ರಿಯಾಲಿಟಿ ಶೋ ಎಂಬುದು ಇದ್ದದ್ದು ಇದ್ದಂತೆಯೇ ತೋರಿಸುತ್ತದೆಂದು ಹೇಳಲಾಗುತ್ತದಾದರೂ ಅದೇ ನಿಜವಾಗಿದ್ದಲ್ಲಿ ನೀವ್ಯಾರೂ ಆ ಶೋ ನೋಡುತ್ತಿರಲಿಲ್ಲ. ನೀವು ನೋಡುವುದೇನಿದ್ದರೂ ಟಿವಿ ಟೀಂನ ಮ್ಯಾಜಿಕ್. ಅಲ್ಲೊಂದು ತಂಡವೇ ಸಂಬಂಧ ಹಾಳು ಮಾಡಿ ಮಜಾ ನೋಡಲು, ಫೂಟೇಜನ್ನು ತಿರುಚಲು, ಕತೆಯೇ ಇಲ್ಲದೆಡೆ ಒಂದು ಕತೆ ಸೃಷ್ಟಿಸಲು ನಿರಂತರ ಹಾರ್ಡ್ ವರ್ಕ್ ಮಾಡುತ್ತಿರುತ್ತದೆ. ಆದರೆ, ಡ್ರಾಮಾ ಹಾಗೂ ಕಣ್ಣು ಕುಕ್ಕುವ ಸೆಟ್ ಬೆಳಕಿನಲ್ಲಿ ನಿಮಗದ್ಯಾವುದೂ ಕಾಣುವುದಿಲ್ಲ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಯಾವುದೇ ಭಾಷೆಗಳ ಯಾವುದೇ ರಿಯಾಲಿಟಿ ಶೋ ಕೂಡಾ ಪೂರ್ತಿ ರಿಯಲ್ ಅಲ್ಲ. ಇಂಥ ಇನ್ನೂ ಕೆಲವು ಸೀಕ್ರೆಟ್‌ಗಳನ್ನು ಹೇಳ್ತೀವಿ ಕೇಳಿ...

ನಿಜವಾಗಿ ಅದು ನಿಜವಲ್ಲ
ಸ್ಕ್ರಿಪ್ಟ್ ಇರುವುದಿಲ್ಲ ನಿಜ. ಆದರೆ, ಬಹಳ ಜನಪ್ರಿಯವಾದ ಬಹುತೇಕ ರಿಯಾಲಿಟಿ ಶೋಗಳ ಹಿಂದೆ ಬರಹಗಾರರೂ ಇದ್ದೇ ಇರುತ್ತಾರೆ. ಅವರು ನಾಟಕೀಯತೆ ಸೃಷ್ಟಿಯಾಗುವಂಥ ಪ್ಲಾಟ್ ಲೈನ್ ಬರೆದು, ಫೂಟೇಜನ್ನು ತಿರುಚಿ ವಿವಾದ ಹುಟ್ಟಿಸಿ, ಕತೆಗೊಂದು ಆಕಾರ ಕೊಡುವುದರಲ್ಲಿ ನಿಸ್ಸೀಮರು.

ಅಲ್ಲಿ ಬಹಳಷ್ಟು ರಿಟೇಕ್‌ಗಳಿರುತ್ತವೆ!
ಕ್ಯಾಮೆರಾದಲ್ಲಿ ಎಲ್ಲ ಆ್ಯಂಗಲ್‌ಗಳಿಂದ ತೆಗೆಯಲು ಸಹಾಯವಾಗುವ ಹಾಗೆ, ಹಾಗೂ ಟೇಕ್ ಸರಿಯಾಗಿ ಬರಲಿಲ್ಲವೆಂದರೆ ಮತ್ತೆ ಮತ್ತೆ ಮಾಡಿದ್ದನ್ನೇ ಮಾಡಿಸುತ್ತಾರೆ. 

