ಮಲಯಾಳಂ ಸೂಪರ್‌'ಸ್ಟಾರ್‌ ಮೋಹನ್‌ಲಾಲ್‌ ನಟನೆಯ ‘ಒಪ್ಪಂ'ನ ಕನ್ನಡದ ರಿಮೇಕ್‌'ನಲ್ಲಿ ಶಿವಣ್ಣ, ತೆಲುಗಿನಲ್ಲಿ ವೆಂಕಟೇಶ್‌, ಹಿಂದಿಯಲ್ಲಿ ಅಜಯ್‌ ದೇವಗನ್‌, ತಮಿಳಿಗೆ ಕಮಲ್‌ ಹಾಸನ್‌ ನಟಿಸುತ್ತಿದ್ದಾರಂತೆ. ಈ ಪೈಕಿ ಅಜಯ್‌, ಶಿವಣ್ಣ ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ.

ಮಲಯಾಳಂ ಸ್ಟಾರ್‌ ಮೋಹನ್‌ಲಾಲ್‌ರ ಮತ್ತೊಂದು ಸಿನಿಮಾ ಗಡಿ ದಾಟಿದೆ. ‘ದೃಶ್ಯಂ' ನಂತರ ‘ಒಪ್ಪಂ' ಮೇಲೆ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಚಿತ್ರರಂಗದವರ ಕಣ್ಣು ಬಿದ್ದಿದೆ. ಎಂದಿನಂತೆ ಈ ಬಾರಿಯೂ ಮೋಹನ್‌ಲಾಲ್‌ರ ಚಿತ್ರದಲ್ಲಿ ನಟಿಸಲು ಸ್ಟಾರ್‌ಗಳೇ ಮುಂದೆ ಬಂದಿದ್ದಾರೆ. ಹೀಗಾಗಿ ‘ಒಪ್ಪಂ' ರಿಮೇಕ್‌ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಕನ್ನಡದಲ್ಲಿ ಶಿವರಾಜ್‌ ಕುಮಾರ್‌, ತೆಲುಗಿನಲ್ಲಿ ವೆಂಕಟೇಶ್‌, ಹಿಂದಿಯಲ್ಲಿ ಅಜಯ್‌ ದೇವಗನ್‌, ತಮಿಳಿಗೆ ಕಮಲ್‌ ಹಾಸನ್‌ ಅವರ ಹೆಸರುಗಳು ‘ಒಪ್ಪಂ' ಸುತ್ತ ಕೇಳಿಬರುತ್ತಿದ್ದು, ಈ ಪೈಕಿ ಅಜಯ್‌ ದೇವಗನ್‌ ಹಾಗೂ ಶಿವರಾಜ್‌ಕುಮಾರ್‌ ಇಬ್ಬರು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಶಿವಣ್ಣ ‘ಕೋದಂಡರಾಮ' ನಂತರ ಯಾವುದೇ ರಿಮೇಕ್‌ ಚಿತ್ರದಲ್ಲೂ ನಟಿಸಿಲ್ಲ. 14 ವರ್ಷಗಳ ನಂತರ ಶಿವಣ್ಣ ಈಗ ರಿಮೇಕ್‌ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ನಿಜ, ನಾನು ರಿಮೇಕ್‌ ಚಿತ್ರದಲ್ಲಿ ನಟಿಸಬಾರದು ಅಂತ ನನಗೆ ನಾನೇ ಗಡಿ ಹಾಕಿಕೊಂಡಿದ್ದೆ. ಆದರೆ, ಮಲಯಾಳಂನ ‘ಒಪ್ಪಂ' ಕತೆ ನನ್ನನ್ನು ಇನ್ನಿಲ್ಲದಂತೆ ಕಾಡಿತು. ಅಲ್ಲಿ ಮೋಹಲ್‌'ಲಾಲ್‌ ನಟಿಸಿದ್ದಾರೆ, ಕೋಟಿ ಕೋಟಿ ಹಣ ಮಾಡಿರುವ ಸಿನಿಮಾ ಎನ್ನುವ ಕಾರಣಕ್ಕೆ ನನ್ನದು ಆಕರ್ಷಿಸಿಲ್ಲ. ನೀವೇ ಒಮ್ಮೆ ಆ ಚಿತ್ರವನ್ನು ನೋಡಿ. ಖಂಡಿತಾ ಇಂಥ ಕತೆಗಳು ಎಲ್ಲ ಭಾಷೆಯ ಪ್ರೇಕ್ಷಕರಿಗೂ ತಲುಪಬೇಕು ಎನ್ನುತ್ತೀರಿ. ಅಷ್ಟುತೂಕದ ಕತೆ ಅದು. ರೆಗ್ಯುಲರ್‌ ಚಿತ್ರಗಳನ್ನು ರಿಮೇಕ್‌ ಮಾಡುವ ಅನಿವಾರ್ಯತೆ ನನಗಿಲ್ಲ. ಕುರುಡನೊಬ್ಬನ ಅಪರೂಪದ ಕತೆಯನ್ನು ಒಳಗೊಂಡಿರುವ ಕಾರಣಕ್ಕೆ ‘ಒಪ್ಪಂ' ಅನ್ನು ಒಪ್ಪಿಕೊಂಡಿದ್ದೇನೆ. ಇಂಥ ಕತೆಗಳು ಕನ್ನಡದವರೇ ಬರೆದು ನನಗೆ ಹೇಳಿದರೆ ಖಂಡಿತಾ ನಟಿಸುವೆ. ಒಳ್ಳೆಯ ಸಿನಿಮಾ ಕನ್ನಡಿಗರಿಗೆ ಯಾಕೆ ದಕ್ಕಬಾರದು ಎನ್ನುವುದಷ್ಟೇ ನನ್ನ ಉದ್ದೇಶ' ಎನ್ನುತ್ತಾರೆ ಶಿವಣ್ಣ. ಹಾಗೆ ನೋಡಿದರೆ ಪ್ರಿಯಾದರ್ಶನ್‌ ನಿರ್ದೇಶನದ ಈ ಚಿತ್ರವನ್ನು ತಾವು ಮಾಡಿದರೆ ಹೇಗೆಂಬ ಕುತೂಹಲ ಸ್ವತಃ ಶಿವಣ್ಣರಿಗೂ ಇದೆಯಂತೆ.

