ಬೆಂಗಳೂರು[ಮೇ.17]: ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಅವರಿಗೆ ‘ಆ್ಯಂಜಿಯೋಡಿಮಾ’ ಎಂಬ ಚರ್ಮ ಅಲರ್ಜಿ ಸಮಸ್ಯೆ ಉಂಟಾಗಿದ್ದು ಗುರುವಾರ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕುಂದಗೋಳ ಉಪ ಚುನಾವಣೆಯ ಪ್ರಚಾರಕ್ಕೆ ಹುಬ್ಬಳ್ಳಿಗೆ ಹೋಗಲು ಬೆಳಗ್ಗೆ 5 ಗಂಟೆಗೆ ಎದ್ದಿದ್ದ ಅವರಿಗೆ ತುಟಿ ಕೊಂಚ ಊದಿಕೊಂಡ ಅನುಭವ ಆಗಿದೆ. ಬಳಿಕ ನಾಲಗೆ ದಪ್ಪ ಆಗಲು ಶುರುವಾಗಿದ್ದು, ಮಾತನಾಡಲೂ ಆಗದಂತೆ ನಾಲಗೆ ಮರಗಟ್ಟಿದೆ. ಬಳಿಕ ಸ್ವಲ್ಪ ಹೊತ್ತಿಗೆ ಉಸಿರಾಡುವುದು ಕಷ್ಟವಾದಾಗ ತಕ್ಷಣ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರುತಿ ಅವರು, ಅಲರ್ಜಿ ಆದ ಸ್ವಲ್ಪ ಹೊತ್ತಿಗೆ ಉಸಿರಾಡುವುದು ಕಷ್ಟವಾಯಿತು. ಈ ಅಲರ್ಜಿ ಆದಾಗ ಶ್ವಾಸಕೋಶದ ಸುತ್ತಮುತ್ತಲ ಜಾಗ ಊದಿಕೊಂಡು ಗಂಟಲು ಹಿಚುಕಿದ ಹಾಗಾಗಿ ಉಸಿರಾಟ ಕಷ್ಟವಾಗುತ್ತದೆ. ತಕ್ಷಣವೇ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋದೆ. ಅವರು ಐವಿ ಇಂಜೆಕ್ಷನ್‌ ಕೊಟ್ಟರು. ಮಧ್ಯಾಹ್ನದ ತನಕ ಆಸ್ಪತ್ರೆಯಲ್ಲಿದ್ದು ವಾಪಸಾಗಿದ್ದೇನೆ. ಈಗ ಚುನಾವಣಾ ಪ್ರಚಾರದಲ್ಲಿ ನಿರತಳಾಗಿದ್ದೇನೆ ಎಂದು ಹೇಳಿದರು.

ಈ ಕಾಯಿಲೆ ಯಾವ ಕಾರಣಕ್ಕೆ ಬರುತ್ತದೆಯೋ ನನಗೆ ಗೊತ್ತಿಲ್ಲ. ಯಾವುದೋ ಒಂದು ಆಹಾರಕ್ಕೆ ಅಲರ್ಜಿ ಇರುವುದರಿಂದ ಬರುತ್ತದೆ ಎಂದು ವೈದ್ಯರು ಹೇಳಿದರು. ಯಾವ ಅಲರ್ಜಿ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ನಾಲ್ಕು ತಿಂಗಳಲ್ಲಿ ಹೀಗಾಗುತ್ತಿರುವುದು ಇದು ಎರಡನೇ ಸಲ. ನನ್ನದು ತುಂಬಾ ವಿಚಿತ್ರವಾದ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ. ಒಮ್ಮೊಮ್ಮೆ ಒಂದೊಂದು ಆಹಾರದಿಂದ ಬರಬಹುದು ಎನ್ನುತ್ತಿದ್ದಾರೆ. ಹತ್ತು ನಿಮಿಷದ ಒಳಗೆ ಚಿಕಿತ್ಸೆ ಸಿಗದೇ ಇದ್ದರೆ ಅಪಾಯ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.

ಉಸಿರಾಟಕ್ಕೂ ತೊಂದರೆ:

ಈ ಅಲರ್ಜಿ ಬಗ್ಗೆ ಪ್ರತಿಕ್ರಿಯಿಸಿರುವ ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಡೆರ್ಮಟಾಲಜಿಸ್ಟ್‌ ಡಾ. ಗಿರೀಶ್‌, ಇದಕ್ಕೆ ‘ಆ್ಯಂಜಿಯೋಡಿಮಾ’ ಎಂದು ಹೆಸರು. ಪೈತಿಗೆ ಮಾದರಿಯಲ್ಲಿ ಚರ್ಮದ ಅಲರ್ಜಿ ಆಗುವುದನ್ನು ಆ್ಯಂಜಿಯೋಡಿಮಾ ಎನ್ನುತ್ತೇವೆ. ಆದರೆ ಪೈತಿಗೆ ಚರ್ಮದ ಮೇಲಾದರೆ ಇದು ಚರ್ಮದ ಕೆಳಗಿನ ಮೃದು ಭಾಗವೂ ಸೇರಿದಂತೆ ವಿವಿಧೆಡೆ ಊದಿಕೊಳ್ಳುತ್ತದೆ. ಸಾಮಾನ್ಯವಾಗಿ ತುಟಿ, ಕಣ್ಣು, ಮುಖ ಊದಿಕೊಳ್ಳುತ್ತದೆ. ಗಂಭೀರ ಪ್ರಕರಣಗಳಲ್ಲಿ ಅನ್ನನಾಳ ಊದಿಕೊಂಡು ಉಸಿರಾಟದ ತೊಂದರೆ ಉಂಟಾಗಬಹುದು. ಉಸಿರಾಟ ಕಷ್ಟವಾದರೆ ‘ಲ್ಯಾರೆಂಜಿಯಲ್‌ ಎಡಿಮಾ’ ಎನ್ನುತ್ತೇವೆ. ಆಹಾರ ಅಲರ್ಜಿ, ಇಂಜೆಕ್ಷನ್‌ ಅಥವಾ ಮಾತ್ರೆಗಳ ಸೈಡ್‌ ಎಫೆಕ್ಟ್ನಿಂದ ಆಗಬಹುದು. ತುಂಬಾ ಜನರಲ್ಲಿ ಈ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಸಾವಿರಕ್ಕೆ ಒಂದರಂತೆ ಮಾರಣಾಂತಿಕವಾಗಿ ಬದಲಾಗಬಹುದು ಎಂದು ಮಾಹಿತಿ ನೀಡಿದರು.