ಟ್ರಂಕಿನೊಳಗೊಂದು ಕಥೆ!

Sandalwood latest movie Trunk fil review
Highlights

ನಾವೆಲ್ಲಾ ಹಳೇಕಾಲದ ಟ್ರಂಕ್ ನೋಡಿದ್ದೇವೆ. ಕೆಲವರೂ ಬಳಸಿದ್ದು ಇದೆ. ಈ ಟ್ರಂಕಿನ ಸುತ್ತಮುತ್ತ ನಡೆಯುವ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ರೆ ಹೇಗಿರುತ್ತೆ? ಹೌದು. ಇಂತದ್ದೇ ಒಂದು ಕಥಾ ಹಂದರವನ್ನು ಇಟ್ಟುಕೊಂಡು ’ಟ್ರಂಕ್’ ಎನ್ನುವ ಚಿತ್ರ ಬಂದಿದೆ. ಹೇಗಿದೆ ಈ ಚಿತ್ರ? 

ಅದೊಂದು ಹಳೇ ಕಾಲದ ಟ್ರಂಕ್. ಅದೇ ಇಲ್ಲಿನ ಕೇಂದ್ರ ಬಿಂದು. ಅದರೊಳಗಿನ ಭಯಾನಕ ಕತೆಯೇ ಈ ಚಿತ್ರ. ಇಲ್ಲಿ ‘ಟ್ರಂಕ್’ ಅನ್ನೋದಷ್ಟೇ ವಿಶೇಷ. ಉಳಿದಂತೆ, ಎಲ್ಲವೂ ಹಾರರ್ ಸಿನಿಮಾದ ಹಳೇ ಸರಕು.

ಒಂಟಿ ಮನೆ, ಕಗ್ಗತ್ತಲು, ಅತೃಪ್ತ ಆತ್ಮ, ಅದು ಮತ್ತೊಬ್ಬರ ಮೈ ಮೇಲೆ ಸೇರಿಕೊಂಡು ಅಬ್ಬರಿಸುವ ರೀತಿ, ಅದರೊಂದಿಗೆ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಭಯಾನಕ ಶಬ್ದ. ಕೊನೆಗೆ ಆ ಆತ್ಮವನ್ನು ದೂರವಾಗಿಸುವ ಪ್ರಯತ್ನ. ಇವೆಲ್ಲವೂ ಹಾರರ್ ಸಿನಿಮಾದ ಸಿದ್ಧ ಸೂತ್ರವೇ. ಅವೆಲ್ಲವನ್ನು ನೆಚ್ಚಿಕೊಂಡೇ ‘ಟ್ರಂಕ್’ಒಳಗಿ ನಿಂದ ಮನಕಲುಕುವ ಕತೆಯೊಂದನ್ನು ಹೊರತೆಗೆದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮಾ.

ಅವರ ನಿರ್ದೇಶನದ ಮೊದಲ ಪ್ರಯತ್ನ, ಜತೆಗೆ ಅಷ್ಟು ಚಿಕ್ಕ ವಯಸ್ಸು. ಅಂತಹದರಲ್ಲೇ ಸಿನಿಮಾ ಮೇಲಿನ ಪ್ರೀತಿ ಮತ್ತು ನಿರ್ದೇಶಕಿ ಆಗುವ ಹಂಬಲ, ಅವರೆಡು ಅವರ ಕೆಲಸದಲ್ಲಿ ಕಾಣುತ್ತವೆ. ಹಾರರ್ ಸಿನಿಮಾವೊಂದನ್ನು ಅನುಭವಿ ನಿರ್ದೇಶಕರ ರೀತಿಗೆ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಆ ಕಾರಣಕ್ಕಾಗಿ ಅವರಿಗೆ ಮೆಚ್ಚುಗೆ ಹೇಳಲೇಬೇಕು.ಆದ್ರೆ, ಹಿಡಿ ಗಾತ್ರದ ಆ ಕತೆಯನ್ನು ಮುಡಿ ತನಕ ಎಳೆದು ಜಗ್ಗಾಡಿ, ಪ್ರೇಕ್ಷಕರಲ್ಲಿ ನೀರಸ ಮೂಡಿಸುವುದು ಅವರ ಮೊದಲ ನಿರ್ದೇಶನದಲ್ಲಿ ಆದ ಲೋಪವೂ ಹೌದು. ಸೈಕಲಾಜಿಕಲ್, ಥ್ರಿಲ್ಲರ್ ಕತೆಗೆ ಇಲ್ಲಿ ಹಾರರ್ ಸ್ಪರ್ಶ ಕೊಟ್ಟಿದ್ದಾರೆ ನಿರ್ದೇಶಕರು.

ನಿರ್ದೇಶಕರು ಕತ್ತಲು ಮತ್ತು ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ನಗರದ ಯಾವುದೇ ಭವ್ಯ ಬಂಗಲೆಗೂ ಕಮ್ಮಿ ಇಲ್ಲದಂತಹ ಸುಸಜ್ಜಿತ ಆ ಒಂಟಿ ಮನೆಗೆ ಕರೆಂಟ್ ಕನೆಕ್ಷನ್ ಇಲ್ಲ ಅಂದ್ರೆ ನಂಬುವುದಕ್ಕೂ ಅಸಾಧ್ಯ. ಒಂದು ವೇಳೆ ಇದ್ದರೂ, ವಿದ್ಯುತ್ ಬೆಳಕನ್ನು ಬೇಕಂತಲೇ  ಬಳಸಿಕೊಂಡಿಲ್ಲವೇ? ಪ್ರತಿ ಕ್ಷಣ ಆ ಮನೆಯಲ್ಲಿ ಕ್ಯಾಂಡಲ್ ಹಿಡಿದು ಓಡಾಡುವ ಆ ಪಾತ್ರಗಳು ಪ್ರೇಕ್ಷಕರಲ್ಲಿ ಇಂತಹ ಪ್ರಶ್ನೆ ಹುಟ್ಟಿಸುತ್ತವೆ. ಆದರೂ ಇಲ್ಲಿ ಗಮನ ಸೆಳೆಯುವುದು ಛಾಯಾಗ್ರಹಣದ ಕೆಲಸ. ಒಂದೇ ಮನೆಯೊಳಗೆ ಪದೇ ಪದೇ ಸುತ್ತು ಹಾಕುವ ಕ್ಯಾಮರಾ, ಕಂಡಾಗೆಲ್ಲ ಹೊಸತನ. ಆ ಮಟ್ಟಿಗೆ ಭಜರಂಗ್ ಕೊನಧಮ್ ಮತ್ತು ಸಂದೀಪ್ ಅಲುರಿ ಕೆಲಸ ಅಚ್ಚುಕಟ್ಟು.

ನಾಯಕ ನಿಹಾಲ್ ಮೊದಲ ಪ್ರಯತ್ನ ಮೆಚ್ಚುಗೆ ಆಗುತ್ತೆ. ವೈಶಾಲಿಗೆ ನಟನೆ ಹೊಸದಲ್ಲ, ಹರಿಣಿ ಪಾತ್ರದಲ್ಲಿ ಅವರದ್ದು ಸಹಜವಾದ ನಟನೆ. ಹಾಗೆಯೇ ಅರುಣ ಬಾಲರಾಜ್, ಸುಂದರಶ್ರೀ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಕೆಲವೊಮ್ಮೆ ಅಷ್ಟು ಜನರು, ಭಯದ ಸಂದರ್ಭದಲ್ಲೂ  ಸಹಜವಾಗಿ ನಿಂತಂತೆ ಕಾಣಿಸುವುದು ನಟನೆಯಲ್ಲಾದ  ಲೋಪ. ಒಟ್ಟಾರೆ ನಿಧಾನಗತಿಯ ಚಿತ್ರಕತೆಗೆ ಚಿತ್ರದ ತಾಂತ್ರಿಕ ಕೆಲಸ ಒಂದಷ್ಟು ಚುರುಕು ಕಾಣುವಂತೆ ಮಾಡಿದ್ದರೂ, ಕ್ಲೈಮ್ಯಾಕ್ಸ್ ಹೊತ್ತಿಗೆ ಇನ್ನೇನೋ ಹೇಳಲು ಹೋಗಿ ಆಭಾಸ ತರಿಸುವುದೊಂದೇ ಟ್ರಂಕ್ ಒಳಗಿನ ಬೇಸರ.  

ಚಿತ್ರ: ಟ್ರಂಕ್ ತಾರಾಗಣ : ನಿಹಾಲ್, ವೈಶಾಲಿ ದೀಪಕ್, ರಾಜೇಶ್ ಭಟ್, ಅರುಣ ಬಾಲರಾಜ್, ಸುಂದರಶ್ರೀ ನಿರ್ದೇಶನ : ರಿಷಿಕಾ ಶರ್ಮಾ ಸಂಗೀತ : ಕಾರ್ತಿಕ್, ಪ್ರದೀಪ್, ಗಣೇಶನ್  ಹಿನ್ನಲೆ ಸಂಗೀತ: ಅಲ್ವಿನ್ ಡೊಮಿನಿಕ್ ಛಾಯಾಗ್ರಹಣ: ಭಜರಂಗ್ ಕೊನಧಮ್, ಸಂದೀಪ್ ಅಲುರಿ ನಿರ್ಮಾಣ: ರಾಜೇಶ್ ಭಟ್ ರೇಟಿಂಗ್: ***

 

-ದೇಶಾದ್ರಿ ಹೊಸ್ಮನೆ 

loader