Asianet Suvarna News Asianet Suvarna News

ಐಂದ್ರಿತಾ-ದಿಗಂತ್ ಮದುವೆ ಡಿಸೆಂಬರ್ ಚಳಿಯಲ್ಲಿ..!

ಚೌಕ ಚಿತ್ರದಲ್ಲಿ ನಟಿಸಿದ ಯಾರ ಚಿತ್ರವೂ ಇನ್ನೂ ಬಂದಿಲ್ಲ. ಆ ಚಿತ್ರದ ನಂತರ ಎಲ್ಲರಿಗೂ ಗ್ಯಾಪ್ ಆದಂತೆ ನನಗೂ ಆಗಿದೆ. ಹಾಗಂತ ನಾಪತ್ತೆಯಾಗಿದ್ದೇನೆ ಎಂದರ್ಥವಲ್ಲ. ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೇನೆ. ನನಗೆ ಇಷ್ಟವಾಗುವಂತಹ ಕತೆಗಳನ್ನು ಕೇಳುತ್ತಿದ್ದೇನೆ.

Sandalwood Star Diganth to Wedlock in December

ಸಂದರ್ಶನ: ಆರ್. ಕೇಶವಮೂರ್ತಿ, ಕನ್ನಡಪ್ರಭ 
ದಿಗಂತ್ ಎಲ್ಲಿ ಹೋಗಿದ್ದಾರೆ ಎಂದವರಿಗೆ ಅವರೇ ಮುಂದೆ ಬಂದು ಹೊಸ ಕತೆಯೊಂದು ಹೇಳಿದ್ದಾರೆ. ಅವರ ಈ ಕತೆಯಲ್ಲಿ ಸಿನಿಮಾ, ಲವ್ವು, ವೈಯುಕ್ತಿಕ ಲೈಫು, ಮ್ಯಾರೇಜ್ ಸ್ಟೋರಿ, ಅಜ್ಞಾತ ದಿನಗಳು ಎಲ್ಲವನ್ನು ಮೆಲುಕು ಹಾಕಿದ್ದಾರೆ. ಜತೆಗೆ ದಿಗಂತ್ ರೆಸಾರ್ಟ್ ಒಡೆಯ ಕೂಡ. ಅದು ಹೇಗೆ ಅವರಿಂದಲೇ ಕೇಳಿ
* ಇತ್ತೀಚೆಗೆ ನಿಮ್ಮ ಹೆಸರು ನಾಪತ್ತೆ ಆದವರ ಪಟ್ಟಿಯಲ್ಲಿದೆಯಲ್ಲ?
ಚೌಕ ಚಿತ್ರದಲ್ಲಿ ನಟಿಸಿದ ಯಾರ ಚಿತ್ರವೂ ಇನ್ನೂ ಬಂದಿಲ್ಲ. ಆ ಚಿತ್ರದ ನಂತರ ಎಲ್ಲರಿಗೂ ಗ್ಯಾಪ್ ಆದಂತೆ ನನಗೂ ಆಗಿದೆ. ಹಾಗಂತ ನಾಪತ್ತೆಯಾಗಿದ್ದೇನೆ ಎಂದರ್ಥವಲ್ಲ. ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೇನೆ. ನನಗೆ ಇಷ್ಟವಾಗುವಂತಹ ಕತೆಗಳನ್ನು ಕೇಳುತ್ತಿದ್ದೇನೆ.

