ಫಾರಿನ್ನು ವಿಲನ್ನು, ಸಿಕ್ಸ್ ಪ್ಯಾಕ್ ಹೀರೋ, ಮುದ್ದಾದ ಹೀರೋಯಿನ್ನು, ನಗು ಉಕ್ಕಿಸುವ ಕಾಮಿಡಿಯನ್ನು, ವಿಶ್ವ ವಿಖ್ಯಾತ ಕಲಾವಿದ ಎಂಕೆ ಮಠ, ನಿರೀಕ್ಷೆ ಹುಟ್ಟಿಸಿದ್ದ ನಿರ್ದೇಶಕ ಎಲ್ಲರೂ ಇರುವ ತಾರಕಾಸುರನದು ಅಬ್ಬರವೇ ಅಬ್ಬರ.
ಬುಡುಬುಡಿಕೆ ಜನಾಂಗದ ಹುಡುಗನ ಕತೆಯನ್ನು ನಿರ್ದೇಶಕರು ತುಂಬಾ ಪುರುಸೊತ್ತಾಗಿ ಹೇಳಿದ್ದಾರೆ. ಕತೆಗಿಂತ ಅವರಿಗೆ ವಿವರಗಳಲ್ಲಿ ಆಸಕ್ತಿ. ಬುಡುಬುಡಿಕೆ ಜನಾಂಗದ ಕೆಲವು ಸಂಪ್ರದಾಯ, ವಾಮಾಚಾರ ಪ್ರಕ್ರಿಯೆ ಇತ್ಯಾದಿಗಳನ್ನು ಎಷ್ಟು ಸೊಗಸಾಗಿ ತೋರಿಸಿದ್ದಾರೆ ಅಂದ್ರೆ ಕಣ್ಣಿಗೆ ಹಬ್ಬ. ಕಗ್ಗತ್ತಲಲ್ಲಿ ಇಡೀ ಊರಿಗೆ ಊರೇ ದೊಂದಿ ಹಿಡಿದು ಸಾಗುವ ದೃಶ್ಯವಂತೂ ಭಾರಿ ಚೆಂದ. ಈ ಎಲ್ಲವನ್ನೂ ವಿವರ ವಿವರವಾಗಿ ಬಿಡಿಸಿ ಅಂದವಾಗಿ ಕಟ್ಟಿಕೊಟ್ಟ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮತ್ತು ಅದನ್ನು ಅದ್ಭುತವಾಗಿ ತೋರಿಸಿದ ಛಾಯಾಗ್ರಾಹಕ ಕುಮಾರ್ ಗೌಡ ಕೆಲಸ ಮೆಚ್ಚುಗೆ ಅರ್ಹ.
ನಿರ್ದೇಶಕರಿಗೆ ಏನು ಹೇಳಬೇಕೆಂದು ಗೊತ್ತಿದೆ. ಆದರೆ ಹೇಗೆ ಹೇಳಬೇಕು ಅನ್ನುವುದು ಸ್ವಲ್ಪ ಗೊಂದಲವನ್ನುಂಟು ಮಾಡಿದೆ. ಹೀಗಾಗಿ ಎಲ್ಲಿಂದಲೋ ಕತೆ ಶುರುವಾಗಿ ಎಲ್ಲಿಗೋ ಕೊಂಡೊಯ್ದು ಮತ್ತೆ ಹಳಿಗೆ ತರಬೇಕು ಅನ್ನುವಾಗ ದಾರಿ ತಪ್ಪಿದ ಮಗುವನ್ನು ಒಟ್ರಾಶಿ ದರದರನೆ ಎಳೆದುಕೊಂಡು ಹೋಗುವ ತಾಯಿಯಂತೆ ಕತೆಯನ್ನು ಸರಬರನೆ ಎಳೆದುಕೊಂಡು ಹೋಗುತ್ತಾರೆ. ಅದೊಂಚೂರು ಬೇಸರ. ಪಾತ್ರಗಳನ್ನು ಕಟ್ಟಿಕೊಡುವ ವಿಚಾರದಲ್ಲೂ ಸ್ಪಷ್ಟತೆ ಇಲ್ಲ. ಸಾಧು ಕೋಕಿಲ ಇದ್ದಾರೆ ಅನ್ನುವ ಕಾರಣಕ್ಕೆ ಹಾಸ್ಯ ಸೃಷ್ಟಿಸಬಾರದು. ಕತೆಗೆ ತಕ್ಕ ಪಾತ್ರವಾಗಿ ಸಾಧು ಕೋಕಿಲ ಇರಬೇಕು. ಅದು ಕತೆಗೆ ಸಲ್ಲಬೇಕಾದ ಮರ್ಯಾದೆ.
ಈ ಚಿತ್ರದ ದೊಡ್ಡ ಸರ್ಪ್ರೈಸ್ ನಾಯಕ ವೈಭವ್. ಒಂದು ಪಾತ್ರಕ್ಕೆ ತನ್ನ ಎಲ್ಲವನ್ನೂ ನೀಡುತ್ತೇನೆ ಅನ್ನುವ ಮನೋಭಾವವೇ ಅವರ ಶಕ್ತಿ ಮತ್ತು ಹೆಚ್ಚುಗಾರಿಕೆ. ಅವರ ಶ್ರದ್ಧೆಯ ಎದುರು ನಟನೆ ಸ್ವಲ್ಪ ಮಂಕಾದರೂ ಅದು ಹೆಚ್ಚು ತಟ್ಟುವುದಿಲ್ಲ. ಒಂದು ಪಾತ್ರವಾಗಿ ಅವರು ಗೆಲ್ಲುತ್ತಾರೆ. ಸ್ಪೇಸ್ ಕಡಿಮೆ ಇದ್ದರೂ ನಾಯಕಿ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕಾಗಿ ಮಾನ್ವಿತಾ ಹರೀಶ್‌ರನ್ನುಮೆಚ್ಚಬೇಕು.ಎಂಕೆ ಮಠ ಅವರ ನಟನೆ ಮತ್ತು ಧ್ವನಿಯನ್ನೂ ಈ ಚಿತ್ರದ ಪಾತ್ರವನ್ನೂ ಹೊಂದಿಸಿ ಬರೆಯುವುದು ಸ್ವಲ್ಪ ಕಷ್ಟವೇ.
ಚಿತ್ರವನ್ನು ಎತ್ತರದ ಹಂತಕ್ಕೆ ಕೊಂಡೊಯ್ಯುವಲ್ಲಿ ಸಂಗೀತ ನಿರ್ದೇಶಕ ಧರ್ಮ ವಿಶ್ ಪಾಲು ದೊಡ್ಡದು. ಹಾಡು ಮತ್ತು ಹಿನ್ನೆಲೆ ಸಂಗೀತ ಇವೆರಡೂ ಈ ಚಿತ್ರದ ಸ್ಟಾರು. ಕೆಲವೊಂದು ಸನ್ನಿವೇಶಗಳಲ್ಲಿ ಥಿಯೇಟರ್ ತುಂಬಾ ಮೊಬೈಲ್‌ನ ಬೆಳಕು ಕಾಣಿಸುತ್ತಿತ್ತು ಅನ್ನುವುದೇ ಚಿತ್ರಕತೆ ಕುರಿತಾಗಿ ಹೇಳಬಹುದಾದ ಒಳ್ಳೆಯ ಮಾತು. ಈ ಚಿತ್ರಕ್ಕೆ ನಿಜಕ್ಕೂ ನೀಡಬೇಕಾದ್ದು ಎರಡೂವರೆ ಸ್ಟಾರು. ನಿರ್ದೇಶಕರ ವಿಭಿನ್ನ ಕಥನ ಕಲೆಗೆ ಇನ್ನರ್ಧ ಸ್ಟಾರು ಸೇರ್ಪಡೆ.
ಚಿತ್ರ: ತಾರಕಾಸುರ
ತಾರಾಗಣ: ವೈಭವ್, ಮಾನ್ವಿತಾ ಹರೀಶ್, ಸಾಧು ಕೋಕಿಲ, ಡ್ಯಾನಿ ಸಫಾನಿ
ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪ
ನಿರ್ಮಾಣ: ನರಸಿಂಹಲು
ರೇಟಿಂಗ್: ***
