ಆರ್ಮುಗಂ ಖ್ಯಾತಿಯ ನಟ ರವಿಶಂಕರ್ ಹೆಸರು ಕಾಣೆಯಾದವರ ಪಟ್ಟಿಗೆ ಸೇರಿದೆ. ನಿರ್ದೇಶಕ ಅನಿಲ್ ಕುಮಾರ್ ಹಾಕಿರುವ ಕಾಣೆಯಾದವರ ಪಟ್ಟಿಯಲ್ಲಿ ರವಿಶಂಕರ್ ಜತೆಗೆ ರಂಗಾಯಣ ರಘು ಕೂಡ ಇದ್ದಾರೆ. ಅಂದರೆ, ಇದು ರ‌್ಯಾಂಬೋ 2 ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಮುಂದಿನ ಚಿತ್ರದ ಸಮಾಚಾರ.

ಅನಿಲ್ ಕುಮಾರ್ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಹೆಸರೇ ‘ಕಾಣೆಯಾದವರ ಬಗ್ಗೆ ಪ್ರಕಟಣೆ’. ಆಗಸ್ಟ್ 6 ರಂದು ಈ ಚಿತ್ರಕ್ಕೆ ಮುಹೂರ್ತ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಸದ್ಯಕ್ಕೆ ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ‘ದಾರಿ ತಪ್ಪಿದ ಮಗ’ ಚಿತ್ರ ನಿರ್ದೇಶಿಸಿರುವ ಅನಿಲ್ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನವೀನ್. ಅರ್ಜುನ್ ಜನ್ಯಾ ಸಂಗೀತ, ಶಿವಕುಮಾರ್ ಛಾಯಾಗ್ರಹಣವಿದೆ. ದಿಲ್‌ವಾಲ, ಕೃಷ್ಣ ರುಕ್ಕು, ರ‌್ಯಾಂಬೋ 2 ಹಾಗೂ ದಾರಿ ತಪ್ಪಿದ ಮಗ ಚಿತ್ರಗಳ ನಂತರ ಅನಿಲ್ ಕುಮಾರ್ ಪಕ್ಕಾ ಕಾಮಿಡಿ ಆಧಾರಿತ ಚಿತ್ರಕ್ಕೆ ಕೈ ಹಾಕಿದ್ದಾರೆ.

‘ಇದು 65 ವರ್ಷ ಮೇಲ್ಪಟ್ಟವರ ಬಗೆಗಿನ ಕತೆ. ಪ್ರಮುಖ ಪಾತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲ ನಾಣಿ ಇದ್ದಾರೆ. ಮತ್ತಷ್ಟು ಕಲಾವಿದರು ಸೇರ್ಪಡೆ ಆಗಲಿದ್ದಾರೆ. ಸದ್ಯಕ್ಕೆ ಈ ಮೂವರು ಮಾತ್ರ ಫೈನಲ್ ಆಗಿದ್ದಾರೆ. ಇಡೀ ಕತೆ ಹಾಸ್ಯದ ಮೂಲಕ ಸಾಗುವುದರಿಂದ ಅದಕ್ಕೆ ತಕ್ಕನಾದ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಹಿಂದಿನ ಸಿನಿಮಾಗಳಿಗೆ ಭಿನ್ನವಾಗಿ ಇದು ಮೂಡಿ ಬರಲಿದೆ’ ಎನ್ನುತ್ತಾರೆ ನಿರ್ದೇಶಕ ಅನಿಲ್ ಕುಮಾರ್. ಚಿತ್ರಕ್ಕೆ ಬ್ಯಾಂಕಾಕ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ.