'ಹಿಂದು ದೇವರ ಕಥೆಗಳನ್ನು ಓದಿ ಅನುಮಾನ ಬಂದವು..' ಧರ್ಮದ ಬಗ್ಗೆ ರಾಜಮೌಳಿ ಮಾತು!
ಆರ್‌ಆರ್‌ಆರ್ ಚಿತ್ರದ ಮೂಲಕ ರಾಜಮೌಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಧರ್ಮದ ಬಗ್ಗೆ ಹಾಗೂ ತಮ್ಮ ಚಿತ್ರಗಳಲ್ಲಿ ರಾಮಾಯಣ ಹಾಗೂ ಮಹಾಭಾರತದ ಛಾಪು ಇರುವ ಬಗ್ಗೆ ಮಾತನಾಡಿದ್ದಾರೆ. ಧರ್ಮದಿಂದಾಗಿಯೇ ಇಂದು ಶೋಷಣೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದರೆ.
ನವದೆಹಲಿ (ಫೆ.18): ಬಾಹುಬಲಿ: ದಿ ಬಿಗಿನಿಂಗ್, ಬಾಹುಬಲಿ: ದಿ ಕನ್‌ಕ್ಲೂಷನ್ ಹಾಗೂ ಆರ್‌ಆರ್ ಚಿತ್ರದ ಯಶಸ್ಸಿನ ಬಳಿಕ ರಾಜಮೌಳಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅವರ ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಗೀತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಬಂದಿದ್ದು, ಆಸ್ಕರ್ ಪ್ರಶಸ್ತಿಯ ಅಂತಿಮ ರೇಸ್‌ನಲ್ಲಿದೆ. ರಾಜಮೌಳಿಯ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಪೌರಾಣಿಕ ಪಾತ್ರಗಳು, ಪೌರಾಣಿಕ ಕಥೆಗಳ ಅಂಶಗಳಿದ್ದರೂ, ಬಹುತೇಕ ಜನರಿಗೆ ರಾಜಮೌಳಿ ತಮ್ಮನ್ನು ತಾವು 'ನಾಸ್ತಿಕ' ಎಂದು ಕರೆದುಕೊಳ್ಳುತ್ತಾರೆ ಎನ್ನುವುದು ಗೊತ್ತಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರಖ್ಯಾತ ನಿರ್ದೇಶಕ ರಾಜಮೌಳಿ ಇದೇ ವಿಚಾರದ ಬಗ್ಗೆ ಮಾತನಾಡಿದ್ದು, ಧರ್ಮದ ಆಚಾರ ವಿಚಾರಗಳಿಂದ ತಾವು ಹೊರಹೋಗಿದ್ದರ ಬಗ್ಗೆ ಮಾತನಾಡಿದ್ದಾರೆ. ದಿ ನ್ಯೂಯಾರ್ಕರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಮ್ಮದು ಬಹಳ ದೊಡ್ಡ ಕುಟುಂಬ. ನನ್ನ ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅವರ ಮಕ್ಕಳು ಎಲ್ಲರಲ್ಲಿ ಎಲ್ಲರೂ ಕೂಡ ಅತಿಯಾದ ಧಾರ್ಮಿಕ ಭಾವನೆಗಳನ್ನು ಹೊಂದಿರುವವರು. ನನಗಿನ್ನೂ ನೆನಪಿದೆ. ಚಿಕ್ಕವನಾಗಿದ್ದಾಗ ಹಿಂದು ದೇವರ ಕುರಿತಾದ ಕಥೆಗಳನ್ನು ಕೇಳುವಾಗ ಹಾಗೂ ಓದುವಾಗ ಸಾಕಷ್ಟು ಅನುಮಾನಗಳು ಬರುತ್ತಿದ್ದವು. ಇದಾವುದೂ ಕೂಡ ನಿಜವಲ್ಲ ಎನ್ನುವ ಯೋಚನೆ ನನಗೆ ಬರುತ್ತಿದ್ದವು' ಎಂದಿದ್ದಾರೆ.
