ಮುಂಬೈ[ಜು.08]: ಕಿರುತೆರೆ ಜಗತ್ತಿನ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾದ ಬಿಗ್ ಬಾಸ್ ಸೀಜನ್ 13 ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಕಾರ್ಯಕ್ರಮ ನಡೆಯಲಿರುವ ಸ್ಥಳ ಬದಲಾಗುವ ಮಾತುಗಳು ಜೋರಾಗಿವೆ. ಅಷ್ಟಕ್ಕೂ ಕಾರ್ಯಕ್ರಮ ಎಲ್ಲಾಗುತ್ತೆ?

ಲಭ್ಯವಾದ ಮಾಹಿತಿ ಅನ್ವಯ ಈ ಬಾರಿ ಬಿಗ್ ಬಾಸ್ ನಿರ್ಮಾಪಕರು ಕಾರ್ಯಕ್ರಮದ ಫಾರ್ಮೆಟ್ ಮಾತ್ರವಲ್ಲದೇ, ಲೊಕೇಶನ್ ಕೂಡಾ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಬಿಗ್ ಬಾಸ್ 13ರ ಸೆಟ್, ಮರಾಠಿ ಬಿಗ್ ಬಾಸ್ ಸೀಜನ್ 2 ನಡೆದ ಮುಂಬೈನ ಗೊರೆಗಾಂವ್ ಫಿಲಂ ಸಿಟಿಗೆ ಸ್ಥಳಾಂತರಗೊಳ್ಳಲಿದೆ. ಈ ಐಡಿಯಾ ಮರಾಠಿ ಬಿಗ್ ಬಾಸ್ ನಿರೂಪಕ ಹಾಗೂ ಸಲ್ಮಾನ್ ಖಾನ್ ಆಪ್ತ ಮಹೇಶ್ ಮಾಂಜ್ರೇಕರ್ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಬಿಗ್‌ಬಾಸ್ ಸೀಜನ್‌ಗಳು ಮುಂಬೈನ ಲೋನಾವಲಾದಲ್ಲಿರುವ ಸೆಟ್‌ನಲ್ಲಿ ನಡೆಯುತ್ತಿದ್ದವು.

ಸುಮಾರು 15 ವಾರಗಳವರೆಗೆ ನಡೆಯುವ ಬಿಗ್ ಬಾಸ್ ಸೀಜನ್ 13 ಸಪ್ಟೆಂಬರ್ 29ರಿಂದ ಆರಂಭವಾಗಲಿದೆ. ಈ ಬಾರಿಯೂ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಕಾರ್ಯಕ್ರಮ ನಿರೂಪಿಸಲಿದ್ದಾರೆ.