ಪುಟ್ಟಗೌರಿ ಮದುವೆಗೆ ರಂಜನಿ ರಾಘವನ್ ವಿದಾಯ |  ಸತತ ಐದು ವರ್ಷಗಳ ಕಾಲ ಆ ಧಾರಾವಾಹಿಯಲ್ಲಿ ಕಥಾ ನಾಯಕಿ ಆಗಿ ಅಭಿನಯಿಸಿದ್ದ ರಂಜನಿ ರಾಘವನ್ ಅದರಿಂದ ಧಿಡೀರ್ ಹೊರ ಬಂದಿರುವುದು ತೀವ್ರ ಕುತೂಹಲ ಹುಟ್ಟಿಸಿದೆ | 

ಬೆಂಗಳೂರು (ಅ. 10): ಕಿರುತೆರೆಯ ಜನಪ್ರಿಯ ತಾರೆ ‘ಪುಟ್ಟಗೌರಿ ಮದುವೆ’ಗೆ ಬದಲಾವಣೆಯ ಕಾಲ ಬಂದಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದ ಪುಟ್ಟಗೌರಿ ಪಾತ್ರಧಾರಿ ನಟಿ ರಂಜನಿ ರಾಘವನ್ ಹೊರ ಬಂದಿದ್ದಾರೆ.

ಹಾಗಂತ ಅವರೇ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ತಾವು ಹೊರ ಬಂದಿರುವ ಬಗ್ಗೆ ಯಾವುದೇ ಕಾರಣ ನೀಡಿಲ್ಲವಾದರೂ, ಸತತ ಐದು ವರ್ಷಗಳ ಕಾಲ ಆ ಧಾರಾವಾಹಿಯಲ್ಲಿ ಕಥಾ ನಾಯಕಿ ಆಗಿ ಅಭಿನಯಿಸಿದ್ದ ರಂಜನಿ ರಾಘವನ್ ಅದರಿಂದ ಧಿಡೀರ್ ಹೊರ ಬಂದಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.

ಬಿಗ್‌ಬಾಸ್ ಮನೆಗೆ ಹೋಗ್ತಾರಂತೆ ಪುಟ್ಟಗೌರಿ?

‘ಒಂದಲ್ಲ, ಎರಡಲ್ಲ ಸತತ ಮೂರೂವರೆ ವರ್ಷಗಳಿಂದ ನಾನು ಪುಟ್ಟಗೌರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆ ಪಾತ್ರದೊಂದಿಗೆ ನನಗೆ ನೇಮ್ ಆ್ಯಂಡ್ ಫೇಮ್ ಎರಡೂ ಸಿಕ್ಕಿವೆ. ಆದರೆ, ಒಂದೇ ರೀತಿಯ ಪಾತ್ರ, ಒಂದೇ ವಾತಾವರಣ. ನಂಗ್ಯಾಕೋ ಸಾಕು ಎನಿಸಿದೆ. ಪಾತ್ರದ ಅಭಿನಯದಲ್ಲಿ ಏಕಾತನತೆ ಕಾಣಿಸಿಕೊಂಡು ಹೊಸ ಬಗೆಯ ಪಾತ್ರಗಳಿಗೆ ನಾನು ಹೊಂದಿಕೊಳ್ಳುತ್ತೆನೆಯೋ ಇಲ್ಲವೋ ಎನ್ನುವ ಭಯ ಶುರುವಾಗಿದೆ.

ಹಾಗಾಗಿ ಒಂದಷ್ಟು ಬದಲಾವಣೆ ಇರಲಿ ಅಂತಲೇ ಪುಟ್ಟ ಗೌರಿ ಪಾತ್ರಕ್ಕೆ ವಿದಾಯ ಹೇಳಿದ್ದೇನೆ. ಜತೆಗೆ ನಾನೀಗ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಎರಡನೇ ಸಿನಿಮಾ ಚಿತ್ರೀಕರಣ ಈಗಷ್ಟೇ ಮುಗಿದಿದೆ. ಇಲ್ಲಿ ಇನ್ನಷ್ಟು ಗುರುತಿಸಿಕೊಳ್ಳೊಣ ಅಂತ ನಿರ್ಧಾರವೇ ನಾನು ಅಲ್ಲಿಂದ ಹೊರ ಬರಲು ಪ್ರಮುಖ ಕಾರಣ’ ಅನ್ನೋದು ನಟಿ ರಂಜನಿ ರಾಘವನ್ ನೀಡುವ ಸ್ಪಷ್ಟನೆ.

