ಚಿತ್ರದ ಇಡೀ ಕತೆ ಸಾಗುವುದೇ ಕೊಲೆ ಪ್ರಕರಣದ ತನಿಖೆಯ ಬೆನ್ನುಹತ್ತಿ. ಕಳೆದ ವಾರ ತೆರೆ ಕಂಡ ‘ಪುಟ 109’ರ ಹಾಗೆಯೇ ಇಲ್ಲೂ ಇನ್ವೆಸ್ಟಿಗೇಷನ್ ಕತೆಯ ಪ್ರಧಾನ ಹಂದರ.
ಹೊಸತಲ್ಲ, ಹಳತೂ ಅಲ್ಲ. ಬಂದು ಹೋದ ಯಾವುದೋ ಕ್ರೈಮ್ ಥ್ರಿಲ್ಲರ್ ಸಿನಿಮಾ ನೆನಪಿಸುವಂತಹ ಒಂದು ಕತೆಯ ಚಿತ್ರ. ಕ್ರೈಮ್ ಥ್ರಿಲ್ಲರ್ ಸಿನಿಮಾ ಅಂದ್ಮೇಲೆ ಮರ್ಡರ್ ಮಿಸ್ಟ್ರಿ ಇರಲೇಬೇಕೆನ್ನುವ ಸೂತ್ರಕ್ಕೆ ಇದು ಕೂಡ ಹೊರತಲ್ಲ. ನಿಗೂಢ ಅಪಘಾತವೇ ಈ ಚಿತ್ರದ ಕತೆಯ ಮೂಲ ಎಳೆ. ಆ ಅಪಘಾತದಲ್ಲಿ ಮೃತಪಟ್ಟವಳು ಕಥಾ ನಾಯಕಿ. ಹೆಸರು ಕಾವ್ಯಾ ಮಂಜುನಾಥ್. ಹೆಸರಿಗೆ ತಕ್ಕಂತೆ ಚೆಂದದ ಹುಡುಗಿ. ಬುದ್ಧಿವಂತೆ ಕೂಡ. ಕತ್ತಟ್ಟೆ ಕ್ರಾಸ್ ಎಂಬ ಕಾಫಿಸೀಮೆಯ ಆ ಊರಲ್ಲಿ ಆಕೆ ಎಂತಹವರನ್ನು ಸೂಜಿಗಲ್ಲಿನಂತೆ ಸೆಳೆಯುವ ಹುಡುಗಿ. ಲೋಕಲ್ ಎಂಎಲ್‌ಎಯಿಂದ ಹಿಡಿದು, ಶೂಟಿಂಗ್ ಅಂತ ಅಲ್ಲಿಗೆ ಸೀರಿಯಲ್ ಆ್ಯಕ್ಟರ್ ರಾಹುಲ್‌ಗೂ ಆಕೆ ಮೇಲೆ ಕಣ್ಣು. ಹಾಗಿದ್ದ ಹುಡುಗಿ ಒಂದೊಮ್ಮೆ ನಿಗೂಢವಾಗಿ ನಡೆದುಹೋದ ಅಪಘಾತದಲ್ಲಿ ಸತ್ತು ಹೋದಾಗ ಅದು ಸಹಜವಾದದ್ದು ಎನ್ನುವ ಬದಲಿಗೆ ಅದು ಕೊಲೆ ಎನ್ನುವ ಶಂಕೆಯ ಮಾತೇ ಹೆಚ್ಚು. ಆ ಕೊಲೆ ಪ್ರಕರಣದ ತನಿಖೆಗಾಗಿ ಬಂದ ಸಿಐಡಿ ಆಫೀಸರ್ ಇಂದ್ರಜಿತ್‌ನ ಚಾಣಾಕ್ಷ ತನಿಖೆಯ ಸುತ್ತಲ ಕತೆಯೇ ಈ ಚಿತ್ರ.