* ಹಾಗಾದರೆ ದಿಗಂತ್ ಈಗೇನು ಮಾಡುತ್ತಿದ್ದಾರೆ?
ಸೆನ್ನಾ ಹೆಗಡೆ ಅವರ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಚಿತ್ರಕ್ಕೆ ಈಗಷ್ಟೆ ಚಿತ್ರೀಕರಣ ಮುಗಿಸಿದ್ದೇನೆ. ‘ಚೌಕ’ ಸಿನಿಮಾ ಮುಗಿದ ಮೇಲೆ ಒಂದಿಷ್ಟು ಟೈಮ್ ತೆಗೆದುಕೊಂಡು ‘ಫಾರ್ಚುನರ್’ ಎನ್ನುವ ಚಿತ್ರವನ್ನು ಮಾಡಿದೆ. ತುಂಬಾ ಚೆನ್ನಾಗಿ ಬಂದಿದೆ. ‘ಕಥೆಯೊಂದು ಶುರುವಾಗಿದೆ’ ಚಿತ್ರದ ನಂತರ ‘ಫಾರ್ಚುನರ್’ ಸಿನಿಮಾ ತೆರೆಗೆ ಬರಲಿದೆ.

* ನಿಮ್ಮ ಮದುವೆ ವಿಚಾರ ಎಲ್ಲಿಗೆ ಬಂತು? ಯಾವಾಗ ಮದುವೆ ಆಗುವ ಪ್ಲಾನ್ ಇದೆ?
ಹೌದು, ಮದುವೆ ಆಗುತ್ತೇನೆಂದು ಸುದ್ದಿ ಆಗಿದ್ದು ನಿಜ, ನಾನು ಮದುವೆ ಆಗುವುದು ನಿಜ. ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದೇನೆ. ಡಿಸೆಂಬರ್‌ವರೆಗೂ ಆ ಬಗ್ಗೆ ಯೋಚನೆ ಮಾಡುತ್ತಿಲ್ಲ. ದಿನಾಂಕ, ಸ್ಥಳ ಎಲ್ಲ ಓಕೆ ಆದ ಮೇಲೆ ನಾನೇ ಅಧಿಕೃತವಾಗಿ ತಿಳಿಸುತ್ತೇನೆ. ಸದ್ಯಕ್ಕೆ ನಾನೇ ಅಂದುಕೊಂಡಿರುವ ಪ್ರಕಾರ ಡಿಸೆಂಬರ್‌ನಲ್ಲಿ ಹೊಸ ಜೀವನಕ್ಕೆ ಕಾಲಿಡುವ ಯೋಚನೆ ಇದೆ. ಆ ನಂತರ ಹೊಸ ಕಥೆಯೊಂದು ಈ ದಿಗಂತ್ ಬದುಕಿನಲ್ಲಿ ಶುರುವಾಗಲಿದೆ.

* ಮದುವೆ ವಿಚಾರ ನಿಮ್ಮ ಮನೆಗೆ ತಲುಪಿದೆಯೇ? ನೀವು ಮತ್ತು ಐಂದ್ರಿತಾ ರೇ ಸಿನಿಮಾಗಳ ಆಯ್ಕೆಯಲ್ಲಿ ಪರಸ್ಪರ ನಿಮ್ಮಿಬ್ಬರ ಸಲಹೆ- ಮಾರ್ಗದರ್ಶನ ಇರುತ್ತದೆಯೇ?
ಇಬ್ಬರ ಮನೆಗಳಲ್ಲಿ ಆ ಕುರಿತು ಚರ್ಚೆ ಮಾಡಿಲ್ಲ. ಆದರೆ, ಮನೆಯವರ ಒಪ್ಪಿಗೆ ತೆಗೆದುಕೊಳ್ಳುತ್ತೇವೆ. ಖಂಡಿತ ಸಿನಿಮಾ ಅಂತ ಬಂದಾಗ ಇಬ್ಬರು ಚರ್ಚೆ ಮಾಡಿಯೇ ಆಯ್ಕೆ ಮಾಡಿಕೊಳ್ಳುತ್ತೇವೆ. ಕತೆ, ಪಾತ್ರದ ಬಗ್ಗೆ ನಾವು ತುಂಬಾ ಮಾತನಾಡುತ್ತಿರುತ್ತೇವೆ. ಮುಂದೆ ಕೂಡ ಅದು ಕಂಟಿನ್ಯೂ ಆಗಲಿದೆ.