ಇನ್ನು ‘ಒಪ್ಪಂ'ನ ಹಿಂದಿ ವರ್ಷನ್‌ ಕಡೆ ಮುಖ ಮಾಡಿದರೆ, ಅಜಯ್‌ ದೇವಗನ್‌ ಈಗಾಗಲೇ ಓಕೆ ಹೇಳಿದ್ದಾರೆ. ‘ಶಿವಾಯ್‌' ಚಿತ್ರದ ಸೋಲಿನ ಕಹಿಯಲ್ಲಿರುವ ಅಜಯ್‌ ಮತ್ತೆ ರಿಮೇಕ್‌ನ ಮೊರೆ ಹೋಗಿದ್ದಾರೆ. ಮತ್ತೆ ಅವರನ್ನು ಕೈಹಿಡಿಯಲು ಬಂದಿರೋದು ಮೋಹನ್‌ಲಾಲ್‌! ಹೌದು, ಈ ಹಿಂದೆ ಮಲಯಾಳಂ ಚಿತ್ರ ‘ದೃಶ್ಯಂ'ನ ಹಿಂದಿ ರಿಮೇಕ್‌ನಲ್ಲಿ ಅಜಯ್‌ ನಟಿಸಿದ್ದರು. ಹಿಂದಿ ‘ದೃಶ್ಯಂ' ಸೂಪರ್‌ ಹಿಟ್‌ ಆಗಿತ್ತು. ರೂ. 200 ಕೋಟಿ ಆಸುಪಾಸು ಗಳಿಕೆ ಕಂಡಿತ್ತು. ಈಗ ಅದೇ ಲಾಲ್‌ ಅವರ ‘ಒಪ್ಪಂ' ಗೆದ್ದಿರುವುದರಿಂದ, ಈ ಚಿತ್ರ ಕೂಡ ಹಿಂದಿಗೆ ರಿಮೇಕ್‌ ಆಗುತ್ತಿದೆ. ಪ್ರಿಯದರ್ಶನ್‌ ಇದನ್ನು ನಿರ್ದೇಶಿಸುತ್ತಿದ್ದು, ಅಜಯ್‌ ದೇವಗನ್‌ ನಾಯಕರಾಗಲಿದ್ದಾರೆ. ‘ದೃಶ್ಯಂ'ನಂತೆ ‘ಒಪ್ಪಂ' ಕೂಡ ಕ್ರೈಮ್‌ ಥ್ರಿಲ್ಲರ್‌ ಆಗಿರೋದ್ರಿಂದ ಅಜಯ್‌'ಗೆ ಕತೆ ಇಷ್ಟವಾಗಿದೆಯಂತೆ.

(ಕನ್ನಡಪ್ರಭ ವಾರ್ತೆ)