ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಹಾಗೂ ನರಸಿಂಹಲು ನಿರ್ಮಾಣದ ‘ತಾರಕಾಸುರ’ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ನಿರ್ಮಾಪಕ ಕನಕಪುರ ಶ್ರೀನಿವಾಸ್, ಇದರ ವಿತರಣೆಯ ಹಕ್ಕು ಪಡೆದಿದ್ದಾರೆ.
ಈಹುಡುಗಿ ನನ್ನ ಪಾಲಿಗೆ ಲಕ್ಕಿ ಗರ್ಲ್....
- ನಿರ್ಮಾಪಕ ಕಮ್ ವಿತರಕ ಕನಕಪುರ ಶ್ರೀನಿವಾಸ್ ಹೀಗೆಂದು ಒಂದಪ್ಪ ನಕ್ಕರು. ಅವರ ಪಕ್ಕದಲ್ಲೇ ಇದ್ದ ನಟಿ ಮಾನ್ವಿತಾ ಹರೀಶ್ ಕಕ್ಕಾಬಿಕ್ಕಿಯಾದರು. ಕೊಂಚ ಯೋಚಿಸಿ, ಅವರು ಕೂಡ ನಗುವಿನ ಮುಖ ಅರಳಿಸಿದರು.‘ ಓಹೋ...ಅದು ಹಾಗಾ..’ಅಂತ ಶ್ರೀನಿವಾಸ್ ಮಾತಿಗೆ ಗಟ್ಟಿ ಧ್ವನಿಯಲ್ಲಿ ಉದ್ಘಾರ ಎತ್ತಿದರು ಟಗರು ಹುಡುಗಿ ಮಾನ್ವಿತಾ. ಇಷ್ಟಕ್ಕೂ ಮಾನ್ವಿತಾ ಹರೀಶ್ ಕುರಿತು ಕನಕಪುರ ಶ್ರೀನಿವಾಸ್ ಹೇಳಿದ್ದು ತಾರಕಾಸುರ ಚಿತ್ರದ ಕುರಿತು.
ಯಾವುದೇ ಸ್ಟಾರ್ ಸಿನಿಮಾಗಳಿಗೆ ಕಮ್ಮಿಯಿಲ್ಲದಂತೆ ಚಿತ್ರವನ್ನು ಅದ್ಧೂರಿಯಾಗಿಯೇ ತೆರೆಗೆ ತರಲು ಮುಂದಾಗಿದ್ದು, ಈತನಕ 200ಕ್ಕೂ ಹೆಚ್ಚು ಚಿತ್ರಮಂದಿರಗಳು ಖಾತರಿ ಆಗಿವೆ. ‘ರಥಾವರ ’ದಂತಹ ಸಕ್ಸಸ್‌ಫುಲ್ ಚಿತ್ರದ ನಂತರ ಎರಡು ವರ್ಷ ಸಮಯ ತೆಗೆದುಕೊಂಡು ಈ ಸಿನಿಮಾ ನಿರ್ದೇಶಿಸಿದ್ದಾರೆ ಯುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಚಿತ್ರದ ನಾಯಕ ನಟ ವೈಭವ್‌ಗೆ ಇದು ಮೊದಲ ಸಿನಿಮಾ. ಆದರೂ, ಸ್ಟಾರ್ ನಟಿ ಮಾನ್ವಿತಾ ಹರೀಶ್ ಇಲ್ಲಿನ ಪ್ರಮುಖ ಆಕರ್ಷಣೆ. ಹಾಲಿವುಡ್ ನಟ ಡ್ಯಾನಿ ಸಫಾನಿ ಕೂಡ ಇಲ್ಲಿದ್ದಾರೆ. ಹಾಗೆಯೇ ಮಗನನ್ನು ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯಿಸುವ ಆಸೆಯಿಂದಾಗಿ ನಿರ್ಮಾಪಕ ನರಸಿಂಹಲು ಚಿತ್ರವನ್ನು ಅದ್ಧೂರಿಯಾಗಿಯೇ ತೆರೆಗೆ
ತಂದಿದ್ದಾರಂತೆ. ಜತೆಗೆ ಬುಡುಬುಡಕೆ ಜನಾಂಗದ ವಿಶಿಷ್ಟ ಕಲೆಯೊಂದನ್ನೇ ಕತೆಯ ಪ್ರಮುಖ ಎಳೆಯಾಗಿಸಿಕೊಂಡು ಹೆಣೆದ ಚಿತ್ರವಿದು. ಇಷ್ಟೇಲ್ಲ ವಿಶೇಷತೆಗಳಿರುವ ಚಿತ್ರವನ್ನು ವಿತರಣೆ ಮಾಡಲು ಕನಕಪುರ ಶ್ರೀನಿವಾಸ್ ಒಪ್ಪಿಕೊಂಡಿದ್ದಕ್ಕೆ ಇದ್ದ ಮೊದಲ ಕಾರಣ ನಾಯಕಿ ಮಾನ್ವಿತಾ ಹರೀಶ್.