* ಸರಿ, ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ? 
ಈ ಚಿತ್ರದಲ್ಲಿ ನಾನು ರೆಸಾರ್ಟ್ ಮಾಲೀಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಲಾಭ ಇಲ್ಲದ ರೆಸಾರ್ಟ್ ಮಾಲೀಕನಿಗೆ ಮದುವೆ ಬೇರೆ ಆಗಿರಲ್ಲ. ಆ ಒತ್ತಡಗಳು, ನನ್ನ ರೆಸಾರ್ಟ್‌ಗೆ ಬರುವ ಹಿರಿಯ ದಂಪತಿ ಅಲ್ಲಿಂದ ನನ್ನ ಪಾತ್ರಕ್ಕೆ ಸಿಗುವ ತಿರುವು. ಹೀಗೆ ಸಾಕಷ್ಟು ಕುತೂಹಲದಿಂದ ನನ್ನ ಪಾತ್ರ ಕೂಡಿದೆ. ಮೊದಲ ಬಾರಿಗೆ ಬೇರೆ ರೀತಿಯ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನದೇ ಆದ ಕನಸುಗಳನ್ನಿಟ್ಟುಕೊಂಡು ಜೀವನದಲ್ಲಿ ಹೊಸದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನಾಯಕನ ಪುಟ್ಟಲೋಕದಲ್ಲಿ ಏಕಾಂತವನ್ನು ಅರಸಿಬಂದ ನಾಯಕಿ ಜತೆಯಾಗುತ್ತಾಳೆ. ಪರಿಚಯ, ಸ್ನೇಹ,ಪ್ರೀತಿ ಮತ್ತು ವಿಶ್ವಾಸದ ಸುಮಧುರ ಬಾಂಧವ್ಯ ಇವೆಲ್ಲವೂ ನನ್ನ ಪಾತ್ರದಲ್ಲಿ ಸೇರಿಕೊಂಡಿದೆ.

* ಈ ಚಿತ್ರದ ಒಂದು ಸಾಲಿನ ಕತೆ ಏನು?
ನಮ್ಮ ಬದುಕಿನಲ್ಲಿ ಹಾದು ಹೋಗುವ ನೂರಾರು ಜನರ ನಡುವೆ, ಕೆಲವೊಬ್ಬರ ಆಗಮನದೊಂದಿಗೆ ಜೀವನ ಹೇಗೆ ಹೊಸ ತಿರುವುಗಳನ್ನು ಪಡೆದುಕೊಂಡು ಬದುಕಿನ ಸುಂದರ ಸಾಧ್ಯತೆಗಳನ್ನು ನಮ್ಮ ಮುಂದಿಡುತ್ತದೆ ಎಂಬುದೇ ಈ ’ಕಥೆಯೊಂದು ಶುರುವಾಗಿದೆ’ ಚಿತ್ರದ ಒಂದು ಸಾಲಿನ ಕತೆ. ಅಂದರೆ ತುಂಬಾ ದೊಡ್ಡ ವಿಷಯವನ್ನು ಹೇಳಲಿಕ್ಕೆ ಹೊರಟಿಲ್ಲ. ಸಣ್ಣ ಕತೆಯನ್ನು ದೊಡ್ಡದಾಗಿ ಹೊಸದಾಗಿ ಹೇಳುತ್ತಿದ್ದೇವೆ. ಇಲ್ಲಿ ಮೂರು ಪ್ರೇಮ ಕತೆಗಳಿವೆ. ಹದಿಹರೆಯದ ಜೋಡಿ, ನಡು ವಯಸ್ಸಿನ ದಂಪತಿ, ವಯಸ್ಸಾದ ಪ್ರೇಮಿಗಳು. ಆಯಾ ಕಾಲ- ವಯಸ್ಸಿನ ಪ್ರೇಮ ಪ್ರಯಣ ಹೇಗೆ ಸಾಗುತ್ತದೆ. ಅಂಥ ಪ್ರೇಮ ಕತೆಗಳಲ್ಲಿರುವ ಸೂಕ್ಷ್ಮತೆಗಳನ್ನು ಹೇಳಿದ್ದೇವೆ. 30ರ ನಂತರ ಏನೂ ಮಾಡಬೇಕೆಂದು ತೋಚದೆ ಇರುವವನಾಗಿ ನನ್ನ ಕತೆ ಶುರುವಾಗುತ್ತದೆ.

