ಈ ಚಿತ್ರದಲ್ಲಿ ಕತೆಯೇ ಮಾಯವಾಗಿದೆ. ಯಶ್‌- ರಾಧಿಕಾ ಜನಪ್ರಿಯತೆಗೆ ನಿರ್ದೇಶಕರು ಹೆಚ್ಚು ಒತ್ತು ನೀಡಿರುವುದರಿಂದ ಕತೆಯೇ ಇಲ್ಲದ ಚಿತ್ರವಾಗಿದೆ.
ವಿಮರ್ಶೆ: ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
ಚಿತ್ರ: ಸಂತು ಸ್ಟ್ರೈಟ್ ಫಾರ್ವರ್ಡ್
ಭಾಷೆ: ಕನ್ನಡ
ತಾರಾಗಣ: ಯಶ್, ರಾಧಿಕಾ, ಶಾಮ್, ಅನಂತ ನಾಗ್, ದೇವರಾಜ್, ಸುಮಿತ್ರಮ್ಮ, ಶ್ರೀಧರ್, ತಿಲಕ್, ಕಡ್ಡಿಪುಡಿ ಚಂದ್ರು, ರವಿಶಂಕರ್
ನಿರ್ದೇಶನ: ಮಹೇಶ್ ರಾವ್
ಸಂಗೀತ: ಹರಿಕೃಷ್ಣ
ಛಾಯಾಗ್ರಹಣ: ಆ್ಯಂಡ್ರೊ
ನಿರ್ಮಾಣ: ಕೆ ಮಂಜು
ರೇಟಿಂಗ್: ***
ಸ್ಟಾರ್ ಜೋಡಿ ಯಶ್ ಹಾಗೂ ರಾಧಿಕಾ ರಿಯಲ್ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ. ರೀಲ್ ಮೇಲೆ ಬಂದ ನಾಯಕ ಸಂತು ಹಾಗೂ ನಾಯಕಿ ಅನನ್ಯ ಮದುವೆಗೂ ಅದೇ ದಿನಾಂಕವೇ ಫಿಕ್ಸ್ ಆಗುತ್ತದೆ. ಫಿಕ್ಸ್ ಆದಂತೆ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಮದುವೆಯೂ ನಡೆದುಹೋಗಿದೆ. ರಿಯಲ್ ಲೈಫ್ನಲ್ಲಿ ಅವರಿಬ್ಬರ ಮದುವೆ ಸಮಾರಂಭ ಮಾತ್ರ ಬಾಕಿಯಿದೆ. ಇಂಥ ಹಲವು ಸಂಗತಿಗಳ ಹೋಲಿಕೆಗಳು ಅಲ್ಲಿವೆ. ಆ ಮೂಲಕ ಇದು ಅವರದ್ದೇ ಕತೆ ಎನಿಸುತ್ತದೆ. ‘ನೋಡು ಬ್ರದರ್ ಇಲ್ಲಿ ಸ್ಟೋರಿ ನಿಂದು, ಆದರೆ ಚಿತ್ರಕತೆ ನಂದು' ಎಂದು ಯಶ್ ಹೇಳುವ ಮಾತು, ಕತೆಯ ಸನ್ನಿವೇಶಕ್ಕೆ ಸಾಂದರ್ಭಿಕವಾಗಿದ್ದರೂ, ಪ್ರೇಕ್ಷಕನ ಮಟ್ಟಿಗೆ ಅದು ಅವರದ್ದೇ ಎನಿಸುತ್ತದೆ. ಈ ಜೋಡಿಯನ್ನೇ ಕೇಂದ್ರವಾಗಿರಿಸಿಕೊಂಡಿರುವ ನಿರ್ದೇಶಕರು, ಚಿತ್ರದಲ್ಲಿ ತುಸು ಹೆಚ್ಚೇ ಬ್ಯುಲ್ಡಪ್ ತುಂಬಿದ್ದಾರೆ. ಇಷ್ಟಾಗಿಯೂ ಪ್ರೀತಿ, ಪ್ರೇಮದ ಒದ್ದಾಟ, ಅದಕ್ಕಾಗಿಯೇ ಹೊಡೆದಾಟ, ಮಾತುಗಳಲ್ಲಿಯೇ ತೂರಿಬರುವ ಕಾಮಿಡಿ, ಒಂದಷ್ಟು ಸೆಂಟಿಮೆಂಟ್ ಎನ್ನುವ ಮಸಾಲೆ ಮೂಲಕ ಸಿನಿರಸಿಕರಿಗೆ ಇಲ್ಲಿ ಮನರಂಜನೆಯೂ ಇದೆ.
