ಬೆಂಗಳೂರು (ಜು. 28): ‘ಬಟರ್ ಫ್ಲೈ’ ಚಿತ್ರೀಕರಣ ಮುಗಿದಿದೆ. ಗೋಕರ್ಣದಿಂದ ಶುರುವಾದ ಚಿತ್ರೀಕರಣ ಮೈಸೂರು, ಬೆಂಗಳೂರು ಹಾಗೂ ಪ್ಯಾರಿಸ್ ಮೂಲಕ ಯುರೋಪ್‌ನಲ್ಲಿ ಮುಕ್ತಾಯಗೊಂಡಿದೆ. ಅಕ್ಟೋಬರ್'ನಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

ರಮೇಶ್ ಅರವಿಂದ್ ನಿರ್ದೇಶನ ಹಾಗೂ ಪಾರುಲ್ ಯಾದವ್ ಅಭಿನಯದ ಚಿತ್ರವಿದು. ಹಿಂದಿಯ ‘ಕ್ವೀನ್’ ಕನ್ನಡದಲ್ಲಿ ‘ಬಟರ್‌ಫ್ಲೈ’, ತೆಲುಗಿನಲ್ಲಿ ‘ದಟ್ ಈಸ್ ಮಹಾಲಕ್ಷ್ಮಿ’, ತಮಿಳಿನಲ್ಲಿ ‘ಪ್ಯಾರಿಸ್ ಪ್ಯಾರಿಸ್’ ಹಾಗೂ ಮಲಯಾಳಂನಲ್ಲಿ ‘ಜಾಮ್ ಜಾಮ್’ ಎಂಬ ಹೆಸರಿನಲ್ಲಿ ತೆರೆ ಕಾಣಲಿದೆ. ಈ ಚಿತ್ರಗಳಲ್ಲಿ ಕ್ರಮವಾಗಿ ಪಾರುಲ್ ಯಾದವ್, ತಮನ್ನಾ ಬಾಟಿಯಾ, ಕಾಜಲ್ ಅಗರ್‌ವಾಲ್ ಹಾಗೂ ಮಂಜಿಮಾ ಮೋಹನ್ ನಾಯಕಿಯರಾಗಿ ನಟಿಸಿದ್ದಾರೆ. ರಮೇಶ್ ಅರವಿಂದ್
ಕನ್ನಡ ಮತ್ತು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ರಮೇಶ್ ಅರವಿಂದ್ ಸ್ಪೀಕಿಂಗ್
‘ಗೋಕರ್ಣ ಹಾಗೂ ಮೈಸೂರಿನಲ್ಲಿ ನಡೆದ ನಾಲ್ಕೈದು  ದಿನಗಳ ಚಿತ್ರೀಕರಣ ಅವಧಿ ಬಿಟ್ಟರೆ ಈ ಚಿತ್ರಕ್ಕೆ  ಪ್ಯಾರಿಸ್‌ನಲ್ಲೇ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಾಲ್ಕು ಚಿತ್ರಗಳಿಗೂ ಏಕಕಾಲದಲ್ಲೇ ಚಿತ್ರೀಕರಣ ನಡೆಯಬೇಕಿತ್ತು, ನಾಲ್ಕು ಸ್ಟಾರ್‌ಗಳು ಒಂದೇ ಸೆಟ್‌ನಲ್ಲಿ ಅಭಿನಯಿಸಬೇಕಿತ್ತು. ಅದೊಂದು ಸವಾಲಿನ ಹಾಗಿತ್ತು ಚಿತ್ರೀಕರಣ. ಹಾಗೆಯೇ ಕ್ಲೈಮ್ಯಾಕ್ಸ್. ಅದು ಕೂಡ ನಾಲ್ಕು ಸ್ಟಾರ್ ನಟಿಯರ ಮುಖಾಮುಖಿಯಲ್ಲೇ ನಡೆಯಿತು. ಪ್ರತಿಯೊಬ್ಬರು ಸೊಗಸಾಗಿ ಅಭಿನಯಿಸಿದರು. ಅದರಲ್ಲೂ ಚಿತ್ರದ ಎಲ್ಲಾ ಹಾಡುಗಳಿಗೂ ಅಷ್ಟು ನಟಿಯರು ಸಿಂಗಲ್ ಟೇಕ್‌ನಲ್ಲೇ ಚಿತ್ರೀಕರಣ ಪೂರೈಸಿದ್ದಾರೆ.

ಇದು ಈ ಚಿತ್ರದ ಮತ್ತೊಂದು ವಿಶೇಷ ಅಂತಲೇ ಹೇಳಬಹುದು’ ಎನ್ನುತ್ತಾರೆ ನಿರ್ದೇಶಕ ರಮೇಶ್ ಅರವಿಂದ್. ನಿರ್ಮಾಪಕ ಮನು ಕುಮಾರನ್ ಖುಷಿಯಾಗಿದ್ದಾರೆ. ‘ಚಿತ್ರೀಕರಣ ಇಷ್ಟು ಸರಳವಾಗಿ, ಸೊಗಸಾಗಿ  ನಡೆಯುತ್ತದೆ ಅಂತ ನಾನಂದುಕೊಂಡಿರಲಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ಅಕ್ಟೋಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಮನುಕುಮಾರ್. ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಗಣೇಶ್ ಆಚಾರ್ಯ ಹಾಗೂ ಬಾಸ್ಕೋ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.