ಬೆಳಕು ಕಂಡ ತಕ್ಷಣ ಎಲ್ಲವನ್ನೂ ಮರೆಯುತ್ತೇನೆ. ಹೀಗಾಗಿ ಆ ಬೆಳಕು ತರುವ ದೀಪಾವಳಿ ಬಂದರೆ ಎಲ್ಲಿಲ್ಲದ ಸಂಭ್ರಮ ನನ್ನಲ್ಲಿ ಮನೆ ಮಾಡುತ್ತದೆ. ಪ್ರತಿ ವರ್ಷ ದೀಪಾವಳಿ ಬಂದರೆ ನಾನೇ ಬಣ್ಣ ಬಣ್ಣದ ದೀಪಗಳನ್ನು ತಯಾರಿಸುತ್ತೇನೆ. ಎಲ್ಲಾ ದೀಪಗಳಿಗೆ ನಾನೇ ಬಣ್ಣ ಹಚ್ಚುತ್ತೇನೆ. ಆ ದೀಪಗಳಿಂದ ನಾನೇ ಮನೆ ಸಿಂಗಾರ ಮಾಡುತ್ತೇನೆ. ಜತೆಗೆ ಮನೆ ಮುಂದೆ ಬೃಹತ್ ರಂಗೋಲಿ ಬಿಡಿಸುತ್ತೇನೆ. ಮೂರು ರೀತಿಯ ಸಿಹಿ ತಿನಿಸುಗಳುಗಳನ್ನು ನಾನೇ ಮಾಡುತ್ತೇನೆ. ಜತೆಗೆ ಮಲ್ಲೇಶ್ವರಂನಲ್ಲಿರುವ ಚಿತ್ರಪುರಿ ಮಠಕ್ಕೆ ಭೇಟಿ ಕೊಟ್ಟು ಕೆಲ ಕಾಲ ಅಲ್ಲೇ ಇದ್ದು ಧ್ಯಾನ ಮಾಡಿ ಬರುತ್ತೇನೆ. ದೀಪಾವಳಿ ದಿನ ಬೇರೆ ಯಾವುದೇ ಕೆಲಸಗಳನ್ನು ಇಟ್ಟುಕೊಳ್ಳದೆ ಮನೆಯಲ್ಲೇ ಇರುತ್ತೇನೆ. ಚಿತ್ರರಂಗಕ್ಕೆ ಬಂದ ಮೇಲೂ ಮನೆಯಲ್ಲೇ ದೀಪಾವಳಿ ಆಚರಿಸಿದ್ದೇನೆ. ಇದು ನನ್ನ ಪ್ರತಿ ವರ್ಷದ ದೀಪಾವಳಿಯ ಹಬ್ಬದ ದಿನದ ಸಂಭ್ರಮದ ದಿನಚರಿ.

ಆದರೆ, ಈ ಬಾರಿಗೆ ಹಬ್ಬದಲ್ಲಿ ಹಿಂದಿನಂತೆ ಪಾಲ್ಗೊಳ್ಳುವುದಕ್ಕೆ ಆಗಲ್ಲ. ಯಾಕೆಂದರೆ ಈಗ ನನಗೆ ಎಂಟು ತಿಂಗಳು. ಹೀಗಾಗಿ ಒತ್ತಡದ ಕೆಲಸಗಳನ್ನು ಮಾಡಕ್ಕೆ ಆಗಲ್ಲ. ರಂಗೋಲಿ ಹಾಕುವುದು, ಸ್ವೀಟು ತಯಾರಿಸುವುದಕ್ಕೆ ಆಗಲ್ಲ. ಆದರೆ, ನನಗೆ ಖುಷಿ ಕೊಡುವ ಕೆಲಸ ದೀಪಗಳಿಗೆ ಬಣ್ಣ ಹಚ್ಚುವುದು. ಅದನ್ನು ಈ ಬಾರಿಯೂ ನಾನೇ ಮಾಡುತ್ತೇನೆ. ಜತೆಗೆ ನನಗೆ ತುಂಬಾ ಇಷ್ಟವಾದ ಸ್ಟೀಟು ಕೋಕೋನೆಟ್ ಬರ್ಫಿ ಮಾಡಿಕೊಳ್ಳುತ್ತೇನೆ. ಜತೆಗೆ ಯಶ್‌ಗಾಗಿಯೇ ನಾನು ಪೇಡಾ ತಯಾರಿಸಿ ಕೊಡುತ್ತೇನೆ. ಇದು ಪ್ರತಿ ದೀಪಾವಳಿಗೆ ನಾನು ಅವರಿಗೆ ಕೊಡುತ್ತಿದ್ದ ಸಿಹಿ ತಿನಿಸು. ಈ ಬಾರಿಯೂ ನಾನೇ ಮಾಡಿಕೊಡುತ್ತೇನೆ. ಇನ್ನು ಚಿತ್ರಾಪುರಿ ಮಠಕ್ಕೆ ಹೋಗಲು ಆಗಲ್ಲ. ಮನೆಯಲ್ಲೇ ಕೈ ಮುಗಿಯುತ್ತೇನೆ. ವೈಯಕ್ತಿಕವಾಗಿ ಈ ಬಾರಿ ನನಗೆ ತ್ರಿಬಲ್ ಧಮಾಕ. ಯಶ್ ಜತೆ ದೀಪಾವಳಿ ಸಂಭ್ರಮ. ಜತೆಗೆ ಹಬ್ಬದ ದಿನದಂತೆ ನಮ್ಮ ‘ಕೆಜಿಎಫ್’ ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿರುವುದು. ಇನ್ನು ಡಾಕ್ಟರ್ ಡೇಟ್ ಕೊಟ್ಟಿರುವಂತೆ ಡಿಸೆಂಬರ್ ಮೊದಲ ವಾರದಲ್ಲಿ ನಮ್ಮ ಮನೆಗೆ ಹೊಸ ಸದಸ್ಯನ ಆಗಮನ. ಇವೆಲ್ಲವೂ ದೀಪಾವಳಿ ನನಗೆ ಕೊಡುತ್ತಿರುವ ಉಡುಗೊರೆ ಎಂದುಕೊಳ್ಳುತ್ತಿರುವೆ. 

ರಾಧಿಕಾ ಪಂಡಿತ್ ನನ್ನ ಬದುಕಿನ ಬೆಳಕು. ಈ ಬೆಳಕಿನ ಜತೆ ಮತ್ತೊಂದು ಬೆಳಕಿನ ಹಬ್ಬ ದೀಪಾವಳಿ ಬರುತ್ತಿದೆ. ಕೆಜಿಎಫ್ ಸಿನಿಮಾದ ಕೆಲಸಗಳ ನಡುವೆಯೂ ಆಕೆ ಜತೆ ದೀಪಾವಳಿ ಆಚರಿಸುತ್ತೇನೆ. ನನಗಾಗಿ ರಾಧಿಕಾ ಮಾಡಿಕೊಡುವ ಸಿಹಿ ತಿನಿಸುಗೆ ಎದುರು ನೋಡುತ್ತಿರುವೆ. ಇನ್ನೂ ಅಭಿಮಾನಿಗಳಿಗೆ ಹಾಗು ಕನ್ನಡ ಸಿನಿಮಾ ಪ್ರೇಮಿಗಳಿಗೆ ದೀಪಾವಳಿ ಹಬ್ಬದ ಜತೆಗೆ ಕೆಜಿಎಫ್ ಚಿತ್ರದ ಟ್ರೇಲರ್ ಕೊಡುತ್ತಿದ್ದೇವೆ - ಯಶ್