Asianet Suvarna News Asianet Suvarna News

ರಾಮಾ ರಾಮಾ ರೇ ಚಿತ್ರತಂಡ ನಮ್ಮೊಂದಿಗೆ ಅನುಭವ ಹಂಚಿಕೊಂಡದ್ದು ಹೀಗೆ...

ಇತ್ತೀಚೆಗಷ್ಟೇ ತೆರೆಕಂಡಿರುವರಾಮಾ ರಾಮಾ ರೇ ಚಿತ್ರದ ಬಗ್ಗೆ ಈಗಾಗಲೇ ಸೆಲಿಬ್ರಿಟಿಗಳು, ಸಿನೆಮಾ ಪ್ರೇಮಿಗಳು ಸಾಕಷ್ಟು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿದ್ದು, ರಾಮ ರಾಮ ರೇ ಸಿನೆಮಾದಲ್ಲಿ ಅಭಿನಯಿಸಿರುವ ನಟರಾದ ನಟರಾಜ್, ಧರ್ಮಣ್ಣ, ಹಾಗೂ ಬಿಂಬಶ್ರೀ ನೀನಾಸಂ ಚಿತ್ರದ ಕುರಿತು ಸುವರ್ಣನ್ಯೂಸ್ ವೆಬ್ನೊಂದಿಗೆ ಹಂಚಿಕೊಂಡಿದ್ದು ಹೀಗೆ...  

Rama Rama Re Kannada Film Team Exclusive Interview

ನವೀನ್ ಕೊಡಸೆ

ಇತ್ತೀಚೆಗಷ್ಟೇ ತೆರೆಕಂಡಿರುವರಾಮಾ ರಾಮಾ ರೇ ಚಿತ್ರದ ಬಗ್ಗೆ ಈಗಾಗಲೇ ಸೆಲಿಬ್ರಿಟಿಗಳು, ಸಿನೆಮಾ ಪ್ರೇಮಿಗಳು ಸಾಕಷ್ಟು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿದ್ದು, ರಾಮ ರಾಮ ರೇ ಸಿನೆಮಾದಲ್ಲಿ ಅಭಿನಯಿಸಿರುವ ನಟರಾದ ನಟರಾಜ್, ಧರ್ಮಣ್ಣ, ಹಾಗೂ ಬಿಂಬಶ್ರೀ ನೀನಾಸಂ ಚಿತ್ರದ ಕುರಿತು ಸುವರ್ಣನ್ಯೂಸ್ ವೆಬ್ನೊಂದಿಗೆ ಹಂಚಿಕೊಂಡಿದ್ದು ಹೀಗೆ...  

ಅಪರಾಧಿ ಪಾತ್ರದಲ್ಲಿ ನಟಿಸಿರುವ ನಟರಾಜ್ ಹೇಳಿದಿಷ್ಟು...

ಎಲ್ಎಲ್'ಬಿ ಓದಿದ ನಿಮಗೆ ನಟನೆಯತ್ತ ಒಲವು ಮೂಡಿದ್ದು ಹೇಗೆ?

ನಾವೂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಸ್ಟೇಜ್ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಭಾರತ ಯಾತ್ರಾ ಫೆಸ್ಟಿವಲ್'ನಲ್ಲಿ ಲಂಕೇಶ್ ಬರೆದ 'ತೆರೆಗಳು' ನಾಟಕದಲ್ಲಿ ಅಭಿನಯಿಸಿದಾಗ ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಬಂತು. ಜನರ ಚಪ್ಪಾಳೆ, ಸಿಳ್ಳೆಯ ಸದ್ದೇ ನನ್ನನ್ನು ರಂಗಭೂಮಿಯತ್ತ ಹೊರಳಲು ಕಾರಣವಾಯಿತು. ಕಾಲೇಜು ದಿನಗಳಲ್ಲಿ ಸ್ಲಾಮ್ ಬುಕ್'ನಲ್ಲಿ ಸಾಕಷ್ಟು ಫ್ರೆಂಡ್ಸ್ ರಂಗಭೂಮಿಯಲ್ಲಿ ಮುಂದುವರಿ, ನಿನಗೆ ಟ್ಯಾಲೆಂಟ್ ಇದೆ ಎಂದು ಹುರಿದುಂಬಿಸಿದ್ದು ಕೂಡ ಈ ರಂಗಕ್ಕಿಳಿಯಲು ಕಾರಣವಾಯಿತು. ಲಾ ಪ್ರಾಕ್ಟಿಸ್ ಮಾಡುವಾಗಲೂ ಇದು ನನ್ನ ಕ್ಷೇತ್ರವಲ್ಲ ಎಂದು ಅನಿಸುತ್ತಿತ್ತು. ಕೊನೆಗೂ ದಿಟ್ಟ ನಿರ್ಧಾರ ಮಾಡಿ ಸಿನೆಮಾ ಕ್ಷೇತ್ರಕ್ಕೆ ಧುಮಿಕಿದೆ.

