ಈಗಾಗಲೇ ಚಿತ್ರೀಕರಣ ಮುಗಿದಿದೆ. ಕನಕಪುರ ಸಮೀಪದ ರಾವ್‌ಗೋಡ್ಲು ಹಾಗೂ ಮಧುಗಿರಿ ಸಮೀಪದ ಚಿಕ್ಕ ಮಾಲೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಬಯಲಾಟದ ಕಲಾವಿದನೊಬ್ಬನ ಸುತ್ತಣ ಕತೆ. ಕೃತಿಯಲ್ಲಿರುವ ಅಂಶಗಳನ್ನೇ ಚಿತ್ರಕ್ಕೂ ತಂದಿದ್ದಾರೆ. ಪ್ರಮುಖವಾಗಿ ಈ ಚಿತ್ರ ಬಯಲಾಟದ ಕಲಾವಿದನ ಕತೆ ಹೇಳಿದರೂ ಪ್ರಸ್ತುತ ಕಲಾವಿದರ ಬದುಕಿನ ಅನಾವರಣವೇ ಚಿತ್ರದ ಕಥಾ ಹಂದರ ಎನ್ನುತ್ತಾರೆ ನಿರ್ದೇಶಕರೂ ಆದ ಸಾಹಿತಿ ಬರಗೂರು ರಾಮಚಂದ್ರಪ್ಪ.

ಸುಂದರ್‌ರಾಜ್, ಪ್ರಮೀಳಾ ಜೋಷಾಯ್, ಸ್ಪರ್ಷ ರೇಖಾ, ಹನುಮಂತೇ ಗೌಡ, ರಾಧಾ ರಾಮಚಂದ್ರ, ವತ್ಸಲಾ ಚಿತ್ರದಲ್ಲಿ ನಟಿಸಿದ್ದಾರೆ. ನವ ಪ್ರತಿಭೆ ರಂಜಿತ್, ನಟಿ ರಕ್ಷಿತ್ ಈ ಚಿತ್ರದ ಮೂಲಕ ಬೆಳ್ಳಿತೆರೆಗ ಪರಿಚಯವಾಗುತ್ತಿದ್ದಾರೆ. ಸುರೇಶ್ ಅರಸ್ ಸಂಕಲನ, ನಾಗರಾಜ್ ಅದವಾನಿ ಛಾಯಾಗ್ರಹಣ ಮಾಡಿದ್ದಾರೆ. ಕೃಷ್ಣವೇಣಿ ಹಾಗೂ ಧನಲಕ್ಷ್ಮಿ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಗಾಯಕಿ ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದಾರೆ.ವಿಶೇಷ ಅಂದ್ರೆ ಸಂಗೀತ ನಿರ್ದೇಶಕರಾಗಿ ಇದು ಅವರಿಗೆ ಮೂರನೇ ಚಿತ್ರ.

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಬೆಕ್ಕು’ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕಿಳಿದ ಅವರಿಗೆ ಇದೇ ಚಿತ್ರದಲ್ಲಿನ ಹಾಡಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿತ್ತು. ಅಲ್ಲಿಂದೀಗ ಮತ್ತೆ ಬರಗೂರು ಅವರ ‘ಬಯಲಾಟದ ಭೀಮಣ್ಣ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಹೊಸ ಗಾಯಕರನ್ನೇ ಆಯ್ಕೆ ಮಾಡಿಕೊಂಡಿದ್ದು ವಿಶೇಷ.