* ಇಂತ ಕಥೆಯ ಚಿತ್ರಕ್ಕೆ ’ಕಥೆಯೊಂದು ಶುರುವಾಗಿದೆ’ ಎನ್ನುವ ಶೀರ್ಷಿಕೆ ಹೇಗೆ ಸೂಕ್ತ?
ಇಲ್ಲಿ ಪ್ರತಿಯೊಂದು ಕತೆಗೂ ಶುರು ಮತ್ತು ಅಂತ್ಯ ಇದೆ. ಅದು ಮತ್ತೊಬ್ಬರ ಕತೆ ಅಥವಾ ಪಾತ್ರದ ಜತೆಗೆ ಶುರುವಾಗುತ್ತದೆ. ಹೀಗಾಗಿ ಚಿತ್ರಕ್ಕೆ ಕಥೆಯೊಂದು ಶುರುವಾಗಿದೆ ಎನ್ನುವ ಶೀರ್ಷಿಕೆ ಇಟ್ಟಿದ್ದೇವೆ.

* ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ನೀವೇ ನಾಯಕ ಆಗುವುದಕ್ಕೆ ಕಾರಣ ಏನು?
ನಿರ್ದೇಶಕ ಸೆನ್ನಾ ಹೆಗಡೆ ಅವರು ನನ್ನ ಅಭಿನಯದ ‘ಪಂಚರಂಗಿ’ ಚಿತ್ರವನ್ನು ನೋಡಿದ್ರರಂತೆ. ಆ ಚಿತ್ರ ನೋಡಿದ ಮೇಲೆಯೇ ಅವರು ನನಗಾಗಿಯೇ ಬರೆದುಕೊಂಡಿದ್ದ ಕತೆಯೇ ‘ಕಥೆಯೊಂದು
ಶುರುವಾಗಿದೆ’ ಸಿನಿಮಾದ್ದು. ಅಲ್ಲದೆ ನಾನು ಯಾವ ರೀತಿಯ ಕತೆಗಾಗಿ ಕಾಯುತ್ತಿದ್ನೋ ಅಂಥದ್ದೇ ಕತೆ ಇದಾಗಿತ್ತು. ಈ ಎಲ್ಲ ಸೇರಿಕೊಂಡು ನನಗೆ ಈ ಸಿನಿಮಾ ಸೂಕ್ತ ಎನಿಸಿತು.

* ಹೊಸ ತಂಡ, ಹೊಸ ನಿರ್ದೇಶಕ, ಹೊಸ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?
ಹೌದು, ಪರಂವಃ ಸ್ಟುಡಿಯೋಸ್ ಹಾಗೂ ಪುಷ್ಕರ್ ಫಿಲಂಸ್ ಸಂಸ್ಥೆ ನನಗೆ ಹೊಸದು. ಒಳ್ಳೆಯ ತಂಡವನ್ನು ಕಟ್ಟಿಕೊಂಡಿರುವ ಸಂಸ್ಥೆಗಳು ಇವು. ಹಾಗೆ ನೋಡಿದರೆ ರಕ್ಷಿತ್ ಶೆಟ್ಟಿ ಅವರು ತುಂಬಾ ಹಿಂದೆಯೇ ಭೇಟಿಯಾಗುತ್ತಿದ್ದಾಗ ‘ನಿಮಗೇ ಅಂತಲೇ ನಾನು ಕೆಲವು ಕತೆಗಳನ್ನು ಬರೆದುಕೊಂಡಿದ್ದೇನೆ. ಖಂಡಿತ ನಿಮ್ಮ ಜತೆ ಒಂದು ಸಿನಿಮಾ ಮಾಡುವ ಆಸೆ ಇದೆ’ ಹೇಳುತ್ತಿದ್ದರು. ಆ ನಂತರ ಅವರು ಕೂಡ ಬೇಡಿಕೆಯ ಹೀರೋ ಆದ ಮೇಲೆ ಆ ಮಾತನ್ನು ಮರೆತಿಲ್ಲ. ಅವರ ಸಂಸ್ಥೆಯಲ್ಲೇ ನನ್ನ ಚಿತ್ರ ನಿರ್ಮಾಣವಾಗುತ್ತಿದೆ. ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಸಿನಿಮಾ ಬಗ್ಗೆ ಒಳ್ಳೆಯ ಅಭಿರುಚಿ ಇದೆ. ಹೀಗಾಗಿ ನನಗೆ ಅಂಥವರ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. 

* ನಿಮ್ಮ ಆ ಹೊಸ ಕಥೆಯ ನಾಯಕಿ ಐಂದ್ರಿತಾ ರೇ ಹಾಗೂ ನಿಮ್ಮ ಜೋಡಿ ಮದುವೆ ನಂತರವೂ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆಯೇ?
ಖಂಡಿತ ಕಾಣಿಸಿಕೊಳ್ಳುತ್ತೇವೆ. ನಿಜ ಜೀವನದಲ್ಲಿ ಜೋಡಿಯಾದವರು ತೆರೆ ಮೇಲೆ ಜೋಡಿ ಆಗಬಾರದು ಅಂತೇನು ಇಲ್ಲ. ನಮ್ಮ ಇಬ್ಬರಿಗೂ ಸೂಕ್ತ ಎನಿಸುವ, ನಾವಿಬ್ಬರು ಆ ಕತೆ ಮಾಡಬೇಕು ಎನ್ನುವ ಬೇಡಿಕೆ ಇದ್ದರೆ ನನ್ನದೇನು ಅಭ್ಯಂತರವಿಲ್ಲ. ಅಲ್ಲದೆ ಮದುವೆಗೂ ಮೊದಲೇ ನಾನು ಮತ್ತು ಐಂದ್ರಿತಾ ರೇ ಒಟ್ಟಿಗೆ ಸಿನಿಮಾ ಮಾಡಿದರೂ ಅಚ್ಚರಿ ಇಲ್ಲ. ಅಂಥ ಕತೆ ಸಿಗಬೇಕು ಅಷ್ಟೆ.

* ಚಿತ್ರದಲ್ಲಿ ಯಾರೆಲ್ಲ ನಟಿಸಿದ್ದಾರೆ? ಈಗ ಸಿನಿಮಾ ಯಾವ ಹಂತದಲ್ಲಿದೆ?
ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಚಿತ್ರದ ನಾಯಕಿಯಾಗಿ ಪೂಜಾ ದೇವೇರಿಯಾ ಇದ್ದಾರೆ. ಉಳಿದಂತೆ ಹಿರಿಯ ರಂಗಭೂಮಿ ನಟ ಬಾಬು ಹಿರಣ್ಣಯ್ಯ, ನಟಿ ಅರುಣಾ ಬಾಲರಾಜ್, ಕಿರಿಕ್ ಪಾರ್ಟಿ ಸಹನಟರಾದ ಅಶ್ವಿನ್ ರಾವ್ ಪಲ್ಲಕ್ಕಿ , ಒಂದು ಮೊಟ್ಟೆಯ ಖ್ಯಾತಿಯ ಪ್ರಕಾಶ್, ಶ್ರೇಯಾ ಅಂಚನ್ ನಟಿಸಿದ್ದಾರೆ. ಉಡುಪಿ, ಮೈಸೂರು,ಬೆಂಗಳೂರು, ಪಾಂಡಿಚೇರಿ ಮತ್ತು ಮುನ್ನಾರ್’ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದೊಳ್ಳೆ ಭಾವನಾತ್ಮಕ ದೃಶ್ಯಕಾವ್ಯವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಚಿತ್ರ.

Follow Us:
Download App:
  • android
  • ios