ಸಿನೆಮಾಗಾಗಿಯೇ ತೂಕ ಇಳಿಸಿಕೊಂಡಿದ್ದು, ಹೇಗಿತ್ತು ಅನುಭವ?

ನಾನು ಮೊದಲು ಸುಮಾರು 73 ಕೆಜಿ ಇದ್ದೆ. ನಿರ್ದೇಶಕ ಸತ್ಯಪ್ರಕಾಶ್ ನನಗೆ ಪಾತ್ರ ಪರಿಚಯಿಸಿ ತೂಕ ಇಳಿಸಿಕೊಳ್ಳಲು ಹೇಳಿದರು. ದಿನ ಬೆಳಗ್ಗೆ ಎದ್ದು ಓಡಿ-ಓಡಿ, ಒಂದಷ್ಟು ವರ್ಕೌಟ್ ಮಾಡಿದೆ. ಕೊನೆಗೆ 53 ಕೆಜಿಗೆ ಇಳಿಸಿದೆ. ಕೊನೆಗೆ 54-54 ಕೆಜಿಗೆ ತೂಕ ಬ್ಯಾಲೆನ್ಸ್ ಮಾಡಿದೆ. ಸುಮಾರು ಒಂದು ವರ್ಷ ಮಾಡಿದ ಹಾರ್ಡ್'ವರ್ಕ್'ನಿಂದ ಒಂದು ಹಂತಕ್ಕೆ ಬಂದು ತಲುಪಿದ್ದೇನೆ.

ನಿಮ್ಮ ಪಾತ್ರದಲ್ಲಿ ಮಾತೇ ಕಡಿಮೆ. ಅದನ್ನು ಹೇಗೆ ನಿಭಾಯಿಸಿದ್ರಿ?

ನಾನು ಮೊದಲೇ ಸಾಕಷ್ಟು ಮಾತನಾಡುತ್ತಿದ್ದ ವ್ಯಕ್ತಿ. ಇಡೀ ಈ ಸಿನೆಮಾದಲ್ಲಿ ನನಗೆ ಕೇವಲ ನಾಲ್ಕರಿಂದ ಐದು ಡೈಲಾಗ್'ಗಳಿವೆ. ಭಾವಾಭಿನಯವೇ ಜಾಸ್ತಿ. ಇದನ್ನು ನಾನು ಸವಾಲಾಗಿ ತೆಗೆದುಕೊಂಡೆನಾನು ಅಭಿನಯಿಸಿದ ಪಾತ್ರಕ್ಕೆ ಯಾವುದೇ ರೆಫರೆನ್ಸ್ ಕೂಡ ಇರಲಿಲ್ಲ. ಸವಾಲಿನ ಪಾತ್ರವಾದರೂ ಉತ್ತಮವಾಗಿ ಅಭಿನಯಿಸಿದ ಸಮಾಧಾನವಿದೆ. ಪಾತ್ರವನ್ನೇ ಅನುಭವಿಸುತ್ತಾ ಅಭಿನಯಿಸಿದ್ದು ಸಾಕಷ್ಟು ಖುಷಿಕೊಟ್ಟಿದೆ. ಮುಂದೆ ಅವಕಾಶ ಸಿಕ್ಕರೆ ಜೀವಂತ ಪಾತ್ರಗಳಲ್ಲಿ ಅಭಿನಯಿಸುವ ಆಸೆಯಿದೆ. ನಮ್ಮ ಫರ್ಪಾಮೆನ್ಸ್ ಗುರುತಿಸಿ ಅವಕಾಶ ಕೊಟ್ರೆ ಖಂಡಿತ ಮಾಡ್ತೇನೆ.

ನಾಯಕಿ ಬಿಂಬಶ್ರೀ ನೀನಾಸಮ್  ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ

ನೀನಾಸಮ್'ನಿಂದ ಕಲಿತು ಬಂದ ನಿಮ್ಮ ಸಿನಿಮಾ ಜರ್ನಿ ಹೇಗಿತ್ತು?

