ಇದನ್ನು ಈ ವಾರ ನೀವು ಪರೀಕ್ಷೆ ಮಾಡಬಹುದು. ಡಬ್ಬಿಂಗ್‌ ಸರಾಗವಾಗಿ, ರೀಮೇಕ್‌ ನಿತ್ಯೋತ್ಸವವೇ ಆಗಿರುವ ಹೊತ್ತಲ್ಲಿ ಕನ್ನಡದ ಪ್ರೇಕ್ಷಕರಿಗೆ ಎರಡನ್ನೂ ಒಂದೇ ದಿನ ತಂದಿಟ್ಟಿರುವುದು ಕಾರ್ಮಿಕ ದಿನಾಚರಣೆಯ ಅಚ್ಚರಿ. ಡಬ್ಬಿಂಗ್‌ ಬಂದರೆ ಕನ್ನಡದ ಕಾರ್ಮಿಕರಿಗೆ ತೊಂದರೆ ಆಗುತ್ತದೆ ಅಂತ ಹೇಳುತ್ತಿದ್ದವರನ್ನು ಬೆಚ್ಚಿಬೀಳಿಸಲಿಕ್ಕಿಂದೇ ಕಾರ್ಮಿಕರ ದಿನದಂತೆ ಡಬ್ಬಿಂಗ್‌ ಸಿನಿಮಾ ತೆರೆಕಂಡಿದೆ.

ಕನ್ನಡ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತಿದ್ದವು. ಕೆಲವು ಸ್ಟಾರ್‌ಗಳ ಸಿನಿಮಾಗಳು ಗುರುವಾರವೇ ತೆರೆಗೆ ಬರುತ್ತಿದ್ದವು. ಅದು ಬಿಟ್ಟರೆ, ಬುಧವಾರ ಸಿನಿಮಾಗಳು ತೆರೆಕಂಡದ್ದು ಅಪರೂಪ. ಈ ವಾರ ಶುಕ್ರವಾರ ಸರದಿ ಮುರಿದು ಎರಡು ಸಿನಿಮಾಗಳು ಬುಧವಾರವೇ ತೆರೆಗಪ್ಪಳಿಸಿವೆ.

ಈ ಪೈಕಿ 99 ಚಿತ್ರದ ನಿರ್ಮಾಪಕ ರಾಮು. ಕೋಟಿ ರಾಮು ಎಂದೇ ಹೆಸರಾಗಿರುವ ರಾಮು ರೀಮೇಕ್‌ ಸಿನಿಮಾಗಳನ್ನು ಮಾಡಿದ್ದು ತೀರಾ ಕಡಿಮೆ. ಅವರ ನಿರ್ಮಾಣದ 38 ಸಿನಿಮಾಗಳ ಪೈಕಿ ರೀಮೇಕ್‌ ಎರಡೋ ಮೂರೋ ಅಷ್ಟೇ. ಈ ಬಾರಿ ರಾಮು ಮತ್ತೆ ರೀಮೇಕ್‌ ಕತೆಯನ್ನು ಎತ್ತಿಕೊಂಡಿದ್ದಾರೆ.

ಕಾಂಚನಾ ಚಿತ್ರದ ಮೂರನೇ ಭಾಗ ಇದೀಗ ಕನ್ನಡಕ್ಕೆ ಡಬ್‌ ಆಗಿದೆ. ಮೊದಲೆರಡು ಭಾಗಗಳು ಕನ್ನಡಕ್ಕೆ ರೀಮೇಕ್‌ ಆಗಿದ್ದವು. ಅವುಗಳಲ್ಲಿ ಉಪೇಂದ್ರ ನಟಿಸಿದ್ದರು. ಡಬ್ಬಿಂಗ್‌ ಬಂದರೆ ಹೀರೋಗಳಿಗೆ ತೊಂದರೆ ಆಗುತ್ತದೆ ಅನ್ನುವುದಕ್ಕೆ ಸಾಕ್ಷಿಯಾಗಿ ಉಪೇಂದ್ರ ಅವರಿಗಿರುವ ಅವಕಾಶವೊಂದು ತಪ್ಪಿದಂತಾಗಿದೆ.

ಗಣೇಶ್ 99 ಸಿನಿಮಾಗೆ ಕಿಚ್ಚ ಸುದೀಪ್ ವಿಶ್

ಈ ಮಧ್ಯೆ ಆವೆಂಜರ್ಸ್‌ ಎಂಡ್‌ಗೇಮ್‌ ಬಹುತೇಕ ಸ್ಕ್ರೀನ್‌ಗಳನ್ನು ನುಂಗಿಹಾಕಿದೆ. ಕಳೆದ ವಾರ ತೆರೆಕಂಡ ಪ್ರೀಮಿಯರ್‌ ಪದ್ಮಿನಿ, ಅದಕ್ಕೂ ಮುಂಚೆ ಬಂದ ಕವಲುದಾರಿಯ ಸಾಕಷ್ಟುಚಿತ್ರಮಂದಿರಗಳನ್ನು ಕಿತ್ತುಕೊಂಡಿದೆ. ಇಂಥ ಹೊತ್ತಲ್ಲಿ ಇವೆರಡು ಪರಚಿತ್ರಗಳೊಂದಿಗೆ ಕನ್ನಡದ್ದೇ ಆದ ಎರಡು ಸಿನಿಮಾಗಳೂ ಶುಕ್ರವಾರ ತೆರೆಕಾಣುತ್ತಿವೆ.