ಕಿರುತೆರೆಯ ಸ್ಟಾರ್ ನಟಿ ಪುಟ್ಟ ಗೌರಿ ಅಲಿಯಾಸ್ ರಂಜನಿ ರಾಘವನ್ ಚಂದನವನದಲ್ಲೂ ಬ್ಯುಸಿ ಆಗುತ್ತಿದ್ದಾರೆ. ‘ರಾಜ ಹಂಸ’ಚಿತ್ರದ ನಂತರ ಅವರಿಗೆ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದೆ.
ಬೆಂಗಳೂರು (ಜ.04): ಕಿರುತೆರೆಯ ಸ್ಟಾರ್ ನಟಿ ಪುಟ್ಟ ಗೌರಿ ಅಲಿಯಾಸ್ ರಂಜನಿ ರಾಘವನ್ ಚಂದನವನದಲ್ಲೂ ಬ್ಯುಸಿ ಆಗುತ್ತಿದ್ದಾರೆ. ‘ರಾಜ ಹಂಸ’ಚಿತ್ರದ ನಂತರ ಅವರಿಗೆ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದೆ.
ಶಿವು ಜಮಖಂಡಿ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರದಲ್ಲಿ ರಂಜನಿ ನಾಯಕಿ. ‘ಸೂಫಿ ’ಅನ್ನೋದು ಈ ಚಿತ್ರದ ಟೈಟಲ್. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಸೂಫಿ ಸಂತರ ಕುರಿತ ಚಿತ್ರವಂತೆ. ಕರ್ನಾಟಕದ ಮಟ್ಟಿಗೆ ಉತ್ತರ ಕರ್ನಾಟಕ ಸೂಫಿ ಸಂತರ ಬೀಡು. ಅಲ್ಲಿನ ಸೂಫಿ ಸಂತರ ಬದುಕು, ಬರಹ ಮತ್ತವರ ಸಂದೇಶದ ಸಾರ ಹೇಳುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದಿಂದ ಬಂದ ನಿರ್ದೇಶಕ ಶಿವು ಜಮಖಂಡಿ ಕತೆ ಬರೆದು, ಅದನ್ನು ತೆರೆಗೆ ತರಲು ರೆಡಿ ಆಗಿದ್ದಾರೆ. ಉತ್ತರ ಕರ್ನಾಟಕದ ತಾಹಿರ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದಾರೆ. ‘ಜಸ್ಟ್ ಆಕಸ್ಮಿಕ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ವಿನೋದ್ ಪಾಟೀಲ್ ಈ ಚಿತ್ರದ ಹೀರೋ. ಚಿತ್ರದಲ್ಲಿ ರಮೇಶ್ ಅರವಿಂದ್, ದೇವರಾಜ್ ಕೂಡ ನಟಿಸುತ್ತಿದ್ದಾರೆ.
ಅಂದಹಾಗೆ ಶಿವು ಜಮಖಂಡಿ ಮೊದಲ ಚಿತ್ರ ‘ನನ್ನ ನಿನ್ನ ಪ್ರೇಮ ಕತೆ’. ಅನಂತರ ಅವರ ಸುಳಿವೇ ಇರಲಿಲ್ಲ. ಈಗ ಅವರು ಮತ್ತೆ ಬಂದಿದ್ದಾರೆ. ‘ಸೂಫಿ’ಗೆ ಮುಂದಿನ ತಿಂಗಳಿಂದ ಚಿತ್ರೀಕರಣ ಶುರುವಾಗುತ್ತಿದೆ. ಈ ಚಿತ್ರದ ಬಗ್ಗೆ ರಂಜನಿ ರಾಘವನ್ ಹೇಳುವುದಿಷ್ಟು: ‘ಮೊದಲ ಚಿತ್ರ ಬಂದು ಹೋದ ನಂತರ ಸಾಕಷ್ಟು ಅವಕಾಶಗಳು ಬಂದಿವೆ. ಆದರೆ ನಾನೀಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಅಭಿನಯಕ್ಕೆ ಹೆಚ್ಚು ಅವಕಾಶ ಇರುವ ಪಾತ್ರ ಮತ್ತು ಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನೀಗ ಚ್ಯೂಸಿ ಆಗಿದ್ದೇನೆ. ಇದೇ ಕಾರಣಕ್ಕೆ ಬಂದ ಸಾಕಷ್ಟು ಅವಕಾಶಗಳನ್ನು ಬೇಡ ಅಂತ ಕೈಬಿಟ್ಟಿದ್ದೇನೆ. ಮತ್ತೊಂದೆಡೆ ಸೀರಿಯಲ್ ಒತ್ತಡವೂ ಕಾರಣ. ಒಮ್ಮೆ, ನಿರ್ದೇಶಕರಾದ ಶಿವು ಜಮಖಂಡಿ ಅವರು ಬಂದು ಕತೆ ಹೇಳಿದಾಗ ಕುತೂಹಲ ಎನಿಸಿತು. ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ.
