ಒಂದಿಷ್ಟುಕಾಮಿಡಿ ಮಾತುಗಳು, ದೃಶ್ಯಗಳನ್ನೇ ನಂಬಿಕೊಂಡು ಬಂದಿರುವ ಸಿನಿಮಾ ‘ಅಮೆರಿಕ ಇನ್‌ ಅಧ್ಯಕ್ಷ’. ಇದು ಮಲಯಾಳಂನ ‘2 ಸ್ಟೇಟ್ಸ್‌’ ಚಿತ್ರದ ರೀಮೇಕ್‌. 

 ಬೇರೊಂದು ಭಾಷೆಯಿಂದ ರೀಮೇಕ್‌ ಮಾಡುವಂತಹ ಅದ್ಭುತ ಚಿತ್ರವಲ್ಲ ಇದು. ಆದರೂ, ಏನಾದರೂ ನಗುವಂತಿದ್ದರೆ ಅದು ಚಿತ್ರದ ನಿರ್ದೇಶಕ ಯೋಗಾನಂದ್‌ ಮುದ್ದಾನ್‌ ಬರೆದಿರುವ ಸಂಭಾಷಣೆಗಳು, ಶರಣ್‌ರ ಮ್ಯಾನರಿಸಂನಿಂದ ಮಾತ್ರ.

ಫಸ್ಟ್‌ ಹಾಫ್‌ ಮನರಂಜನೆ, ಸೆಕೆಂಡ್‌ ಹಾಫ್‌ ಎಣ್ಣೆಯ ಘಾಟು, ಪ್ರೀ ಕ್ಲೈಮ್ಯಾಕ್ಸ್‌ ಸೆಂಟಿಮೆಂಟ್‌... ಹೀಗೆ ಮೂರು ಸ್ತಂಭಗಳನ್ನಾಗಿಸಿಕೊಂಡು ರೀಮೇಕ್‌ ಚಿತ್ರಕ್ಕೆ ಚಿತ್ರಕತೆ ಜೋಡಿಸಿಕೊಂಡಿದ್ದಾರೆ ನಿರ್ದೇಶಕರು. ಹೀಗಾಗಿ ಇದೊಂದು ರೆಗ್ಯೂಲರ್‌ ಶರಣ್‌ ಸಿನಿಮಾ ಎನ್ನುವುದು ಬಿಟ್ಟು ಹೊಸದನ್ನು ನಿರೀಕ್ಷೆ ಮಾಡಿಕೊಂಡು ಹೋದರೆ ನಿರಾಸೆ ಕಟ್ಟಿಟ್ಟಬುತ್ತಿ!

ಸೆಟ್‌ನಲ್ಲಿ ಶರಣ್‌ಗೆ ಕಾಟ ಕೊಡೋ ರಾಗಿಣಿ ಕಾಮಿಡಿ ಕ್ವೀನ್ ಆಗ್ತಾರಾ?

ತಾರಾಗಣ: ಶರಣ್‌, ರಾಗಿಣಿ, ಅವಿನಾಶ್‌, ಸಾಧು ಕೋಕಿಲ, ಪ್ರಕಾಶ್‌ ಬೆಳವಾಡಿ, ಸುಂದರ್‌, ಶಿವರಾಜ್‌ ಕೆ ಆರ್‌ ಪೇಟೆ, ಅಶೋಕ್‌, ಚಿತ್ರಾ ಶೆಣೈ, ತಬಲಾ ನಾಣಿ, ಮಕರಂದ್‌ ದೇಶಪಾಂಡೆ, ದಿಶಾ ಪಾಂಡೆ, ರಂಗಾಯಣ ರಘು.