ಆ ಕತೆ ಅವರೇ ಹೇಳ್ತಾರೆ ಕೇಳಿ; ‘ನಟಿ ಮಾನ್ವಿತಾ ನನ್ನ ಪಾಲಿಗೆ ಅದೃಷ್ಟದ ಹುಡುಗಿ. ಈ ಹಿಂದೆ ಆಕೆ ಅಭಿನಯಿಸಿದ್ದ ಕೆಂಡ ಸಂಪಿಗೆ ಚಿತ್ರ ವಿತರಣೆಯ ಹಕ್ಕು ಪಡೆದಿದ್ದೆ. ಅದು ಯಶಸ್ವಿ ನೂರು ದಿನ ಓಡಿತು. ಕಲೆಕ್ಷನ್ ಕೂಡ ಚೆನ್ನಾಗಿಯೇ ಆಯಿತು. ಚಿತ್ರ ತಂಡ ಖುಷಿ ಪಟ್ಟಿತು, ನನ್ನ ಜೇಜಿಗೂ ಒಂದಷ್ಟು ಹಣ ಬಂತು. ಅಲ್ಲಿಂದ ಮತ್ತೊಂದು ಚಿತ್ರದಲ್ಲೂ ಹಾಗೆಯೇ ಆಯಿತು. ಅದ್ಯಾಕೋ ನನ್ನ ಚಿತ್ರ ವಿತರಣೆಯ ಸಾಹಸಕ್ಕೆ ಮಾನ್ವಿತಾ ಲಕ್ಕಿ ಅಂತೆನಿಸಿತು. ಹಾಗಾಗಿಯೇ ‘ತಾರಕಾಸುರ’ ಚಿತ್ರದ ವಿತರಣೆ ನನಗೆ ಇರಲಿ ಅಂತ ನಿರ್ಮಾಪಕರಿಗೆ ಹೇಳಿದೆ’ಎಂದರು ಕನಕಪುರ ಶ್ರೀನಿವಾಸ್. ಅವರು ಹಾಗೆ ಹೇಳುತ್ತಿದ್ದಂತೆ ನಟಿ ಮಾನ್ವಿತಾ ಅಚ್ಚರಿಯಿಂದ ನೋಡಿದರು. ಅದೇನು ಹಾಗೆ ಹೇಳಿದರೂ ಅಂತ ಮೇಲ್ನೋಟದಲ್ಲಿ ಹಾವಭಾವ ತೋರಿಸಿ ದರೂ, ತಾನು ಅದೃಷ್ಟವಂತೆ ಅಂತ ಒಳಗೊಳಗೆ ನಕ್ಕರು.