ಬಿಗ್‌ಬಾಸ್‌ಗೆ ಲೇಟೆಸ್ಟ್ ಎಂಟ್ರಿ

ಟಿವಿ ಮ್ಯಾಜಿಕ್
ನೀವಿದನ್ನು ಸೃಜನಶೀಲತೆ ಎಂದರೂ ಸರಿ, ವಂಚನೆ ಎಂದರೂ ಸರಿ, ಬೇರೆ ಬೇರೆ ಕ್ಲಿಪ್‌ಗಳನ್ನು ಒಟ್ಟಿಗೆ ಜೋಡಿಸಿ ಅದು ಒಂದೇ ಸಂಭಾಷಣೆ ಎಂಬಂತೆ ಕೆಲವೊಮ್ಮೆ ಜೋಡಿಸಲಾಗುತ್ತದೆ. ಕೆಲವೊಮ್ಮೆ ಮಾತಿನ ಅರ್ಥ ಬೇರೆಯಾಗಿತ್ತು ಎಂದು ಗೊತ್ತಿದ್ದೂ ವಿವಾದ ಹುಟ್ಟು ಹಾಕಲೆಂದೇ ಬೇರೆ ಅರ್ಥ ಹೊಮ್ಮುವಂತೆ ಅದನ್ನು ಜೋಡಿಸಲಾಗುತ್ತದೆ. ಮತ್ತೆ ಕೆಲವೊಮ್ಮೆ ಹೊಸ ವಾಕ್ಯವನ್ನೇ ಹುಟ್ಟುಹಾಕಲಾಗುತ್ತದೆ. ಇದನ್ನು ಫ್ರ್ಯಾಂಕನ್‌ಬೈಟಿಂಗ್ ಎನ್ನಲಾಗುತ್ತದೆ. 

ತೀರ್ಪುಗಾರರಿಗಿಂತ ನಿರ್ಮಾಪಕರಿಗೇ ಹೆಚ್ಚು ಪವರ್
ಬಹುತೇಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಯಾರು ಎಲಿಮಿನೇಟ್ ಆಗಬೇಕೆನ್ನುವುದು ಅಂತಿಮವಾಗಿ ತೀರ್ಮಾನಿಸುವ ಅಧಿಕಾರ ನಿರ್ಮಾಪಕರದ್ದೇ ಹೊರತು ತೀರ್ಪುಗಾರರದ್ದಲ್ಲ ಎಂಬುದು ಕಾಂಟ್ರ್ಯಾಕ್ಟ್‌ನಲ್ಲೇ ಹೇಳಲಾಗಿರುತ್ತದೆ. ಕೆಲವೊಮ್ಮೆ ನೀವು ಹೋಗೇ ಹೋಗುತ್ತಾನೆಂದುಕೊಂಡ ಆ ಸ್ಪರ್ಧಿ ಉಳಿದದ್ದು ಹೇಗೆಂಬ ಗೊಂದಲ ನಿಮ್ಮಲ್ಲಿ ಉಂಟಾಗಿದ್ದರೆ ಅದಕ್ಕೆ ಉತ್ತರ- ನಿರ್ಮಾಪಕರು ಆ ವ್ಯಕ್ತಿ ಜನರನ್ನು ಸೆಳೆಯುತ್ತಿದ್ದಾನೆಂದು ಉಳಿಸಿಕೊಂಡಿರುತ್ತಾರೆ. 

ಸಮಯದ ವಿಷಯದಲ್ಲಿ ಸುಳ್ಳು
ರಿಯಾಲಿಟಿ ಶೋಗಳು ಕೆಲಸ ಮುಗಿಸಲು ಅವು ತೆಗೆದುಕೊಂಡ ಸಮಯದ ಕುರಿತು ಆಗಾಗ ಸುಳ್ಳು ಹೇಳುತ್ತವೆ. 

ಅನುಬಂಧದಲ್ಲಿ ಯಾರಿಗೆ, ಯಾವ ಪ್ರಶಸ್ತಿ?

