ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯಪುರದಲ್ಲಿ ಗುಟ್ಟಾಗಿ ಸಪ್ತಪದಿ ತುಳಿದಿದ್ದಾರೆ. ಇದರ ಬೆನ್ನಲ್ಲಿಯೇ ವಿರೋಶ್ ದಂಪತಿಯ ಮದುವೆ ತಂಡದಿಂದ ಉಪಯಪುರ ನಗರದಾದ್ಯಂತ ಬೀದಿ ಬೀದಿಗಳಲ್ಲಿ ಸಿಹಿ ಹಂಚಿದ್ದಾರೆ. ಇನ್ನು ಮಾರ್ಚ್ 4 ರಂದು ಅದ್ದೂರಿ ಆರತಕ್ಷತೆ ನಡೆಯಲಿದೆ.

ಫೆಬ್ರವರಿ 26, ಗುರುವಾರ... ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪಾಲಿಗೆ ತುಂಬಾನೇ ಸ್ಪೆಷಲ್ ದಿನ. ಈ ಜೋಡಿ ಬೆಳಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮದುವೆಯ ನಂತರ ಇಬ್ಬರ ಕುಟುಂಬದವರೂ ಸಖತ್ ಖುಷಿಯಾಗಿದ್ದರು. ಈ ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಯಾವುದೇ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಿರಲಿಲ್ಲ. ವರದಿಗಳ ಪ್ರಕಾರ, ಮದುವೆಯ ಖುಷಿಯಲ್ಲಿ ಎರಡೂ ಕುಟುಂಬದವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಶ್ಮಿಕಾ-ವಿಜಯ್ ಮದುವೆ ಖುಷಿಗೆ ಸಿಹಿ ಹಂಚಿಕೆ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಫೆಬ್ರವರಿ 26ರಂದು ಉದಯಪುರದ ಒಂದು ಐಷಾರಾಮಿ ರೆಸಾರ್ಟ್‌ನಲ್ಲಿ ಇವರಿಬ್ಬರ ಮದುವೆ ನಡೆದಿದೆ. ಬೆಳಗ್ಗೆ ವಿಜಯ್ ಕುಟುಂಬದ ಪ್ರಕಾರ ತೆಲುಗು ಸಂಪ್ರದಾಯದಂತೆ ಮದುವೆ ನಡೆದಿದೆ. ಸಂಜೆ ಸುಮಾರು 4 ಗಂಟೆಗೆ ವಧುವಿನ ಕಡೆಯ ಅಂದರೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಸಪ್ತಪದಿ ಶಾಸ್ತ್ರ ಪೂರ್ಣಗೊಳ್ಳಲಿದೆ. ಮದುವೆಯ ನಂತರ ವಿಜಯ್-ರಶ್ಮಿಕಾ ಅವರ ತಂಡದವರು ಪಾಪರಾಜಿಗಳಿಗೆ ಸಿಹಿ ಹಂಚಿದ್ದಾರೆ. ಅಷ್ಟೇ ಅಲ್ಲ, ವೆನ್ಯೂ ಹೊರಗೆ ಆಟವಾಡುತ್ತಿದ್ದ ಮಕ್ಕಳಿಗೂ ಸಿಹಿ ನೀಡಿದ್ದಾರೆ. ಮದುವೆ ತುಂಬಾ ಅದ್ದೂರಿಯಾಗಿ ನೆರವೇರಿದೆ, ಜೋಡಿ ಮತ್ತು ಅವರ ಕುಟುಂಬ ತುಂಬಾ ಸಂತೋಷವಾಗಿದ್ದಾರೆ ಎಂದು ತಂಡದವರು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಮದುವೆ ನಡೆಯುವ ಸ್ಥಳಕ್ಕೆ ಹೊರಗಿನವರಿಗೆ ಪ್ರವೇಶವಿರಲಿಲ್ಲ. ಅಷ್ಟೇ ಅಲ್ಲ, ಮದುವೆ ಫೋಟೋಗಳು ಲೀಕ್ ಆಗಬಾರದು ಅಂತ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ಹೇರಲಾಗಿದೆ.

View post on Instagram

ದಂಪತಿಯಾದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ

ಮಾಧ್ಯಮ ವರದಿಗಳ ಪ್ರಕಾರ, ವಿಜಯ್-ರಶ್ಮಿಕಾ ಮದುವೆ ಶಾಸ್ತ್ರಗಳು ಮುಗಿದಿದ್ದು, ಅವರಿಬ್ಬರು ಈಗ ಅಧಿಕೃತವಾಗಿ ಗಂಡ-ಹೆಂಡತಿ. ಈ ಮದುವೆಗೆ ಕೇವಲ ಆಪ್ತರು ಮಾತ್ರ ಸಾಕ್ಷಿಯಾಗಿದ್ದರು. ಮದುವೆಗೂ ಮುನ್ನ 3 ದಿನಗಳ ಕಾಲ ಶಾಸ್ತ್ರಗಳು ನಡೆದವು. ಪೂಲ್ ಪಾರ್ಟಿ ಮತ್ತು ಕ್ರಿಕೆಟ್ ಮ್ಯಾಚ್ ಕೂಡ ಆಡಲಾಗಿತ್ತು. ಫೆಬ್ರವರಿ 24ರಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ವಧು-ವರರು ಸಖತ್ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ರಶ್ಮಿಕಾ ತಮ್ಮ 'ಪುಷ್ಪ' ಸಿನಿಮಾದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಫೆಬ್ರವರಿ 25ರಂದು ಹಳದಿ ಮತ್ತು ಮೆಹಂದಿ ಶಾಸ್ತ್ರ ನಡೆದಿದೆ. ಹಳದಿ ಶಾಸ್ತ್ರದಲ್ಲಿ ಬಣ್ಣ ಹಾಗೂ ಹೂವುಗಳಿಂದ ಹೋಳಿ ಆಡಿದ್ದಾರೆ.

View post on Instagram

ವಿಜಯ್-ರಶ್ಮಿಕಾ ವೆಡ್ಡಿಂಗ್ ರಿಸೆಪ್ಷನ್

ಮದುವೆಯನ್ನು ಖಾಸಗಿಯಾಗಿ ಮಾಡಿಕೊಂಡಿದ್ದರೂ, ರಶ್ಮಿಕಾ ಮತ್ತು ವಿಜಯ್ ಗ್ರ್ಯಾಂಡ್ ರಿಸೆಪ್ಷನ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಮಾರ್ಚ್ 4 ರಂದು ನಡೆಯಲಿರುವ ಈ ಆರತಕ್ಷತೆಗೆ ಸಿನಿಮಾ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ. ಲೇಟೆಸ್ಟ್ ಮಾಹಿತಿ ಪ್ರಕಾರ, ಮದುವೆ ನಂತರ ಈ ಜೋಡಿ ಒಂದು ತಿಂಗಳು ಕೆಲಸದಿಂದ ಬ್ರೇಕ್ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನವನ್ನು ಎಂಜಾಯ್ ಮಾಡಲಿದ್ದಾರೆ