ಚಿತ್ರ ವಿಮರ್ಶೆ: ಒಂಚೂರು ಆಕರ್ಷಣಂ ಒಂದಷ್ಟು ವಿ‘ಕರ್ಷಣಂ’!
ಕುತೂಹಲ ಮೂಡಿಸೋ ಕಥೆ ಸಿಕ್ಕರೆ ಉಳಿದೆಲ್ಲ ಕೊರತೆಗಳೂ ನಗಣ್ಯವೆನಿಸಿ ಸಿನಿಮಾ ಪ್ರೇಕ್ಷಕನಿಗೆ ರೀಚ್ ಆಗುತ್ತೆ ಎಂಬ ಮಾತಿಗೆ ಉದಾಹರಣೆಯಾಗಿ ನಿಲ್ಲುವ ಸಿನಿಮಾ ಕರ್ಷಣಂ.
ಈ ಸಿನಿಮಾದಲ್ಲಿ ಪವರ್‌ಫುಲ್ ಆಗಿರೋದೇ ಕಥೆ. ಮತ್ತು ಅದನ್ನು ನಿರೂಪಿಸುವ ಕ್ರಮ. ಸಾಮಾನ್ಯವಾಗಿ ಹೊಸಬರ ಸಿನಿಮಾದಲ್ಲಿ ಕಾಣುವ ಎಲ್ಲವನ್ನೂ ಹೇಳಿಬಿಡುವ ಆತುರ, ಒಂದಿಷ್ಟುಗೊಂದಲ, ಅನಗತ್ಯ ತಿರುವುಗಳನ್ನು ಸೃಷ್ಟಿಸಲು ಪಡುವ ಪ್ರಯಾಸ ಇದರಲ್ಲಿಲ್ಲ. ಬದಲಾಗಿ ನಾಲ್ಕು ಮರ್ಡರ್‌ಗಳ ಮಿಸ್ಟರಿಯನ್ನು ಸಾವಕಾಶವಾಗಿ ಬಿಡಿಸುವ ತಾದಾತ್ಮ ಇದೆ. ಹಾಗೆಂದು ಅನಗತ್ಯ ಅಂಶಗಳೂ ಇಲ್ಲದಿಲ್ಲ. ಆದರೆ ಕಥೆ ಹುಟ್ಟಿಸುವ ಕುತೂಹಲದ ಮುಂದೆ ಅವು ಹೆಚ್ಚು ಕಿರಿಕಿರಿ ಮಾಡಲ್ಲ.
ಶಂಕರ್‌ನಾಗ್ ಅಭಿಮಾನಿ ಶಂಕರ ಸಿನಿಮಾದ ಹೀರೋ. ಆತನಿಗೊಬ್ಬ ಗೆಳತಿ ಮಾನ್ಯ. ಈಕೆ ಪತ್ರಕರ್ತೆ. ಒಂದು ಸಹಾಯ, ಮತ್ತೊಂದು ಫೈಟ್‌ಗೆ ಹುಡುಗಿ ಹೀರೋಗೆ ಮನಸೋಲುತ್ತಾಳೆ. ಸಿನಿಮಾದ ಮೊದಲ ಭಾಗದಲ್ಲಿ ಮಾಫಿಯಾ, ಭೂಗತ ಜಗತ್ತು, ಬಡತನದ ಆಸೆ, ದುರಾಸೆಗಳ ಚಿತ್ರಣವಿದೆ. ಈ ನಡುವೆ ಮೂರು ಅನಿರೀಕ್ಷಿತ ಕೊಲೆಗಳಾಗುತ್ತವೆ. ಕೊನೆಗೆ ಮಾನ್ಯಳೇ ಶಂಕರನನ್ನು ಶೂಟ್ ಮಾಡುವ ಹೊತ್ತಿಗೆ ಸರಿಯಾಗಿ ಇಂಟರ್‌ವೆಲ್ ಬರುತ್ತೆ.
ತಾನು ಪ್ರೀತಿಸುವ ಹುಡುಗನನ್ನೇ ಮಾನ್ಯ ಯಾಕೆ ಶೂಟ್ ಮಾಡಲು ಹೊರಡುತ್ತಾಳೆ? ಅಲ್ಲಿಯವರೆಗೆ ಕೊಲೆಯಾದವರೆಲ್ಲ ಆತ್ಮೀಯರಿಂದಲೇ ಯಾಕೆ ಹತರಾಗ್ತಾರೆ? ಇದಕ್ಕೆಲ್ಲ ಉತ್ತರ ಸಿನಿಮಾದಲ್ಲಿದೆ.
ಹಿರಿಯ ಕಲಾವಿದರ ಅಭಿನಯದ ವಿಷಯದಲ್ಲಿ ಎರಡು ಮಾತಿಲ್ಲ. ಮುಖ್ಯವಾಗಿ ಶ್ರೀನಿವಾಸ ಮೂರ್ತಿ ಹಾಗೂ ಅವರ ಯೌವನದ ದಿನಗಳ ಪಾತ್ರ ಮಾಡಿದ ನಟ ಅವಮಾನ, ನೋವು, ಸಿಟ್ಟನ್ನು ಅದ್ಭುತವಾಗಿ ದಾಟಿಸಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ಹೀರೋ ಪಾತ್ರವನ್ನೂ ಮಾಡಿದ ಧನಂಜಯ್ ಅತ್ರೆ, ಅಭಿನಯ, ಡ್ಯಾನ್ಸ್‌ನಲ್ಲಿ ಪಳಗಬೇಕಿದೆ. ನಾಯಕಿ ಅನುಷಾ ರೈ ಭರವಸೆ ಹುಟ್ಟಿಸುತ್ತಾರೆ. ಬಡತನದಲ್ಲಿದ್ದುಕೊಂಡೇ ಐಷಾರಾಮಿ ಬದುಕಿನ ಕನಸು ಕಾಣುವ ಮುಗ್ಧನ ಪಾತ್ರವನ್ನು ವಿಜಯ ಚೆಂಡೂರ್ ಮನಮುಟ್ಟುವಂತೆ ಅಭಿನಯಿಸಿದ್ದಾರೆ.
ಇಷ್ಟೆಲ್ಲ ಹೇಳಿದ ಮೇಲೂ ಉಳಿಯುವ ಪ್ರಶ್ನೆ ‘ಕರ್ಷಣಂ’ ಅಂದರೇನು ಅನ್ನೋದು. ಅದಕ್ಕೆ ಉತ್ತರ ಇಡೀ ಸಿನಿಮಾದಲ್ಲಿದೆ.
ಸಿನಿಮಾ: ಕರ್ಷಣಂ
ತಾರಾಗಣ: ಧನಂಜಯ ಆತ್ರೆ, ಶ್ರೀನಿವಾಸ ಮೂರ್ತಿ, ಅನುಷಾ ರೈ, ವಿಜಯ ಚೆಂಡೂರ್, ಹೆಚ್.ಎಂ.ಟಿ ವಿಜಯ್
ನಿರ್ದೇಶನ: ಶರವಣ
ನಿರ್ಮಾಪಕ: ಧನಂಜಯ ಅತ್ರೆ
ಸಂಗೀತ: ಹೇಮಂತ್ ಸುಬ್ರಹ್ಮಣ್ಯ
ಛಾಯಾಗ್ರಹಣ: ಮೋಹನ್ ಎಂ ಮುಗುಡೇಶ್ವರನ್
ರೇಟಿಂಗ್ : ***