ನಿರ್ದೇಶನ: ಯೋಗಾನಂದ್‌ ಮುದ್ದಾನ್‌

ನಿರ್ಮಾಣ: ವಿಶ್ವಪ್ರಸಾದ್‌ ಟಿ ಜಿ

ಸಂಗೀತ: ವಿ ಹರಿಕೃಷ್ಣ

ಛಾಯಾಗ್ರಹಣ: ಸುಧಾಕರ್‌ ಎಸ್‌ ರಾಜ್‌

ವಿದೇಶದಲ್ಲಿ ನೆಲೆಸಿರುವ ಎರಡು ಕುಟುಂಬಳಿಗೆ ಒಬ್ಬಳೇ ಮಗಳು. ಈ ಎರಡು ಕುಟುಂಬಗಳ ಪೈಕಿ ಈಕೆ ಯಾರ ಮಗಳು ಎನ್ನುವುದು ಒಂದು ತಿರುವು. ಆದರೆ, ಶ್ರೀಮಂತ ಹುಡುಗಿ ಹಳ್ಳಿಯಲ್ಲಿರುವ ಕನ್ನಡದ ಹುಡುಗನನ್ನು ಯಾಕೆ ಮದುವೆ ಆಗುತ್ತಾಳೆ ಎಂಬುದು ಮತ್ತೊಂದು ಟ್ವಿಸ್ಟ್‌. ಹೀಗೆ ಅಮೆರಿಕ ಹುಡುಗಿಯನ್ನು ಮದುವೆಗೆ ಊರು ಬಿಟ್ಟು ವಿದೇಶ ಸೇರುವ ನಾಯಕ, ತಾನು ಮದುವೆ ಆಗಿರುವ ನಾಯಕಿಯ ಹಾಡು ಪಾಡು, ಅವರ ಕುಟುಂಬಗಳಲ್ಲಿನ ಬಿರುಕುಗಳು, ಕುಡಿತಕ್ಕೆ ದಾಸಿಯಾಗಿರುವ ನಾಯಕಿ, ಅದರಿಂದ ಬಿಡಿಸುವ ಪ್ರಯತ್ನ ಮಾಡುವ ನಾಯಕ, ದುಡ್ಡಿಗಾಗಿ ತನ್ನ ಮದುವೆ ಆಗಿದ್ದಾನೆಂದು ಭಾವಿಸುವ ನಾಯಕಿ... ಇವೆಲ್ಲವೂ ಮುಂದೆ ಏನಾಗುತ್ತದೆ ಎಂಬುದೇ ‘ಅಮೆರಿಕ ಇನ್‌ ಅಧ್ಯಕ್ಷ’ ಚಿತ್ರದ ಕತೆ. ಹೋಗ್ತಾ ಹೋಗ್ತಾ ಗಂಬೀರವಾಗಿ ಸಾಗುವ ಈ ಚಿತ್ರದಲ್ಲಿ ಮನರಂಜನೆ ಮಾಯವಾಗುತ್ತದೆ. ಮೂಲ ಚಿತ್ರ ನೋಡಿದವರಿಗೆ ಅಧ್ಯಕ್ಷ ಬೋರ್‌ ಹೊಡೆಸಬಹುದು.

ರಾಗಿಣಿ ತರಲೆಗೆ ಶರಣಾಗತ!

ಚಿತ್ರದ ಮೊದಲ ಭಾಗ ಒಂಚೂರು ರಿಲ್ಯಾಕ್ಸ್‌ ಅನಿಸುತ್ತದೆ. ಈ ಭಾಗದಲ್ಲಿ ನಗು ಉಚಿತವಾಗಿ ದೊರೆಯಲಿದೆ. ವಿರಾಮದ ನಂತರ ಇದು ಶರಣ್‌ ಸಿನಿಮಾ ಅನಿಸಲ್ಲ. ಆದರೂ ಶರಣ್‌ ಎಂದಿನಂತೆ ಎನರ್ಜಿಟಿಕ್‌ ಆಗಿ ನಟಿಸಿದ್ದಾರೆ. ನಟಿ ರಾಗಿಣಿ ನೋಡಲು ಚೆಂದ.

ಶರಣ್‌ ಚಿತ್ರಕ್ಕೆ ಸಾಲು ಸಾಲು ರಜೆಯ ಅಡ್ವಾಂಟೇಜ್‌!

ಶಿವರಾಜ್‌ ಕೆ ಆರ್‌ ಪೇಟೆ, ತಬಲ ನಾಣಿ ಅವರ ಪಾತ್ರಗಳೇ ಪ್ರೇಕ್ಷಕನ ಮನರಂಜನೆಯ ಜೀವಾಳ. ಹಿಂದಿಯ ಮಕರಂದ್‌ ದೇಶಪಾಂಡೆ ಪಾತ್ರವೇ ಅಗತ್ಯವಿರಲಿಲ್ಲ. ವಿ ಹರಿಕೃಷ್ಣ ಸಂಗೀತದಲ್ಲಿ ಹೊಸದು ಅಂತೇನು ಇಲ್ಲ, ಎಲ್ಲೋ ಕೇಳಿದ ರಾಗಗಳೇ ಮರುಕಳಿಸಿದಂತಿವೆ. ಸುಧಾಕರ್‌ ಎಸ್‌ ರಾಜ್‌ ಸೇರಿದಂತೆ ಚಿತ್ರದ ಮೂವರು ಛಾಯಾಗ್ರಹಕರು, ಚಿತ್ರದ ಪ್ರತಿ ದೃಶ್ಯವನ್ನೂ ನೋಡುಗರಿಗೆ ಹತ್ತಿರವಾಗಿಸುವ ಸಾಹಸ ಮಾಡಿದ್ದಾರೆ.