ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿಗಳಾದ ದೊಡ್ಡ ಗಣೇಶ್, ಸಂತೋಷ್ ಹಾಗೂ ಕಾವ್ಯಾ ಶಾಸ್ತ್ರಿ ಕೂಡ ಪ್ರಥಮ್ ಆಟವನ್ನು ಮೆಚ್ಚಿಕೊಂಡಿದ್ದಾರೆ.
ಬೆಂಗಳೂರು(ಜ. 27): ಕನ್ನಡ ಬಿಗ್ ಬಾಸ್'ನ ನಾಲ್ಕನೇ ಸೀಸನ್'ನ ಫಿನಾಲೆಗೆ ಕ್ಷಣಗಣನೆ ನಡೆದಿದೆ. ಇನ್ನೊಂದು ದಿನದಲ್ಲಿ ಗೆಲ್ಲೋದು ಯಾರು ಎಂಬುದು ತಿಳಿಯುತ್ತದೆ. ಇಲ್ಲಿಯವರೆಗೆ ಉಳಿದುಕೊಂಡಿರುವ ಐದು ಸ್ಪರ್ಧಿಗಳ ಪೈಕಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಗಳು ನಡೆಯುತ್ತಿವೆ. ಬಿಗ್'ಬಾಸ್'ನ ಮಾಜಿ ಸ್ಪರ್ಧಿ ಶೀತಲ್ ಶೆಟ್ಟಿ ಪ್ರಕಾರ ರೇಖಾ ಅಥವಾ ಪ್ರಥಮ್ ಅವರಿಬ್ಬರಲ್ಲೊಬ್ಬರು ಬಿಗ್ ಬಾಸ್ ಗೆಲ್ಲಬೇಕಂತೆ. ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶೀತಲ್ ಶೆಟ್ಟಿ, ತಮ್ಮ ನೆಚ್ಚಿನ ಕಂಟೆಸ್ಟೆಂಟ್ ರೇಖಾ ಎಂದು ಹೇಳಿದ್ದಾರೆ.
ರೇಖಾ ಬಗ್ಗೆ:
"ರೇಖಾ ಅವರ ಬಿಹೇವಿಯರ್ ಮತ್ತು ಹ್ಯೂಮನ್ ನೇಚರ್ ತುಂಬಾ ಇಷ್ಟ ಆಯ್ತು. ಬಹಳ ಆತ್ಮಗೌರವದಿಂದ ತಮ್ಮನ್ನು ಪ್ರಸ್ತುತಪಡಿಸಿಕೊಳ್ಳುವುದು, ಅವರ ಡಿಸಿಶನ್ ಮೇಕಿಂಗ್ ಇರಬಹುದು.. ಹಲವು ವಿಚಾರಗಳಲ್ಲಿ ರೇಖಾ ಅವರ ಗುಣ ನಿಜಕ್ಕೂ ಮೆಚ್ಚುಗೆಗೆ ಅರ್ಹ. ಟ್ಯಾಸ್ಕ್ ವಿಷಯಕ್ಕೆ ಬಂದರೆ ಅವರು ನಿಂತುಕೊಳ್ಳುವಂತಹ ರೀತಿ ಬೆರಗು ಮೂಡಿಸುತ್ತಿತ್ತು. ಅವರ ಇಂಟೆನ್ಸಿಟಿಯು ಪರದೆ ಮೇಲೆ ಸಂಪೂರ್ಣವಾಗಿ ಕಾಣದೇ ಇದ್ದಿರಬಹುದು. ಹೆಣ್ಣು ಕುಲಕ್ಕೆ ಅವರು ಮಾದರಿ. ಅವರು ಕಂಪ್ಲೀಟ್ ವುಮ್ಯಾನ್. ಅವರು ಈ ಸೀಸನ್ ಗೆದ್ದರೆ ಬಿಗ್ ಬಾಸ್ ಶೋಗೆ ಒಂದು ಗೌರವ ಬರುತ್ತದೆ. ರೇಖಾ ಅವರೇ ನನ್ನ ಫಸ್ಟ್ ಚಾಯ್ಸ್ ವಿನ್ನರ್" ಎಂದು ಶೀತಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಥಮ್ ಬಗ್ಗೆ:
"ರೇಖಾ ಅವರಿಗೆ ಕಾಂಟ್ರಾಸ್ಟ್ ಗುಣ ಪ್ರಥಮ್. ರೇಖಾ ಗೆಲ್ಲದಿದ್ದರೆ ನನ್ನ ಸೆಕೆಂಡ್ ಚಾಯ್ಸ್ ಈ ಪ್ರಥಮ್. ತುಂಬಾ ಇರಿಟೇಟ್ ಮಾಡುವಂಥ ಕ್ಯಾರೆಕ್ಟರ್ ಆತನದ್ದು. ಆದರೆ ಆತ ಆಡುವ ಮಾತಿನಲ್ಲಿ ಸತ್ಯ ಇರುತ್ತಿತ್ತು. ತುಂಬಾ ನೇರವಾಗಿ ಹೇಳುವ ಮನುಷ್ಯ" ಎಂದು ಪ್ರಥಮ್ ಬಗ್ಗೆ ಶೀತಲ್ ವ್ಯಾಖ್ಯಾನ ಮಾಡಿದ್ದಾರೆ.
"ಅಲ್ಲಿದ್ದ ಇತರ ಕಂಟೆಸ್ಟೆಂಟ್'ಗಳಿಗೆ ಸ್ವಲ್ಪಸ್ವಲ್ಪ ಇಮೇಜ್ ಇದ್ದುದ್ದರಿಂದ ಕೆಲ ಮಾತುಗಳನ್ನು ಹೊರಗೆ ಹೇಳಲಾಗುತ್ತಿರಲಿಲ್ಲ. ಹೇಳಬೇಕೋ, ಬೇಡವೋ ಎಂಬ ಯೋಚನೆ ಇರುತ್ತಿತ್ತು. ಆದರೆ ಪ್ರಥಮ್ ಹಾಗಿರಲಿಲ್ಲ. ತನ್ನ ಮನಸ್ಸಿನಲ್ಲಿದ್ದುದನ್ನು ಯಾವುದೇ ತಡೆಯಿಲ್ಲದೇ ಹೇಳುತ್ತಿದ್ದ. ಆತ ಮಾತಿನಲ್ಲಿ ಸತ್ಯಾಂಶವೂ ಇರುತ್ತಿತ್ತು" ಎಂದು ಶೀತಲ್ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸುವರ್ಣನ್ಯೂಸ್'ಗೆ ಕರೆ ಮಾಡಿದ ವೀಕ್ಷಕರ ಪೈಕಿ ಬಹಳ ಮಂದಿ ಪ್ರಥಮ್'ಗೆ ಬೆಂಬಲ ಕೊಟ್ಟರೆ, ಕೀರ್ತಿ ರೇಖಾ ಅವರಿಗೂ ಸಾಕಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದುಂಟು. ಹಾಗೆಯೇ, ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿಗಳಾದ ದೊಡ್ಡ ಗಣೇಶ್, ಸಂತೋಷ್ ಹಾಗೂ ಕಾವ್ಯಾ ಶಾಸ್ತ್ರಿ ಕೂಡ ಪ್ರಥಮ್ ಆಟವನ್ನು ಮೆಚ್ಚಿಕೊಂಡಿದ್ದಾರೆ.