ಶ್ರೀನಿವಾಸ್ ಅವರ ಮಾತು ಮುಂದುವರೆಯಿತು.‘ ನಾನು ಸಿನಿಮಾ ನೋಡಿದ್ದೇನೆ. ಎಲ್ಲಾ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆ. ಬುಡ ಬುಡಿಕೆ ಜನಾಂಗದ ಕಲೆಯೊಂದನ್ನೇ ಕತೆಯ ಎಳೆಯಾಗಿಟ್ಟುಕೊಂಡು ಚಂದದ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಸಿನಿಮಾ ಮನಸ್ಸಿಗೆ ಹಿಡಿಸಿದೆ. ಹಾಗಾಗಿಯೇ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ತರುತ್ತಿದ್ದೇನೆ ಎಂದರು. ಬಿಡುಗಡೆ ಪೂರ್ವ ಸುದ್ದಿಗೋಷ್ಟಿ ಅಂದ್ರೆ ಅಲ್ಲಿ ವಿತರಣೆ ಸಿದ್ಧತೆಯೇ ಹೆಚ್ಚು ಮಾತು. ಆದರೂ ಚಿತ್ರ ತಂಡ ಚಿತ್ರದ ವಿಶೇಷತೆಗಳನ್ನು ಹೇಳಿಕೊಂಡಿತು. ಪ್ರೇಕ್ಷಕರು ಯಾಕೆ ಈ ಸಿನಿಮಾ ನೋಡಬೇಕು ಎನ್ನುವುದಕ್ಕೆ ಕಾರಣ ನೀಡಿತು.
‘ರಥಾವರ’ ಚಿತ್ರದಲ್ಲಿ ಮಂಗಳಮುಖಿಯ ಕತೆ ಹೇಳಿದ್ದ ಚಂದ್ರಶೇಖರ್ ಬಂಡಿಯಪ್ಪ, ಈಗ ಬುಡುಬುಡಕೆ ಜನಾಂಗದ ಕತೆ ಹೇಳಲು ಬರುತ್ತಿದ್ದಾರೆ. ಆ ಜನಾಂಗದ ವಿಶಿಷ್ಟ ಕಲೆಯೊಂದು ಕಳೆದು ಹೋಗುತ್ತಿದೆ ಎನ್ನುವ ಕಳಕಳಿಯ ಜತೆಗೆ ಅ ಸಮುದಾಯದ ಹುಡುಗನೊಬ್ಬ ಕೆಚ್ಚು, ರಚ್ಚು ಸಾಹಸಾಗಾಥೆಯನ್ನು ಎಲ್ಲಾ ಕಮರ್ಷಿಯಲ್ ಸೂತ್ರಗಳೊಂದಿಗೆ ರೋಚಕವಾಗಿ ತೋರಿಸಿದ್ದಾರಂತೆ. ಆ ಕಾರಣಕ್ಕಾಗಿ ಇದೊಂದು ವಿಭಿನ್ನ ಸಿನಿಮಾವಾಗಿ ಗಮನ ಸೆಳೆಯಲಿದೆ ಎನ್ನುವ ವಿಶ್ವಾಸ ಅವರದ್ದು. ವಿಚಿತ್ರ ಅಂದ್ರೆ, ಸಿನಿಮಾಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಕತೆ ವಿವಾದಕ್ಕೆ ಸಿಲುಕಿದೆ. ಮಂಡ್ಯ ಮೂಲದ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಅವರು ಹೇಳಿಕೊಂಡರು. ಸಿನಿಮಾ ನೋಡಿದಾಗ ಅವರಿಗೂ ವಾಸ್ತವ ಮನವರಿಕೆ ಆಗಲಿದೆ ಎಂದರು. ಇನ್ನು ನಿರ್ದೇಶಕರಲ್ಲಿರುವ ವಿಶ್ವಾಸವೇ ನಿರ್ಮಾಪಕರಲ್ಲೂ ಇದೆ. ಪ್ರದರ್ಶಕ ವಲಯದಲ್ಲಿದ್ದು ಅವರಿಗೆ ಜನರ ನಾಡಿ ಮಿಡಿತ ಗೊತ್ತಿದೆಯಂತೆ. ಆ ಪ್ರಕಾರವೇ ಈ ಸಿನಿಮಾ ಮಾಡಿದ್ದಾಗಿ ಹೇಳಿದರು. ನಾಯಕ ನಟ ವೈಭವ್ ಹಾಗೂ ನಾಯಕಿ ಮಾನ್ವಿತಾ ಅವರಿಗೂ ಇದು ಒಂದೊಳ್ಳೆ ಸಿನಿಮಾ ಆಗುವ ವಿಶ್ವಾಸವಿದೆ. ಅದಕ್ಕವರು ನೀಡುವ ಕಾರಣ ಕತೆ, ನಿರ್ಮಾಣದ ಶೈಲಿ.
