Asianet Suvarna News Asianet Suvarna News

ಹೇಗಿದೆ ’ಬಜಾರ್’ ? ಇಲ್ಲಿದೆ ಚಿತ್ರ ವಿಮರ್ಶೆ

ಸಿಂಪಲ್ ಸುನಿ ನಿರ್ದೇಶನದ ’ಬಜಾರ್’ ಚಿತ್ರ ರಿಲೀಸಾಗಿದೆ. ಹೇಗಿದೆ ಈ ಚಿತ್ರ? ಏನ್ ಹೇಳೋಕೆ ಹೊರಟಿದ್ದಾರೆ ನಿರ್ದೇಶಕರು? ಇಲ್ಲಿದೆ ಬಜಾರ್ ಚಿತ್ರ ವಿಮರ್ಶೆ. 

Sandalwood movie Bazar cinema review here
Author
Bengaluru, First Published Feb 2, 2019, 11:35 AM IST

ರೆಸ್ಟೋರೆಂಟ್‌ನಲ್ಲಿ ಬಫೆ ಊಟ ಆದ ಮೇಲೆ ಒಂದು ಕಪ್‌ನಲ್ಲಿ ಫ್ರೂಟ್ಸು, ಮೇಲೊಂದು ಸ್ಪೂನು ಐಸ್‌ಕ್ರೀಮು, ಒಂಚೂರು ಚಾಕ್ಲೇಟು, ಪಕ್ಕದಲ್ಲಿರುವ ಒಂದೇ ಒಂದು ಜಾಮೂನು ಎಲ್ಲವನ್ನೂ ಒಟ್ಟಿಗೆ ಹಾಕಿ ತಿನ್ನುವ ಪರಿಪಾಠ ಅನೇಕರಿಗಿದೆ. ಸಿಂಪಲ್ ಸುನಿ ಆ ಸೂತ್ರವನ್ನು ಪರ್ಫೆಕ್ಟಾಗಿ ಇಲ್ಲಿ ಬಳಸಿಕೊಂಡಿದ್ದಾರೆ.

ಇಲ್ಲಿ ರೌಡಿಸಂ ಇದೆ, ನೆಂಚಿಕೊಳ್ಳಲು ಅನಾಥ ಪ್ರಜ್ಞೆ ಇದೆ, ಪ್ರೇಮಿಗಳಿಗೆ ಕ್ಯೂಟ್ ಲವ್‌ಸ್ಟೋರಿ, ಆ್ಯಕ್ಷನ್ ಪ್ರೇಮಿಗಳಿಗೆ ಮಚ್ಚೇಟು, ಥ್ರಿಲ್ಲರ್ ಲವ್ವರ್‌ಗೆ ಪಾರಿವಾಳ ರೇಸು, ಕಾಮಿಡಿ ಪಂಚ್ ಪಟೇಲರಿಗೆ ಸಾಧು ಕೋಕಿಲ ಕಾಮಿಡಿ ಇವೆಲ್ಲವನ್ನೂ ಒಂದೇ ಒಂದು ಸಣ್ಣ ಕಪ್ಪಲ್ಲಿ ಹಾಕಿ ಕೊಟ್ಟಿದ್ದಾರೆ. ಕಪ್ಪು ತುಂಬಿ ತುಳುಕುತ್ತಿದೆ ಅನ್ನಿಸಿದರೂ ಸುನಿ ಎಲ್ಲವನ್ನೂ ತಮ್ಮ ಸ್ಟೈಲಿಗೆ ಒಗ್ಗಿಸಿಕೊಂಡಿದ್ದು ಅವರ ಶಕ್ತಿ ಮತ್ತು ಯುಕ್ತಿ.

ಇಲ್ಲೊಬ್ಬ ಯಜಮಾನ. ಅವನಿಗೊಬ್ಬ ದಳಪತಿ. ವೀರಾಧಿವೀರ. ಅವನನ್ನು ಮೀರಿಸುವವರಿಲ್ಲ. ಅವನ ಶಕ್ತಿ ಸಾಮರ್ಥ್ಯಗಳನ್ನು ಜನರಿಗೆ ಮನದಟ್ಟು ಮಾಡುವುದಕ್ಕೆ ಆರಂಭದಲ್ಲಿ ನಿರ್ದೇಶಕರು ಫೀಲ್ಡಿಗಿಳಿದು ಹೋರಾಡಿದ್ದಾರೆ. ಯಾವಾಗ ಅಣ್ಣಂಗೆ ಲವ್ವಾಗುತ್ತದೋ ಸಣ್ಣ ವಿರಾಮ. ಆಗ ಸುನಿ ತಮ್ಮ ಇಷ್ಟದ ಲವ್ ಸ್ಟೋರಿಗೆ ಬರುತ್ತಾರೆ. ಮಳೆ ಬರುತ್ತದೆ. ಹುಡುಗಿ ಒದ್ದೆಯಾಗುತ್ತಾಳೆ. ಮಳೆ ನೀರಲ್ಲಿ ಅವನ ಹೃದಯವನ್ನೂ ತೇಲಿ ಬಿಡಲಾಗುತ್ತದೆ. ಈ ಮಧ್ಯೆ ಪಾರಿವಾಳ. ಅದಕ್ಕೆ ಕಾಳು ಹಾಕೋದು, ಸಾಕೋದರ ಜತೆಗೆ ನಾಯಕನ ತ್ಯಾಗ ಗುಣ, ಜಾಣತನ, ಒಳ್ಳೆಯತನ ಇವೆಲ್ಲವನ್ನೂ ಎಳೆಎಳೆಯಾಗಿ ವಿವರಿಸುವುದಕ್ಕೆ ಸುನಿ ತನ್ನ ಬರವಣಿಗೆ ಅಸ್ತ್ರಗಳನ್ನೆಲ್ಲಾ ಪ್ರಯೋಗಿಸಿದ್ದಾರೆ.