ಸಾಮಾನ್ಯವಾಗಿ ಬರಗೂರು ಸಿನಿಮಾಗಳೂ ಸುದ್ದಿ ಮಾಡುವುದು ಪ್ರಶಸ್ತಿಗಳ ಮೂಲಕ. ಯಾವುದೋ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಪಾತ್ರವಾದಾಗ ಅವರೊಂದು ಸಿನಿಮಾ ಮಾಡಿದ್ದಾರೆನ್ನುವುದು ಮಾಮೂಲು. ಆದರೆ ಈ ಸಿನಿಮಾವನ್ನು ಕಮರ್ಷಿಯಲ್ ಸಿನಿಮಾದ ಮಾದರಿಯಲ್ಲೇ ನಿರ್ಮಾಣ ಮಾಡಿ, ಅಷ್ಟೇ ಅದೂಟಛಿರಿಯಾಗಿ ತೆರೆಗೆ ತರುವ ಯೋಚನೆಯೂ ಅವರಿಗಿದೆ. ಅದಕ್ಕೆ ನಿರ್ಮಾಪಕರ ಬೆಂಬಲವೂ ಸಿಕ್ಕಿದೆ ಎನ್ನುವುದು ಬರಗೂರು ರಾಮಚಂದ್ರಪ್ಪ ಅವರ ವಿಶ್ವಾಸದ ಮಾತು.

ಗಾಯಕಿಯಾದ ಐಪಿಎಸ್ ಡಿ. ರೂಪಾ ಮೌದ್ಗಿಲ್
ಸೋಷಲ್ ಮೀಡಿಯಾ ಮೂಲಕ ಗಾಯಕನಾಗಿ ಬೆಳಕಿಗೆ ಬಂದ ಗ್ರಾಮೀಣ ಪ್ರತಿಭೆ ಕುರಿಗಾಹಿ ಹನುಮಂತಪ್ಪ ಬಟ್ಟೂರು, ಸಂಚಾರಿ ವಿಜಯ್, ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ನಟ ಸುಂದರರಾಜ್ ಈ ಚಿತ್ರದಲ್ಲಿನ ಹಾಡುಗಳ ಗಾಯಕರು. ಈಗಾಗಲೇ ಜನಪ್ರಿಯತೆ ಪಡೆದ ಗಾಯಕರ ಬದಲಿಗೆ ಹೊಸಬರಿಂದಲೇ ಇಲ್ಲಿ ಹಾಡಿಸಲು ಪ್ರಯತ್ನಿಸಿದ್ದು ವಿಶೇಷ. ‘ಇದು ಉದ್ದೇಶ ಪೂರ್ವಕ ಅಂತಲ್ಲ, ಇಲ್ಲಿರುವ ಹಾಡುಗಳೆಲ್ಲ ಹೊಸ ಬಗೆಯ ಧಾಟಿಗೆ ಸೇರಿದವು. ಹಾಗಾಗಿ ಹೊಸಬರಿಂದಲೇ ಹಾಡಿಸೋಣ ಎನ್ನುವ ಸಂಗೀತ ನಿರ್ದೇಶಕಿ ಶಮಿತಾ ಅವರ ಒತ್ತಾಸೆಗೆ ಓಕೆ ಅಂದಿದ್ದರ ಫಲವಾಗಿ ಇಲ್ಲಿನ ಹಾಡುಗಳಿಗೆ ನಾಲ್ವರು ಹೊಸ ಪ್ರತಿಭೆಗಳು ಧ್ವನಿ ಆಗಿದ್ದಾರೆ. ಐಪಿಎಸ್ ಅಧಿಕಾರಿ ಡಿ. ರೂಪಾ ಹಾಡಿದ್ದು ಇಲ್ಲಿ ವಿಶೇಷ. ಕಾರ್ಯಕ್ರಮವೊಂದರಲ್ಲಿ ಅವರು ಹಾಡಿದ್ದನ್ನು ನಾನು ಕೇಳಿದ್ದೆ. ಹಾಗಾಗಿ ಅವರಿಂದಲೇ ಒಂದು ಹಾಡು ಹಾಡಿಸೋಣ ಎನ್ನುವ ನಮ್ಮ ಪ್ರಯತ್ನಕ್ಕೆ ಅವರು ಒಪ್ಪಿಕೊಂಡಿದ್ದು ಚಿತ್ರತಂಡಕ್ಕೆ ಖುಷಿ ಕೊಟ್ಟಿತು’ ಎನ್ನುತ್ತಾರೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ.