ಮುಂಬೈ[ಜೂ.25]: ಹಿಂದಿ ಅವತರಣಿಕೆಯ ಜನಪ್ರಿಯ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಈ ಬಾರಿಯೂ ಖ್ಯಾತ ನಟ ಸಲ್ಮಾನ್‌ಖಾನ್‌ ಅವರೇ ನಡೆಸಿಕೊಡುವುದು ಖಚಿತವಾಗಿದೆ. ಆದರೆ ಅದರ ಬೆನ್ನಲ್ಲೇ 13ನೇ ಸೀಸನ್‌ಗಾಗಿ ಸಲ್ಲು ಪಡೆಯುತ್ತಿದ್ದಾರೆ ಎನ್ನಲಾದ ಭರ್ಜರಿ ಸಂಭಾವನೆ ಎಲ್ಲರನ್ನೂ ದಂಗುಬಡಿಸಿದೆ.

ಮೂಲಗಳ ಪ್ರಕಾರ 26 ಎಪಿಸೋಡ್‌ಗಳ ಈ ಬಾರಿ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸಲ್ಮಾನ್‌ ಪಡೆಯುತ್ತಿರುವ ಸಂಭಾವನೆ 400 ಕೋಟಿ ರು.ಗೂ ಹೆಚ್ಚು. ಅಂದರೆ ಪ್ರತಿ ಎಪಿಸೋಡ್‌ಗೆ 30 ಕೋಟಿ ರು.ಗಿಂತ ಹೆಚ್ಚು. ಕಳೆದ ಸೀಸನ್‌ನಲ್ಲಿ ಸಲ್ಮಾನ್‌, ಪ್ರತಿ ಎಪಿಸೋಡ್‌ಗೆ 12-14 ಕೋಟಿ ರು. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಈ ನಡುವೆ ವರ್ಷ ವರ್ಷ ಕಾರ್ಯಕ್ರಮಕ್ಕೆ ಸಿಗುತ್ತಿರುವ ಜನಪ್ರಿಯತೆ ಏರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸಲ್ಲು ತಮ್ಮ ಸಂಭಾವನೆಯನ್ನು ಡಬಲ್‌ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಈ ಬಾರಿ ಸ್ವತಃ ಸಲ್ಮಾನ್‌ ಕಾರ್ಯಕ್ರಮದ ನಿರ್ಮಾಪಕರೂ ಆಗಿದ್ದಾರೆ ಎನ್ನಲಾಗಿದೆ.

ಸೆ.29ರಿಂದ ಈ ಬಾರಿಯ ಕಾರ್ಯಕ್ರಮ ಆರಂಭವಾಗಲಿದ್ದು, ಈ ಬಾರಿ ಕೇವಲ ಸೆಲೆಬ್ರೆಟಿಗಳು ಮಾತ್ರವೇ ಪಾಲ್ಗೊಳ್ಳಲಿದ್ದಾರೆ. ಜನಸಾಮಾನ್ಯರಿಗೂ ಅವಕಾಶ ನೀಡುವ ಸಂಪ್ರದಾಯವನ್ನು ಚಾನೆಲ್‌ ಕೈಬಿಟ್ಟಿದೆ ಎನ್ನಲಾಗಿದೆ.