ಅದಕ್ಕಾಗಿ ಅವರನ್ನು ಮೆಚ್ಚಲೇಬೇಕು. ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಚಿತ್ರದ ನಾಯಕ ಧನ್‌ವೀರ್ ಆರಡಿ ವೀರ. ಸಿಕ್ಸ್‌ಪ್ಯಾಕ್ ಅವರ ಹೆಗ್ಗಳಿಕೆ. ಮಚ್ಚು ಹಿಡಿಯುವ ಕಲೆಯನ್ನು ಮೊದಲ ಚಿತ್ರದಲ್ಲೇ ಸಾಧಿಸಿದ್ದು ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿ. ಚಿತ್ರದಲ್ಲೊಂದು ಸೀನ್ ಇದೆ. ನಾಯಕನ ಕಣ್ಣಲ್ಲಿ ಪಾರಿವಾಳವೂ ಪಾರಿವಾಳದ ಕಣ್ಣಲ್ಲಿ ನಾಯಕನೂ ಒಂದಾಗಿಹೋಗುತ್ತಾರೆ. ಪಾರಿವಾಳವೂ ಗೆಲ್ಲುತ್ತದೆ, ನಾಯಕನೂ ಗೆಲ್ಲುತ್ತಾನೆ. ಇಬ್ಬರೂ ಆ ಕ್ಷಣ ಒಂದೇ ಆಗುತ್ತಾರೆ. ಈ ಚಿತ್ರಕ್ಕಾಗಿ ಅವರು ಪಟ್ಟ ಶ್ರಮ ಪ್ರತೀ ಫ್ರೇಮ್‌ನಲ್ಲೂ ಗೊತ್ತಾಗುತ್ತದೆ.

ಗೊತ್ತಿಲ್ಲದ ಇಂಗ್ಲಿಷ್ ಮಾತನಾಡುವ, ಧರಿಸಿಲ್ಲದ ಸ್ಕರ್ಟನ್ನು ಧರಿಸಿ ಮುಜುಗರ ಅನುಭವಿಸುವ ಹುಡುಗಿಯಾಗಿ ಅದಿತಿ ಪ್ರಭುದೇವ ಅಭಿನಯ ಚೆಂದ. ಶರತ್ ಲೋಹಿತಾಶ್ವ, ದೀಪಕ್ ರಾಜ್ ಶೆಟ್ಟಿ ಪಾತ್ರಗಳಿಗೆ ನೆನಪಲ್ಲಿ ಉಳಿಯುವ ಗುಣ ಇದೆ. ಉಳಿದ ಸಣ್ಣ ಪುಟ್ಟ ರೌಡಿಗಳನ್ನು ಕತೆ ಪರಿಗಣನೆಗೆ ತೆಗೆದುಕೊಂಡಂತಿಲ್ಲ. ಮುಖ್ಯವಾಗಿ ಈ ಚಿತ್ರದ ಕತೆಯನ್ನು ಬುದ್ಧಿ ಮಾತು ಕೇಳಿ ಬರೆದಂತಿದೆ. ಎಲ್ಲವೂ ಇದೆ ಮತ್ತು ಏನೆಲ್ಲಾ ಇಲ್ಲ. ಲೆಕ್ಕಾಚಾರಗಳು ದಾರಿ ತಪ್ಪಿಸುತ್ತದೆ. ನಿರ್ದೇಶಕರಿಗದು ಗೊತ್ತಿದೆ.

ಸುನಿ ಕೈಗೆ ಮಚ್ಚು ಹೊಸದು. ಮಚ್ಚು ಬೀಸುವುದೇನೋ ಚೆನ್ನಾಗಿ ಬೀಸಿದ್ದಾರೆ. ಆದರೆ ಮಚ್ಚಿ ನೇಟಿನಿಂದ ತಪ್ಪಿಸಿಕೊಳ್ಳುವುದಕ್ಕೆ ಬೇರೆಯೇ ಚಾಕಚಕ್ಯತೆ ಬೇಕು.

 - ರಾಜೇಶ್ ಶೆಟ್ಟಿ 

Follow Us:
Download App:
  • android
  • ios