"ನಂತರ ನಾನು ನನ್ನ ಕುಟುಂಬದ ಧಾರ್ಮಿಕ ಅತ್ಯುತ್ಸಾಹದ ಒಳಗೆ ಸಿಕ್ಕಿಹಾಕಿಕೊಂಡೆ. ನಾನು ಧಾರ್ಮಿಕ ಗ್ರಂಥಗಳನ್ನು ಓದಲು ಪ್ರಾರಂಭಿಸಿದೆ, ತೀರ್ಥಯಾತ್ರೆಗೆ ಹೋಗಲು ಆರಂಭಿಸಿದೆ. ಕೇಸರಿ ಬಟ್ಟೆಯನ್ನು ಧರಿಸಿ ಕೆಲ ವರ್ಷಗಳ ಕಾಲ ಆಸ್ತಿಕನಾಗಿ ಸಂನ್ಯಾಸಿಯ ರೀತಿ ಬದುಕಿದೆ. ಆ ಬಳಿಕ ನನಗೆ ಕ್ರಿಶ್ಚಿಯನ್ ಧರ್ಮ ಸೆಳೆಯಿತು. ಇದಕ್ಕಾಗಿ ನನ್ನ ಸ್ನೇಹಿತರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಬೈಬಲ್ ಓದುತ್ತೇನೆ. ಚರ್ಚ್‌ಗೆ ಹೋಗುತ್ತೇನೆ. ಎಲ್ಲಾ ರೀತಿಯ ವಿಷಯಗಳನ್ನೂ ಕೂಡ ಅಧ್ಯಯನ ಮಾಡುತ್ತೇನೆ. ಕ್ರಮೇಣ, ಈ ಎಲ್ಲಾ ವಿಷಯಗಳು ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆ ಎಂದು ನನಗೆ ಅನಿಸಿದೆ' ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಐನ್ ರಾಂಡ್ ಅವರ ಕೆಲಸವವು ತಮಗೆ ಹೇಗೆ ಸ್ಪೂರ್ತಿ ನೀಡಿತು ಅನ್ನೋದನ್ನು ಕೂಡ ರಾಜಮೌಳಿ ಹಂಚಿಕೊಂಡಿದ್ದಾರೆ.'ನಾನು ನನ್ನ ಸೋದರ ಸಂಬಂಧಿ (ತೆಲುಗು ಬರಹಗಾರ ಗುನ್ನಂ ಗಂಗರಾಜು) ಜೊತೆ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದೆ. ಈ ವೇಳೆ ಅವರು ನನಗೆ ನನಗೆ ಐನ್ ರಾಂಡ್ ಅವರ ದಿ ಫೌಂಟೇನ್‌ಹೆಡ್ ಮತ್ತು ಅಟ್ಲಾಸ್ ಶ್ರಗ್ಡ್ ಕೃತಿಗಳನ್ನು ಪರಿಚಯಿಸಿದರು. ನಾನು ಆ ಕಾದಂಬರಿಗಳನ್ನು ಓದಿದ್ದೇನೆ ಮತ್ತು ತುಂಬಾ ಚೆನ್ನಾಗಿತ್ತು. ಅವುಗಳಿಂದ ಸ್ಫೂರ್ತಿ ಪಡೆದೆ. ನನಗೆ ಅವಳ ಹೆಚ್ಚಿನ ಫಿಲಾಸಫಿಗಳು ಅರ್ಥವಾಗಲಿಲ್ಲ, ಆದರೆ ಅದರ ಮೂಲಭೂತ ಅಂಶಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆ ಸಮಯದಲ್ಲಿ ನಾನು ನಿಧಾನವಾಗಿ ಧರ್ಮದಿಂದ ದೂರ ಸರಿಯಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ.
ನನಗೆ ಇತಿಹಾಸ ಗೊತ್ತಿಲ್ಲ, ಸ್ಕ್ರಿಪ್ಟ್ ಓದಿ ಅಳುನೇ ಬಂತು; ತಂದೆಯ RSS ಸ್ಕ್ರಿಪ್ಟ್‌ಗೆ ರಾಜಮೌಳಿ ರಿಯಾಕ್ಷನ್
"ಆ ಸಮಯದಲ್ಲಿಯೂ ಸಹ, ಮಹಾಭಾರತ ಅಥವಾ ರಾಮಾಯಣದಂತಹ ಕಥೆಗಳ ಮೇಲಿನ ನನ್ನ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ನಾನು ಆ ಪಠ್ಯಗಳ ಧಾರ್ಮಿಕ ಅಂಶಗಳಿಂದ ದೂರ ತಳ್ಳಲು ಪ್ರಾರಂಭಿಸಿದೆ, ಆದರೆ ನನ್ನೊಂದಿಗೆ ಉಳಿದುಕೊಂಡಿರುವುದು ಈ ಕೃತಿಗಳ ನಾಟಕ ಮತ್ತು ಕಥೆ ಹೇಳುವ ಸಂಕೀರ್ಣತೆ ಮತ್ತು ಶ್ರೇಷ್ಠತೆ' ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜಮೌಳಿ ಹೇಳಿದ್ದಾರೆ.
ರಜನಿಕಾಂತ್ 'ಮುತ್ತು' ಸಿನಿಮಾದ ದಾಖಲೆ ಬ್ರೇಕ್ ಮಾಡಿ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದ 'RRR'
ಇತಿಹಾಸ ಸೃಷ್ಟಿಸಿದ ನಾಟು ನಾಟು: ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ, ಎಸ್‌ಎಸ್ ರಾಜಮೌಳಿ ತಮ್ಮ 'ಆರ್‌ಆರ್‌ಆರ್' ಚಿತ್ರಕ್ಕಾಗಿ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗಳನ್ನು ಗೆದ್ದರು. ಟೇಲರ್ ಸ್ವಿಫ್ಟ್, ಲೇಡಿ ಗಾಗಾ ಮತ್ತು ರಿಹಾನ್ನಾರನ್ನು ಸೋಲಿಸಿದ ನಂತರ, 'ನಾಟು ನಾಟು' ಹಾಡು ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿತು. ಎಂ.ಎಂ.ಕೀರವಾಣಿ ಅವರು ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ, 'ನನ್ನನ್ನು ನಂಬಿ ನಾನು ಕೇಳಿದ ಎಲ್ಲ ಸ್ವಾತಂತ್ರ್ಯವನ್ನು ನೀಡಿ ನನ್ನ ಸಂಗೀತವನ್ನು ಮೆಚ್ಚಿದ ನನ್ನ ಸಹೋದರ ಮತ್ತು 'ಆರ್‌ಆರ್‌ಆರ್' ನಿರ್ದೇಶಕರಿಗೆ ನಾನು ಧನ್ಯವಾದಗಳು. ಧನ್ಯವಾದಗಳು ಎಸ್ ಎಸ್ ರಾಜಮೌಳಿ' ಎಂದು ಹೇಳಿದ್ದರು.