ಹಾಗೆ ನೋಡಿದರೆ ಈ ಚಿತ್ರದಲ್ಲಿ ಕತೆಯೇ ಮಾಯವಾಗಿದೆ. ಯಶ್- ರಾಧಿಕಾ ಜನಪ್ರಿಯತೆಗೆ ನಿರ್ದೇಶಕರು ಹೆಚ್ಚು ಒತ್ತು ನೀಡಿರುವುದರಿಂದ ಕತೆಯೇ ಇಲ್ಲದ ಚಿತ್ರವಾಗಿದೆ. ಎಲ್ಲಿಂದೆಲ್ಲಿಗೋ ಸಾಗುವ ಕತೆ, ಆರಂಭದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಚಿತ್ರಣವನ್ನು ತೋರಿಸುತ್ತದೆ. ತಂದೆಗೆ ಕಿರುಕುಳ ನೀಡಿದ ರೌಡಿ ಪಡೆಯನ್ನು ಪುಡಿಗಟ್ಟುವ ಹೊಡೆದಾಟದ ಮೂಲಕ ಇನ್ನೇನು ನಾಯಕನಿಗೆ ಈ ಮಾಫಿಯಾವೇ ಟಾರ್ಗೆಟ್ ಆಗಬಹುದು ಎನ್ನುವ ಲೆಕ್ಕಾಚಾರ ಪ್ರೇಕ್ಷಕರ ತಲೆಯಲ್ಲಿರುತ್ತದೆ. ಆದರೆ ಕತೆ ಇನ್ನೊಂದು ಮಗ್ಗುಲಿಗೆ ತಿರುಗುತ್ತದೆ. ಸಂತು ಇಷ್ಟಪಡುವ ಹುಡುಗಿ ಅನನ್ಯಗೆ ತನ್ನ ಸೋದರ ಮಾವನ ಜತೆ ಮದುವೆ ಫಿಕ್ಸ್ ಆಗುತ್ತದೆ. ಇದು ಸಂತುಗೆ ಸಂಕಟ ತರುತ್ತದೆ. ‘ಏನೇ ಆದ್ರೂ ನೀವು ನಮ್ಮವರು, ನಾವು ನಿಮ್ಮವರು' ಎನ್ನುವ ಡೈಲಾಗ್ ಮೂಲಕ ಸಂತು ಕತೆಯ ಓಘಕ್ಕೆ ಕುತೂಹಲಕಾರಿ ತಿರುವು ನೀಡುತ್ತಾನೆ. ಮಂದೇನಿದ್ದರೂ ದ್ವಿತೀಯಾರ್ಧದಲ್ಲಿ ಮದುವೆ ಆಗಲು ನಡೆಸುವ ಹೋರಾಟ. ಕತೆಯಲ್ಲಿ ಅಷ್ಟೇನೂ ಹೊಸತನವಿಲ್ಲ. ಒಮ್ಮೊಮ್ಮೆ ಯಶ್ ಹಾಗೂ ರಾಧಿಕಾ ಅಭಿನಯದ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ' ಚಿತ್ರದ ದೃಶ್ಯಗಳಂತೆಯೇ ಇಲ್ಲಿನ ಕೆಲವು ದೃಶ್ಯಗಳು ರಾಚುತ್ತವೆ. ರಿಮೇಕ್ ಎನ್ನುವ ಆರೋಪದ ಮಾತುಗಳು ನಿಜವೆನಿಸುತ್ತವೆ. ತಮಿಳಿನ ‘ವಾಲ' ಚಿತ್ರದಲ್ಲಿನ ಒಂದಷ್ಟುಕತೆ ಕಣ್ಣಿಗೆ ಕಟ್ಟಿದಂತೆ ಬಂದುಹೋಗುತ್ತದೆ.
