ಶೇ.70ರಷ್ಟನ್ನಾದರೂ ಮಾಡಲು ಪ್ರಯತ್ನಿಸುತ್ತೇನೆ. ಕನ್ನಡಕ ಹಾಕಿಕೊಂಡು ಕುರುಡನಂತೆ ನಟಿಸುವುದು ಸುಲಭ. ಆದರೆ ನಾನು ಹಾಗೆ ಮಾಡುತ್ತಿಲ್ಲ

ಸುಮ್ಮನೆ ಕಮರ್ಷಿಯಲ್ ಉದ್ದೇಶಕ್ಕಾಗಿ ನಾನು ರಿಮೇಕ್ ಮಾಡುವುದಿಲ್ಲ. ಕೆಲವು ಒಳ್ಳೆಯ ಅಂಶಗಳಿರುವ ಸಿನಿಮಾ ಇದ್ದರೆ, ನನ್ನ ಮನಸ್ಸಿಗೆ ಅದು ಇಷ್ಟವಾದರೆ ಅಂಥ ಚಿತ್ರಗಳ ರಿಮೇಕ್‌ನಲ್ಲಿ ನಟಿಸಲು ನನ್ನದೇನೂ ಅಭ್ಯಂತರ ಇಲ್ಲ’ ಹೀಗಂದಿದ್ದು ಶಿವರಾಜ್‌ಕುಮಾರ್. ಅವರು ಈ ಮಾತು ಹೇಳಿದ್ದು ‘ಕವಚ’ಮುಹೂರ್ತದ ಸಂದರ್ಭದಲ್ಲಿ. ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಒಪ್ಪಂ’ ಕನ್ನಡಕ್ಕೆ ಬರುತ್ತಿದೆ. ‘ಕವಚ’ ಹೆಸರಲ್ಲಿ ಈ ಚಿತ್ರ ಮುಹೂರ್ತ ಕಂಡಿದೆ. ಈ ಹಿಂದೆ ಯಾವ ರಿಮೇಕ್ ಸಿನಿಮಾವನ್ನೂ ಒಪ್ಪದ ಶಿವರಾಜ್ ಕುಮಾರ್ ರಿಮೇಕ್ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಈ ಚಿತ್ರದ ವಿಶೇಷ. ಜಿವಿಆರ್ ವಾಸು ಚಿತ್ರದ ನಿರ್ದೇಶಕ. ಇದು ಅವರಿಗೆ ಚೊಚ್ಛಲ ಕನ್ನಡ ಸಿನಿಮಾ.

ಈ ಹಿಂದೆ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರತಂಡದಲ್ಲಿ ಕೆಲಸ ಮಾಡಿದ್ದ ಅವರು, ಶಿವರಾಜ್‌ಕುಮಾರ್ ಜತೆ ಸಿನಿಮಾ ಮಾಡಬೇಕು ಎಂದು ಆಸೆ ಪಟ್ಟಿದ್ದರಂತೆ. ಅದು ‘ಕವಚ’ ಮೂಲಕ ಈಡೇರುತ್ತಿದೆ. ಶಿವರಾಜ್ ಕುಮಾರ್ ಅವರದ್ದು ಇಲ್ಲಿ ಕುರುಡನ ಪಾತ್ರ. ಮೂಲ ಚಿತ್ರದಲ್ಲಿ ಮಲಯಾಳಂನ ಹೆಸರಾಂತ ನಟ ಮೋಹನ್‌ಲಾಲ್ ಅಭಿನಯಿಸಿದ್ದರು. ‘ಮೋಹನ್‌ಲಾಲ್ ಅವರಂತಹ ಶ್ರೇಷ್ಠ ನಟರಿಗೆ ನಾನು ಸರಿಸಾಟಿ ಅಲ್ಲ. ಅವರು ಮಾಡಿದ್ದರಲ್ಲಿ ಶೇ.70ರಷ್ಟನ್ನಾದರೂ ಮಾಡಲು ಪ್ರಯತ್ನಿಸುತ್ತೇನೆ. ಕನ್ನಡಕ ಹಾಕಿಕೊಂಡು ಕುರುಡನಂತೆ ನಟಿಸುವುದು ಸುಲಭ. ಆದರೆ ನಾನು ಹಾಗೆ ಮಾಡುತ್ತಿಲ್ಲ. ಈಗಿರುವ ಗೆಟಪ್‌ನಲ್ಲಿಯೇ ಸಹಜವಾಗಿ ಅಭಿನಯಿಸಲಿದ್ದೇನೆ. ಈ ವಿಚಾರದಲ್ಲಿ ನಾನು ನಿರ್ದೇಶಕರನ್ನು ಅವಲಂಬಿಸಿದ್ದೇನೆ’ ಎನ್ನುತ್ತಾರೆ ಶಿವರಾಜ್‌ಕುಮಾರ್. ಚಿತ್ರದಲ್ಲಿ ಬರುವ ಓರ್ವ ಮಹಿಳಾ

ಪೊಲೀಸ್ ಪಾತ್ರಕ್ಕೆ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಬಣ್ಣ ಹಚ್ಚುತ್ತಿದ್ದಾರೆ. ‘ಸೂರ್ಯ ವಂಶ’ ಹಾಗೂ ‘ಓ ನನ್ನ ನಲ್ಲೆ’ ಚಿತ್ರಗಳಲ್ಲಿ ಅಭಿನಯಿಸಿ ಹೋದ ಹಲವು ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಒಂದೊಳ್ಳೆ ಪಾತ್ರದಲ್ಲಿ ಅಭಿನಯಿಸುವ ಅವಕಾಶವೇ ತಾವಿಲ್ಲಿಗೆ ಬರಲು ಕಾರಣ ಎಂದರು ಇಶಾ. ‘ಬಾಕ್ಸರ್’ ಖ್ಯಾತಿಯ ಕೃತಿಕಾ ಜಯಕುಮಾರ್ ಇಲ್ಲಿ ನಾಯಕಿ. ವಸಿಷ್ಠ ಸಿಂಹ ವಿಲನ್ ಪಾತ್ರಧಾರಿ. ‘ಟಗರು’, ‘ಮಫ್ತಿ’ ಬಳಿಕ ಶಿವರಾಜ್‌ಕುಮಾರ್ ಜತೆ ಅವರಿಗೆ ಇದು ಸತತ ಮೂರನೇ ಚಿತ್ರ. ‘ಶಿವಣ್ಣನ ಜತೆ ಒಂದು ಬಾರಿ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೂ ಸಾಕು ಎಂದು ಅನೇಕ ಕಲಾವಿದರು ಕಾಯುತ್ತಿರುತ್ತಾರೆ. ಅಂಥದ್ದರಲ್ಲಿ ನನಗೆ ಹ್ಯಾಟ್ರಿಕ್ ಹೀರೋ ಜತೆ ಹ್ಯಾಟ್ರಿಕ್ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ. ಈ ವಿಚಾರದಲ್ಲಿ ನಾನು ಅದೃಷ್ಟವಂತ’ ಎಂದು ಖುಷಿ ಹಂಚಿಕೊಂಡರು ವಸಿಷ್ಠ. ಎಂವಿವಿ ಸತ್ಯನಾರಾಯಣ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರಾಹುಲ್ ಶ್ರೀವಾಸ್ತವ್ ಛಾಯಾಗ್ರಹಣ ಮಾಡಲಿದ್ದಾರೆ.