ಮೂಲಗಳ ಪ್ರಕಾರ ರಂಜನಿ ರಾಘವನ್ ನಿರ್ಗಮನಕ್ಕೆ ಇದಿಷ್ಟೇ ಕಾರಣ ಅಲ್ಲ. ಪುಟ್ಟಗೌರಿ ಮದುವೆ ಧಾರಾವಾಹಿಯ ಕತೆಗೆ ಈಗ ಇನ್ನೊಂದು ಪಾತ್ರ ಸೇರಿಕೊಂಡಿದೆ. ಆ ಪಾತ್ರದ ಹೆಸರು ಮಂಗಳ ಗೌರಿ. ಇದು ಪುಟ್ಟಗೌರಿಗಿಂತಲೂ ಸ್ಟ್ರಾಂಗ್ ಆದ ಪಾತ್ರವಂತೆ. ಇಷ್ಟು ದಿನ ಪುಟ್ಟಗೌರಿ ನೋಡಿ ಮೆಚ್ಚಿಕೊಂಡವರು, ಸಹಿಸಿಕೊಂಡವರು, ಮನರಂಜನೆ ಅನುಭವಿಸಿದವರಿಗೂ ಒಂದಷ್ಟು ಚೇಂಜಸ್ ಇರಲಿ ಅಂತ ಮಂಗಳ ಗೌರಿ ಪಾತ್ರವನ್ನು ತರಲು ನಿರ್ಧಾರ
ಮಾಡಿದೆಯಂತೆ ಧಾರಾವಾಹಿ ತಂಡ.

ಆ ಪಾತ್ರ ಬಂದರೆ ಪುಟ್ಟಗೌರಿ ಇಮೇಜ್‌ಗೆ ಧಕ್ಕೆ ಆಗುತ್ತೆ ಎನ್ನುವ ಕಾರಣಕ್ಕಾಗಿಯೇ ರಂಜನಿ ರಾಘವನ್, ಪುಟ್ಟಗೌರಿ ಪಾತ್ರದಿಂದ ಹೊರಬಂದಿದ್ದಾರಂತೆ ಎನ್ನುತ್ತಿವೆ ಮೂಲಗಳು. ಸದ್ಯಕ್ಕೆ ಇದೇ ನಿಜ ಅಂತ ರಂಜನಿ ರಾಘವನ್ ಒಪ್ಪಿಕೊಳ್ಳದಿದ್ದರೂ,‘ಪುಟ್ಟಗೌರಿ ಪಾತ್ರದ ಮೂಲಕ ವೀಕ್ಷಕರು ನನ್ನನ್ನು ನೋಡಿದ ರೀತಿಯೇ ಬೇರೆ. ಇಲ್ಲಿ ತನಕ ಕಥಾ ನಾಯಕಿ ಅಂತಲೇ ನನ್ನನ್ನು ಸ್ವೀಕರಿಸಿ ದ್ದಾರೆ.

ಈಗ ಅದರಷ್ಟೇ ಪ್ರಾಮುಖ್ಯತೆ ಹೊಂದಿದ ಮತ್ತೊಂದು ಪಾತ್ರ ಅಲ್ಲಿ ಸೃಷ್ಟಿ ಆಗುತ್ತಿದೆ ಅಂದಾಗ ನನಗೂ ಯಾಕೋ ಸರಿಯಲ್ಲ ಅಂತೆನಿಸಿದ್ದು ನಿಜ’ ಅನ್ನೋದು ರಂಜನಿ ಬೇಸರ. ಪುಟ್ಟ ಗೌರಿ ಮದುವೆ ಧಾರಾವಾಹಿಗೆ ಇನ್ನೂ ಮಂಗಳಗೌರಿ ಎಂಟ್ರಿ ಆಗಿಲ್ಲ. ಬಹುತೇಕ ಮುಂದಿನ ವಾರದಿಂದ ಆ ಪಾತ್ರದ ಪರಿಚಯವಾಗುತ್ತಿದೆ. ಆಗಲೇ ಪುಟ್ಟಗೌರಿ ಪಾತ್ರದಿಂದ ರಂಜನಿ ರಾಘವನ್ ಹೊರ ಬಂದಿದ್ದಾರೆ. ಮುಂದೆ ಆ ಜಾಗಕ್ಕೆ ಯಾರು ಬರುತ್ತಾರೆನ್ನುವುದು ಮತ್ತೊಂದು ಕುತೂಹಲ.