ಕತೆಯ ಸಂಗತಿ ಇಷ್ಟಾದರೆ, ಯಶ್- ರಾಧಿಕಾ ಅಭಿನಯ ಸಹಜವಾಗಿಯೇ ಇಷ್ಟವಾಗುತ್ತದೆ. ಯಶ್ ತಮ್ಮದೇ ಮ್ಯಾನರಿಸಂ ಮೂಲಕ ಗಮನ ಸೆಳೆಯುತ್ತಾರೆ. ನಟನೆ ಹಾಗೂ ಸಾಹಸದ ಸನ್ನಿವೇಶಗಳ ಜತೆಗೆ ಅಭಿಮಾನಿಗಳಿಗೆ ಕಿಕ್ ನೀಡುವ ಡೈಲಾಗ್ ಹೊಡೆದು ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ರಾಧಿಕಾ ನಟನೆಯ ಜತೆಗೆ ಮಾತು, ನೃತ್ಯ ಎಲ್ಲರದಲ್ಲೂ ಹತ್ತಿರವಾಗುತ್ತಾರೆ. ಆ ಮಟ್ಟಿಗೆ ರಿಯಲ್ ಲೈಫ್ನ ಸೂಪರ್ ಜೋಡಿ, ರೀಲ್ ಮೇಲೂ ಧಮಾಕಾ ಎಬ್ಬಿಸಿದೆ. ಚಿತ್ರದಲ್ಲಿನ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ದೇವರಾಜ್, ಅನಂತನಾಗ್, ಸುಮಿತ್ರಮ್ಮ, ಅವಿನಾಶ್, ವೀಣಾ ಸುಂದರ್, ಡ್ಯಾನಿ ಕುಟ್ಟಪ್ಪ, ಕಡ್ಡಿಪುಡಿ ಚಂದ್ರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಲನ್ ರೂಪದಲ್ಲಿ ಕಾಣಿಸಿಕೊಳ್ಳುವ ಶಾಮ್, ಆರಂಭದಲ್ಲಿ ಸಿಕ್ಕಾಪಟ್ಟೆಖದರ್ ತೋರಿಸಿದರೂ, ಕ್ಲೈಮ್ಯಾಕ್ಸ್ನಲ್ಲಿ ಸಪ್ಪೆ ಆಗಿದ್ದಾರೆ. ದುಬೈ ಬಾಬಾ ಪಾತ್ರದಲ್ಲಿ ಬರುವ ಖಳನಟ ರವಿಶಂಕರ್ ಭರ್ಜರಿ ಆಗಿ ಕಾಣಿಸಿಕೊಂಡು, ಕೊನೆಯಲ್ಲಿ ಕಾಮಿಡಿಯನ್ ಆಗಿ ನಗು ತರಿಸುತ್ತಾರೆ.
ಹರಿಕೃಷ್ಣ ಸಂಗೀತದಲ್ಲಿ ಆರು ಹಾಡುಗಳು ಮೂಡಿಬಂದಿವೆ. ಇತ್ತೀಚೆಗೆ ಅವರದ್ದು ಒಂದೇ ಧಾಟಿ ಎನ್ನುವ ಅನುಭವ ಇಲ್ಲೂ ಆಗುತ್ತದೆ. ಹೀಗಾಗಿ ಹಾಡುಗಳು ಕೇಳುವುದಕ್ಕೆ ಕಷ್ಟವಾದರೂ ನೋಡುವುದಕ್ಕೆ ಇಷ್ಟವಾಗುತ್ತವೆ. ಹಾಡಿನ ಸನ್ನಿವೇಶಗಳನ್ನು ನಾರ್ವೆಯ ಸುಂದರ ತಾಣಗಳಲ್ಲಿ ಸೆರೆ ಹಿಡಿದಿರುವುದು ಇದಕ್ಕೆ ಕಾರಣವಿರಬಹುದು. ಯೋಗರಾಜ್ ಭಟ್, ಗೌಸ್ಪೀರ್, ಚೇತನ್ ಕುಮಾರ್ ಸಾಹಿತ್ಯವು ಹರಿಕೃಷ್ಣ ಸಂಗೀತದಲ್ಲಿ ಕೇಳದಂತಾಗಿದೆ. ಆಂಡ್ರೂ ಅವರ ಛಾಯಾಗ್ರಹಣ ಹೆಚ್ಚು ಆಪ್ತವಾಗುವುದು ಹಾಡುಗಳ ಸನ್ನಿವೇಶಗಳಲ್ಲಿ. ಅದರಾಚೆಗೆ ಅಷ್ಟಕಷ್ಟೆಎನ್ನುವ ಹಾಗಿದೆ ಅವರ ಛಾಯಾಗ್ರಹಣ. ರವಿಮರ್ಮ ಸಾಹಸ ತೆಲುಗು ಚಿತ್ರಗಳ ರೇಂಜ್ನಲ್ಲಿ ಕಾಣಿಸಿಕೊಂಡಿದೆ. ಅನಿಲ್ ಕುಮಾರ್ ಸಂಭಾಷಣೆಯೇ ಚಿತ್ರದ ಮತ್ತೊಂದು ತಾಕತ್ತು. ಯಶ್ ಹಿಂದಿನ ಎಲ್ಲ ಚಿತ್ರಗಳ ಮಾತಿನ ಓಘವೇ ಈ ಚಿತ್ರದ ಸಂಭಾಷಣೆಯಲ್ಲೂ ಕಾಣಿಸುತ್ತದೆ. ಕೆಲವೊಂದು ಡೈಲಾಗ್ಗಳು ತೀರಾ ವೈಯಕ್ತಿಕ ನೆಲೆಗಟ್ಟಿನಲ್ಲಿಯೇ ಕಿವಿಗಪ್ಪಳಿಸುತ್ತವೆ. ಯಶ್ ಚಿತ್ರಗಳಲ್ಲಿ ಇದೆಲ್ಲ ಮಾಮೂಲು ಅಂದುಕೊಂಡವರಿಗೆ ಕಿರಿಕಿರಿ ಏನಿಲ್ಲ.
