ಅಭಿಮಾನಿಗಳ ಸಂತೋಷ, ನೋವಿಗೆ ಸದಾ ಸ್ಪಂದಿಸುವ ಕಿಚ್ಚ ಸುದೀಪ್, ಇದೀಗ ಮತ್ತೆ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹೇಗೆ? ಮಾಡಿದ್ದೇನು?
ಅಭಿಮಾನಿಗಳೇ ದೇವರೆಂದು ಕೊಳ್ಳುತ್ತಾರೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು. ಅದರಲ್ಲಿಯೂ ಕಿಚ್ಚ ಸುದೀಪ್ ಅಭಿಮಾನಿಯ ಪ್ರತಿಯೊಂದೂ ಟ್ವೀಟಿಗೆ ರೆಸ್ಪಾನ್ಸ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ.
ಅಭಿಮಾನಿಯ ತಾಯಿಯೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ನೆರವಿಗೂ ಕಿಚ್ಚ ಧಾವಿಸಿದ್ದಾರೆ. ಟ್ವಿಟರ್‌ನಲ್ಲಿ ಬಹಳ ಆ್ಯಕ್ಟಿವ್ ಆಗಿರೋ ಕಿಚ್ಚ, ಹೊಗಳಿಕೆಗೆ ಮಾತ್ರವಲ್ಲ, ಪ್ರತಿಯೊಬ್ಬರ ನೋವಿಗೂ ಸ್ಪಂದಿಸುತ್ತಾರೆ.
ತಮ್ಮ ಅಪ್ಪಟ ಅಭಿಮಾನಿಯೊಬ್ಬ ತನ್ನ ಟ್ವಿಟರ್ ಅಕೌಂಟ್‌ನಲ್ಲಿ ತಾಯಿ ಸ್ತನದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಧನ ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡಿದ್ದರು. ಈಗಾಗಲೆ ಎರಡು ಸಲ ಆಪರೇಷನ್ ಮಾಡಿಸಿದ್ದು, ಮತ್ತೊಮ್ಮೆ ರೋಗ ಉಲ್ಬಣಿಸಿದೆ. ಮತ್ತೊಮ್ಮೆ ಆಪರೇಷನ್ ಮಾಡಿಸಲು ವೈದ್ಯರು ಹೇಳಿದ್ದಾರೆ. ಇದರ ವೆಚ್ಚದ ಬಗ್ಗೆ ಸಹಾಯ ಮಾಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ, ‘ನನ್ನ ಸಾಮರ್ಥ್ಯಕ್ಕಾಗುವಷ್ಟು ಸಹಾಯ ಮಾಡುತ್ತೇನೆ. ಆಸ್ಪತ್ರೆ ವಿಳಾಸ ಕಳುಹಿಸಿದರೆ, ನನ್ನವರು ಆಸ್ಪತ್ರೆಯೊಂದಿಗೆ ಮಾತನಾಡುತ್ತಾರೆ,' ಎಂದು ಭರವಸೆ ನೀಡಿದ್ದಾರೆ. 'ಎಲ್ಲವೂ ಸರಿ ಹೋಗಿ, ಬೇಗ ಗುಣ ಮುಖರಾಗಲೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ,’ಎಂದು ಟ್ವೀಟ್ ಮಾಡಿದ್ದಾರೆ.
