೆಹುಳ ಕಟ್ಟಿ, ಅದಕ್ಕೆ ಥೂ ಅಂತ ಉಗಿದು, ಹೊಳೆಗೆ ಹಾಕುತ್ತಿದ್ದೆವು. ಸ್ವಲ್ಪ ಹೊತ್ತಲ್ಲೇ ಮೀನು ಗಾಳಕ್ಕೆ ಸಿಲುಕುತ್ತಿದ್ದವು. ಅವುಗಳನ್ನು ತಂದು ಮನೆಯಲ್ಲಿ ಸಾರು ಮಾಡ್ಕೊಂಡು ತಿನ್ನುತ್ತಿದ್ದೆವು. ಒಂದ್ಸಲ ಮಾವಿನ ಕಾಯಿ ಕದ್ದು ಒದೆ ತಿಂದಿದ್ದೆ.

ನನ್ನ ಎನರ್ಜಿ ಸೀಕ್ರೆಟ್ ಹಳ್ಳಿ
ಶಿವಣ್ಣ ಹಂಗೆ, ಶಿವಣ್ಣ ಹಿಂಗೆ ಅಂತೀರಲ್ಲ, ಅದೆಲ್ಲದಕ್ಕೂ ನಮ್ಮ ಹಳ್ಳಿ ಕಾರಣ. ಈ ಎನರ್ಜಿಗೆ ಹಳ್ಳಿಯೇ ಕಾರಣ. ಸಣ್ಣವರಿದ್ದಾಗ ಮರಕೋತಿ ಆಟ ಆಡುತ್ತಿದ್ದೆವು. ಅದ್ಕೆ ಸಿಕ್ಕಾಪಟ್ಟೆ ಎನರ್ಜಿ ಬೇಕು. ಮರ ಹತ್ತಿ, ಕೆಳಗೆ ಇಳಿದು ಆಡುವ ಆಟ ಅದು. ಈಗಲೂ ನಂಗೆ ಅದು ಇಷ್ಟ. ಹಳ್ಳಿಗೆ ಹೋದವರು ಸಿಕ್ಕಾಪಟ್ಟೆ ತಿರುಗಾಡುತ್ತಿದ್ದೆವು. ಎಮ್ಮೆ ಮೇಯಿಸುವುದು, ಈಜಾಡುವುದು, ಮೀನು ಹಿಡಿಯುವುದು. ಅಲ್ಲಿ ಸಿಕ್ಕಾಪಟ್ಟೆ ಫ್ರೆಂಡ್ಸ್ ಇದಾರೆ, ಅವರ ಮನೆಗೆಲ್ಲ ಊಟಕ್ಕೆ ಹೋಗುತ್ತಿದ್ದೆವು. ಅಲ್ಲಿ ಜಾತಿ ಭೇದವೇ ಇರುತ್ತಿರಲಿಲ್ಲ. ಯಾರು ಕೂಡ ಯಾವ ಜಾತಿ, ಯಾವ ಊರು ಅಂತೇನೆ ಕೇಳುತ್ತಿರಲಿಲ್ಲ. ಊರು ಸುತ್ತುವುದಕ್ಕೂ ಯಾರ ಅಡೆಚಣೆ ಇರುತ್ತಿರಲಿಲ್ಲ. 

loader