ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ಸಿಂಗ್, ವಿಶ್ವದ ಪ್ರಮುಖ ಚಿತ್ರಗಳು ಮತ್ತು ವೆಬ್‌ಸೀರಿಸ್‌ಗಳಲ್ಲಿ ಕೆಲಸ ಮಾಡಿದ ಖ್ಯಾತ ಆಕ್ಷನ್ ನಿರ್ದೇಶಕರನ್ನು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕರೆತಂದಿದ್ದಾರೆ.
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರೊಂದಿಗೆ ಅರ್ಜುನ್ ರಾಂಪಾಲ್, ವಿವೇಕ್ ಒಬೆರಾಯ್ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಯುದ್ಧ ಹಾಗೂ ಸಾಹಸ ದೃಶ್ಯಗಳಿಗೆ 'ಗೇಮ್ ಆಫ್ ಥ್ರೋನ್ಸ್', 'ವೈಕಿಂಗ್ಸ್', 'ದಿ ವಿಚರ್' ಮತ್ತು 'ಗ್ರಾವಿಟಿ' ಸೇರಿದಂತೆ ವಿಶ್ವಪ್ರಸಿದ್ಧ ನಿರ್ಮಾಣಗಳಲ್ಲಿ ಕೆಲಸ ಮಾಡಿದ ಮಾರ್ಕ್ ಹೆನ್ಸನ್ ಆಕ್ಷನ್ ತಂಡದ ನೇತೃತ್ವ ವಹಿಸಲಿದ್ದಾರೆ.
ಅವರೊಂದಿಗೆ 'ದಿ ಫೇಟ್ ಆಫ್ ದ ಫ್ಯೂರಿಯಸ್', 'ಬ್ಲಡ್‌ಶಾಟ್' ಮತ್ತು 'ಲುಸಿಫರ್' ಚಿತ್ರಗಳಿಗೆ ಸಾಹಸ ಸಂಯೋಜನೆ ನೀಡಿರುವ ವ್ಲಾಡ್ ರಿಂಬರ್ಗ್ ಹಾಗೂ 'ಟ್ರಾಯ್: ಫಾಲ್ ಆಫ್ ಎ ಸಿಟಿ'ನಲ್ಲಿ ಕೆಲಸ ಮಾಡಿದ ಕ್ರೇಗ್ ಮ್ಯಾಕ್‌ರೇ ಕೂಡ ಈ ತಂಡದಲ್ಲಿ ಸೇರಿದ್ದಾರೆ. ಸುಮಾರು ₹500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವನ್ನು ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ.
ಐತಿಹಾಸಿಕ ವೈಭವ, ಅದ್ದೂರಿ ಯುದ್ಧ ದೃಶ್ಯಗಳು ಮತ್ತು ಅತ್ಯಾಧುನಿಕ ತಾಂತ್ರಿಕತೆಯೊಂದಿಗೆ ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. 17ನೇ ಶತಮಾನದಲ್ಲಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲೇ ಅತ್ಯಂತ ಗೌರವಾನ್ವಿತ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ.
ಹಲವು ಭಾಷೆಗಳಲ್ಲಿ ಬಿಡುಗಡೆ
ಅವರ ಜೀವನಾಧಾರಿತ ಕಥೆಗಳು ಈಗಾಗಲೇ 60ಕ್ಕೂ ಹೆಚ್ಚು ಸಿನಿಮಾ ಮತ್ತು ದೂರದರ್ಶನ ನಿರ್ಮಾಣಗಳಿಗೆ ಸ್ಫೂರ್ತಿಯಾಗಿವೆ. 1923ರಲ್ಲಿ ಬಿಡುಗಡೆಯಾದ ಮೌನಚಿತ್ರ 'ಸಿಂಹಗಢ'ದಿಂದ ಆರಂಭವಾದ ಈ ಪರಂಪರೆಗೆ, ಹೊಸ ಆಯಾಮವನ್ನು ನೀಡುವ ಪ್ರಯತ್ನವಾಗಿ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಮೂಡಿಬರುತ್ತಿದೆ. ಇನ್ನು ಈ ಸಿನಿಮಾ ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 2027ರ ಜನವರಿ 21ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.