ಒಂದೆಡೆ ತನಿಖೆಯ ಕುತೂಹಲವಾದರೆ, ಮತ್ತೊಂದೆಡೆ ಸಾಕ್ಷ್ಯನಾಶದ ದೊಡ್ಡ ಹುನ್ನಾರವೂ ಕತೆಯ ಉದ್ದಕ್ಕೂ ಸಾಗುತ್ತಾ ಬರುತ್ತದೆ. ಕತೆಗೆ ಹಾಗೊಂದು ತಿರುವಿದೆ. ಆ ಸಾಕ್ಷ್ಯ ನಾಶ ಯಾರಿಂದ ಎನ್ನುವುದು ಚಿತ್ರ ಕ್ಲೈಮ್ಯಾಕ್ಸ್‌ನಲ್ಲಿ ಬಯಲಾಗುತ್ತದೆ. ಆಗಲೇ ನಿಜವಾದ ಕೊಲೆಗಾರ ಯಾರು ಎನ್ನುವುದು ಕೂಡ ಬಯಲಾಗುತ್ತದೆ. ಚಿತ್ರದ ಕತೆ ಇದಾದರೆ, ಈ ಕತೆ ನಿರೂಪಣೆಯೊಂದಿಗೆ ಸಾಗುತ್ತದೆ. ಸಿಐಡಿ ಆಫೀಸರ್ ಇಂದ್ರಜಿತ್ ವೃತ್ತಿ ಜೀವನಲ್ಲಿ ನಡೆದ ಪ್ರಮುಖ ಘಟನೆಯಿದು. ನಿವೃತ್ತಿ ಬದುಕಲ್ಲಿ ಟಿವಿ ಸಂದರ್ಶನವೊಂದರಲ್ಲಿ ಕುಳಿತಾಗ ಈ ಕತೆ ಬಿಚ್ಚಿಡುತ್ತಾ ಹೋಗುತ್ತಾರೆ. ಚಿತ್ರಕ್ಕೆ ಕಥಾ ನಾಯಕನ ಮೂಲಕವೇ ನಿರೂಪಣೆಯ ತಂತ್ರ ಬಳಸಿದರೂ ಅಷ್ಟೇನು ರುಚಿಕಟ್ಟಾಗಿಲ್ಲ ಅದು.
ಆರಂಭದಿಂದ ಬಹುತೇಕ ಮುಕ್ಕಾಲು ಭಾಗದವರೆಗೂ ಆಮೆಗತಿಯಲ್ಲೇ ಸಾಗಿ ಬರುವ ಕತೆ ಒಂದು ಹಂತದಲ್ಲಿ ೀಕಾಫ್ ಆಗಿ ಕುತೂಹಲ ಹುಟ್ಟಿಸಿವುದು ಕ್ಲೈಮ್ಯಾಕ್ಸ್ ಹಂತಕ್ಕೆ. ಅಲ್ಲಿ ತನಕ ನಿರಾಶೆಯಲ್ಲಿ ನೀರಸವಾಗಿ ಬಂದ ಪ್ರೇಕ್ಷಕ, ಆಯಾಸ ಬಿಟ್ಟು ಒಂದಷ್ಟು ತೆರೆಯತ್ತ ಕಣ್ಣು ಕೇಂದ್ರಿಕರಿಸುವುದೇ ಕ್ಲೈಮ್ಯಾಕ್ಸ್ ಆಗಮನದ ಹೊತ್ತಿಗೆ. ಅಲ್ಲಿ ಚಿತ್ರ ಒಂದಷ್ಟು ಕುತೂಹಲಕಾರಿಯಾಗಿ, ಪ್ರೇಕ್ಷಕರನ್ನು ರಂಜಿಸುತ್ತದೆ. ಹಾಗೊಂದು ವಿಶೇಷತೆ ಕತೆಯಲ್ಲಿ ತಾಜಾ ಎನಿಸುತ್ತದೆ. ಅಷ್ಟೇ ಯಾಕೆ, ಕ್ರೈಮ್ ಥ್ರಿಲ್ಲರ್ ಕತೆಗಳಿಗೆ ಟ್ವಿಸ್ಟ್‌ಗಳೇ ಜೀವಾಳ. ನಿರ್ದೇಶಕರು ಆ ಕಡೆಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ಅವರು ಕರೆ ಮಾಡಿದ ಚಂದಾದಾರರು ಬಹು ಸಮಯ ವ್ಯಾಪ್ತಿ ಪ್ರದೇಶದಿಂದಲೇ ಆಚೆ ಇರುತ್ತಾರೆ. ನಾಯಕಿ ಕಾವ್ಯಾ ಕೊಲೆ, ಪುಟಾಣಿ ರಿಷಿಕಾ ಆಕಸ್ಮಿಕ ಸಾವು, ಸಹನಾ ನಾಪತ್ತೆ ಪ್ರಕರಣಗಳ ಮೂಲಕ ಮೊಬೈಲ್ ಫೋನ್ ದುಷ್ಪರಿಣಾಮಗಳನ್ನು ತೋರಿಸಿದ್ದಾರೆ. ಎಚ್ಚರ ತಪ್ಪಿದರೆ ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶ ದಾಟಬಹುದು ಎನ್ನುವುದನ್ನು ಈ ಸಿನಿಮಾ ಮೂಲಕ ಹೇಳಿದ್ದಾರೆ.
ದಿಲೀಪ್ ರಾಜ್ ಹೊರತು ಪಡಿಸಿದರೆ ಚಿತ್ರದ ಕಲಾವಿದರ ಬಳಗ ಬಹುತೇಕ ಹೊಸದು. ಸಿಐಡಿ ಆಫೀಸರ್ ಆಗಿ ದಿಲೀಪ್ ರಾಜ್, ಎಂಎಲ್‌ಎ ಆಗಿ ಸಂತೋಷ್, ಕಿರುತೆರೆ ನಟನಾಗಿ ಶರತ್, ನಾಯಕಿ ಪಾತ್ರದಲ್ಲಿ ಶಿಲ್ಪಾ ಮಂಜುನಾಥ್ ಅಭಿನಯಿಸಿದ್ದು, ಅಷ್ಟು ಕಲಾವಿದರ ಅಭಿನಯದ ನೋಡಗರಿಗೆ ಆಪ್ತವಾಗುತ್ತದೆ. ಹಾಗೆ ನೋಡಿದರೆ ಮ್ಯಾಥ್ಯೂ ಮನು ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಶ್ರೀನಿವಾಸ್ ರಾಮನಗರ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿದೆ. ಚಿಕ್ಕಮಗಳೂರಿನ ಕಾಡು ಮೇಡು, ಒಂಟಿ ಮನೆಗಳು, ಉದ್ದನೆಯ ರಸ್ತೆಗಳು, ಹಿನ್ನೀರು ಪ್ರದೇಶಗಳನ್ನು ಸೊಗಸಾಗಿ ತೋರಿಸಿ, ಕತೆಯ ನಿಧಾನಗತಿಯ ಬೇಸರ ಮರೆಸುತ್ತಾರೆ. ಬಹಳಷ್ಟು ಸನ್ನಿವೇಶಗಳಲ್ಲಿ ಸಂಭಾಷಣೆ ನಾಟಕೀಯ ಎನಿಸುತ್ತದೆ. ಉತ್ತರ ಕರ್ನಾಟಕದ ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ ಎಂದ ಚಿತ್ರತಂಡ ಆ ಮಾತು ಎಲ್ಲೂ ಮನಸ್ಸಿಗೆ ತಟ್ಟದೆ ಸಿನಿಮಾ ಮುಗಿದು ಹೋಗುತ್ತದೆ.
ಚಿತ್ರ: ನೀವು ಕರೆ ಮಾಡಿದ ಚಂದಾದಾರರು
ತಾರಾಗಣ : ದಿಲೀಪ್ ರಾಜ್. ಸಂತೋಷ ರೆಡ್ಡಿ , ಆದರ್ಶ್, ಶರತ್, ಶಿಲ್ಪಾ ಮಂಜುನಾಥ್, ಐಶ್ವರ್ಯ ರಂಗರಾಜನ್, ವಿನೋದ್
ಮಹಾದೇವ್
ನಿರ್ದೇಶನ : ಸಿ.ಮೋನಿಶ್
ಸಂಗೀತ: ಅದಿಲ್ ನದಾಫ್
ಛಾಯಾಗ್ರಹಣ: ಶ್ರೀನಿವಾಸ್ ರಾಮನಗರ
ರೇಟಿಂಗ್: **