ಜನರ ವೀಕ್ನೆಸ್ ಅವುಗಳಿಗಿಷ್ಟ
ನೀವು ಎಂದಾದರೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕೆಂದರೆ ಮೊದಲು ನಿಮ್ಮ ವೀಕ್ನೆಸ್‌ಗಳನ್ನು, ಇಷ್ಟವಿಲ್ಲದ್ದನ್ನು ಹಾಗೂ ನಿಮ್ಮ ಭಯಗಳನ್ನು ಹೈಲೈಟ್ ಮಾಡಿ. ತಮ್ಮ ಬೆರಳ ತುದಿಯಲ್ಲೇ ಡ್ರಾಮಾ ಸೃಷ್ಟಿಸುವ ಸಾಮರ್ಥ್ಯ ಇರುವವರೆಂದರೆ ನಿರ್ಮಾಪಕರಿಗಿಷ್ಟ.

ಲವ್ ಸ್ಕೀಮ್
ಸೆಲೆಬ್ರಿಟಿಗಳ ರಿಯಾಲಿಟಿ ಶೋ ಇದ್ದಾಗ, ಪ್ಲೇಯರ್ಸ್ ಅಲ್ಲಿ ಬರುವ ಮುಂಚೆಯೇ ಫೋನ್‌ನಲ್ಲಿ ಮಾತಾಡಿಕೊಂಡು ಡೀಲ್ ಮಾಡಿಕೊಂಡಿರುತ್ತಾರೆ. ನಾವಿಬ್ಬರೂ ಲವ್‌ನಲ್ಲಿ ಬೀಳುವಂತೆ ಮಾಡೋಣವೆಂದೆಲ್ಲ ಸ್ಕೆಚ್ ಹಾಕಿರುತ್ತಾರೆ. ಆದರೆ ಕೆಲವರು ಆಟ ಶುರುವಾಗುವ ಮೊದಲೇ ಬ್ರೇಕಪ್ ಕೂಡಾ ಆಗಿರುತ್ತಾರೆ!

ಸೀರಿಯಸ್ ಕಾಮಡಿ ಶೋ

ಯಾವುದಕ್ಕೂ ಮಿತಿ ಇಲ್ಲ
ದೊಡ್ಡ ದೊಡ್ಡ ಶೋಗಳು ತಮ್ಮ ಶೋನಲ್ಲಿ ಭಾಗವಹಿಸುವವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಚೆಕ್ ಮಾಡುತ್ತವೆ. ಅವರ ಗೆಳೆಯರು, ಕುಟುಂಬದವರಿಗೆ ಕಾಲ್ ಮಾಡಿ ವಿಚಾರಿಸುತ್ತವೆ. ಎಸ್‌ಟಿಡಿ ಹಾಗೂ ಡ್ರಗ್ ಟೆಸ್ಟ್, ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳನ್ನು ನಡೆಸುತ್ತವೆ. 

ಕಾಕತಾಳೀಯ ಎಂಬುದು ರಿಯಾಲಿಟಿ ಶೋ ವಿಷಯದಲ್ಲಿ ಸುಳ್ಳು
ಆನ್ ಸ್ಕ್ರೀನ್‌ ಯಾವುದೋ ಆ್ಯಕ್ಸಿಡೆಂಟ್ ಆದರೆ, ಯಾರಾದರೂ ಅನಿರೀಕ್ಷಿತವಾಗಿ ಶೋಗೆ ಬಂದರೆ ಅಥವಾ ಕೈ ಕೊಟ್ಟರೆ, ಆ ಎಲ್ಲ ಸನ್ನಿವೇಶಗಳು ನಿರ್ಮಾಪಕರ ಅಣತಿಯಂತೆಯೇ ನಡೆಯುತ್ತಿರುತ್ತವೆ. ಶೋ ಸದಸ್ಯರು ತಮ್ಮ ವ್ಯಕ್ತಿತ್ವವನ್ನೇ ಬದಲಿಸಿಕೊಳ್ಳುತ್ತಾರೆ. ಜೆಂಟಲ್, ಸ್ವೀಟ್ ಯುವಕನೊಬ್ಬ ವಿಲನ್‌ನಂತೆ ಕಾಣಬೇಕೆಂದು ನಿರ್ಮಾಪಕರು ಬಯಸಿದರೆ ಟಿವಿಯ  ಹಿತಕ್ಕಾಗಿ ಹಾಗೂ ಶೋನಿಂದ ಹೊರಬೀಳದಿರುವ ಸಲುವಾಗಿ ಸದಸ್ಯರು ವಿಲನ್‌ನಂತೆಯೇ ವರ್ತಿಸುತ್ತಾರೆ. 

ಲೊಕೇಶನ್=ಬಜೆಟ್
ಯಾವುದೇ ಶೋನ ಬಜೆಟ್ ಎಷ್ಟಿರಬಹುದೆಂದು ಅಂದಾಜಿಸಬೇಕೆಂದರೆ ಅದನ್ನು ಎಲ್ಲಿ ಶೂಟ್ ಮಾಡಲಾಗಿದೆ ಎಂಬುದನ್ನು ಗಮನಿಸಿದರೆ ಸಾಕು. 

ನೀವು ನೋಡುವುದು ಕೇವಲ ಅಂಗುಲದಷ್ಟು
ರಿಯಾಲಿಟಿ ಭಾಗಗಳನ್ನೆಲ್ಲ ನೋಡಿದೆವು ಎಂದು ಬಗೆಯುವ ನೀವು ಎಲ್ಲೋ ಕೆಲ ನಿಮಿಷಗಳ ಆ್ಯಕ್ಷನ್ ಅಷ್ಟೇ ನೋಡಿರುತ್ತೀರಿ ಅಷ್ಟೇ. ಯಾವುದು ಡ್ರಾಮಾವೋ, ವಿವಾದವಾಗಬಲ್ಲದೋ, ಕುತೂಹಲ ಕೆರಳಿಸಬಹುದೋ ಅಷ್ಟೇ ತೋರಿಸಲಾಗುತ್ತದೆ.

ಆನ್ ಸ್ಕ್ರೀನ್ ಆಡಿಶನ್ಸ್ ಮೊದಲ ಬಾರಿಯದಲ್ಲ
ಅಮೆರಿಕನ್ ಐಡಲ್ ಸೇರಿದಂತೆ ಇದೇ ಮಾದರಿಯ ಯಾವ ರಿಯಾಲಿಟಿ ಶೋಗಳಲ್ಲಿ ತೋರಿಸುವ ಆಡಿಶನ್ಸ್ ಕೂಡಾ ಅದೇ ಮೊದಲ ಬಾರಿಯದಾಗಿರುವುದಿಲ್ಲ. ಅದಕ್ಕೂ ಮುನ್ನ ನಿರ್ಮಾಕಪರೊಂದಿಗೆ ಸುಮಾರು ಬಾರಿ ಆಡಿಶನ್ಸ್ ನಡೆಸಲಾಗಿರುತ್ತದೆ. ಅಂದರೆ ಹಾಗೆ ಕೆಟ್ಟದಾಗಿ ಹಾಡುವವರನ್ನು, ಡ್ಯಾನ್ಸ್ ಮಾಡುವವರನ್ನು ಬೇಕಂತಲೇ ಸೆಲೆಕ್ಟ್ ಮಾಡಲಾಗಿರುತ್ತದೆ ಎಂದಾಯಿತು. 

ಸರ್ಪ್ರೈಸ್ ಇನ್‌ಗ್ರೀಡಿಯೆಂಟ್ಸ್ ಎಂಬುದು ಸುಳ್ಳು
ಅಡುಗೆಗೆ ಸಂಬಂಧಿಸಿದ ದೊಡ್ಡ ದೊಡ್ಡ ಸ್ಪರ್ಧಾ ಶೋಗಳಲ್ಲಿ ಸ್ಥಳದಲ್ಲೇ ಸರ್ಪ್ರೈಸ್ ಇನ್‌ಗ್ರೀಡಿಯಂಟ್ಸ್ ನೀಡಿ ಹೊಸ ರುಚಿ ತಯಾರಿಸಲು ಹೇಳುವುದನ್ನು ನೀವು ನೋಡಿರಬಹುದು. ಆದರೆ ಅವರಿಗೆ ಬಹಳ ಮುಂಚೆಯೇ ಈ ಥೀಮ್ ಕುರಿತು ಹೇಳಲಾಗಿರುತ್ತದೆ.