ಬೆಳಗಾವಿ, (ಸೆ.15):  ದಶಕಗಳಿಂದ ಎದ್ದಿದ್ದ ಬೆಳಗಾವಿ ಜಿಲ್ಲೆ ವಿಭಜನೆ ಕೂಗಿಗೆ ಮತ್ತೆ ಜೀವ ಬಂದಿದೆ. ಬೆಳಗಾವಿ ಜಿಲ್ಲೆಯನ್ನ ವಿಭಾಜನೆ ಮಾಡುವಂತೆ ಸತೀಶ್ ಜಾರಕಿಹೊಳಿ ಅವರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಲಿದ್ದಾರೆ.

ಈ ಬಗ್ಗೆ ಇಂದು (ಶನಿವಾರ) ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್, ಬೆಳಗಾವಿ ಜಿಲ್ಲಾ ವಿಭಜನೆ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ಮಾಡಲಾಗುವುದು. ಬೆಳಗಾವಿ ಜಿಲ್ಲಾ ವಿಭಜನೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಿಲ್ಲ. ಆದ್ರೆ ಅಭಿವೃದ್ದಿ ವಿಚಾರದಲ್ಲಿ ಬೆಳಗಾವಿ ವಿಭಜನೆ ಆಗಲೇಬೇಕು ಎಂದು ಕಡ್ಡಿ ಮುರಿದಂತೆ ಹೇಳಿದರು.

ಇದನ್ನು ಓದಿ: ಜಾರಕಿಹೊಳಿ ಸಹೋದರರ ಅಸಮಾಧಾನ ತಣಿಸಲು ಸಿಎಂ ಮಾಸ್ಟರ್ ಪ್ಲಾನ್

 10 ವರ್ಷದ ಹಿಂದೆ ಬೆಳಗಾವಿ ವಿಭಜನೆಯ ಬೇಡಿಕೆಯನ್ನ ನಾವೇ ಮುಂದಿಟ್ಟಿರೋದು. ಹಾಗಾಗಿ ಬೆಳಗಾವಿ ಜಿಲ್ಲೆಯನ್ನ ವಿಭಜಿಸಿ ಗೋಕಾಕ್ ಮತ್ತು ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುವುದು. ವಿಭಜನೆ ಆದರೆ ನಾವು ಬೆಳಗಾವಿ ಮತ್ತು ಗೋಕಾಕ್ ಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಜಾರಕಿಹೊಳಿ ಬ್ರದರ್ಸ್ ರಾಜ್ಯದಲ್ಲಿ ನಾಯಕತ್ವ ಹೊಂದಿದ್ದಾರೆ ಎಂದು ತಿಳಿಸಿದರು. 

ಇನ್ನು ಸಚಿವ ಸ್ಥಾನದ ಬಗ್ಗೆ ಮಾತನಾಡಿದ ಸತೀಶ್,  2 ವರ್ಷದ ಬಳಿಕ ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಈ ಹಿಂದೆಯೇ ತೀರ್ಮಾನವಾಗಿದೆ. ಹೀಗಾಗಿ ನಾನು ಈಗ ಸಚಿವ ಸ್ಥಾನ ಕೇಳಲ್ಲ.. ಎರಡು ವರ್ಷದ ಬಳಿಕ ಸಚಿವ ಸ್ಥಾನ ನೀಡೋದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿದೆ ಎಂದರು.