ನನಗೆ ಜೀವನ ಅಂದ್ರೆ ಏನು ಅನ್ನೋದನ್ನು ಕಲಿಸಿದ್ದು ನೀನಾಸಂ. ನನ್ನ ನಡೆ-ನುಡಿಗಳಲ್ಲಿ ಏನಾದರೂ ಬದಲಾವಣೆಯಾಗಿದೆ ಅಂದರೆ ಅದು ನೀನಾಸಂ, ನನಗೆ ಕಲಿಸಿಕೊಟ್ಟ ಸಂಸ್ಕಾರ. ನಾನು ಈ ಮೊದಲು ಜಯನಗರ 4th ಬ್ಲಾಕ್ ಚಿತ್ರದಲ್ಲಿ ಅಭಿನಯಿಸಿದ್ದೆ. ರಾಮಾ ರಾಮಾ ರೇ ಚಿತ್ರದಲ್ಲಿನ ಬಹುತೇಕ ಮಂದಿ ನನಗೆ ಪರಿಚಿತರೇ ಆಗಿದ್ದರಿಂದ ನನಗೆ ಕಷ್ಟವಾಗಲಿಲ್ಲ.

ಈ ಚಿತ್ರದಲ್ಲಿ ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀರ. ಮುಂದೆಯೂ ಇಂತಹ ಪಾತ್ರಗಳಲ್ಲಿ ನಿಮ್ಮನ್ನು ನಿರೀಕ್ಷಿಸಬಹುದಾ?

ಅವಕಾಶ ಸಿಕ್ಕಿದ್ರೆ ಖಂಡಿತಾ ಡಿ ಗ್ಲಾಮರ್ ಪಾತ್ರಗಳಲ್ಲಿ ಅಭಿನಯಿಸುತ್ತೇನೆ. ಪಾತ್ರಗಳು ಸ್ವಾಭಾವಿಕವಾಗಿರುವುದರಿಂದ ತೃಪ್ತಿಯಿಂದ ಅಂತಹ ಪಾತ್ರವನ್ನು ಮಾಡುತ್ತೇನೆ. ಚಿತ್ರಕ್ಕೆ ಜನರು ತೋರಿಸುತ್ತಿರುವ ಪ್ರತಿಕ್ರಿಯೆ ನೋಡಿದರೆ, ಇನ್ನಷ್ಟು ಅವಕಾಶಗಳು ಸಿಗುವ ನಂಬಿಕೆಯಲ್ಲಿದ್ದೇನೆ.             

ಈ ಚಿತ್ರದ ಅನುಭವ ಹೇಗಿತ್ತು?

ನಿಜಕ್ಕೂ ಅದ್ಭುತ ಅನುಭವ. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟ ನಿರ್ದೆಶಕ ಸತ್ಯಪ್ರಕಾಶ್ ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಶೂಟಿಂಗ್'ನಲ್ಲಿ ಜೊತೆಗಿದ್ದವರೆಲ್ಲರೂ ತುಂಬಾ ಸಫೋರ್ಟ್ ಮಾಡಿದ್ರು. ಇದು ನನ್ನ ನೆನಪಿನ ಸುಳಿಯಲ್ಲಿ ಸದಾಕಾಲ ಉಳಿದಿರುತ್ತೆ.

ಲವರ್ ಬಾಯ್  ಧರ್ಮಣ್ಣ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ಹೀಗೆ...

ಪ್ರೇಮಿಯ ಪಾತ್ರದಲ್ಲಿ ಮಿಂಚಿರುವ ನೀವು ಸ್ಯಾಂಡಲ್’ವುಡ್’ಗೆ ಸಾಗಿ ಬಂದದ್ದು ಹೇಗೆ?

ಡಿಗ್ರಿ ಮಾಡುವಾಗಲೇ ನಾನು, ನಟರಾಜ್ ವೇದಿಕೆ ಕಾರ್ಯಕ್ರ,ಮ ಮಾಡುತ್ತಿದ್ದೆವು. ಆಲ್ ದಿ ಬೆಸ್ಟ್, ಸಹಿರಿ ಸಹಿರಿ, ಒಂದಾಟ ಭಟ್ರುದೂ ಮುಂತಾದ ನಾಟಕಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದೆ. ದೇಶ, ವಿದೇಶಗಳಲ್ಲಿ ಅಭಿನಯಿಸಿದೆ. ನಾನು ನಟರಾಜು ಹಾಗೂ ನಿರ್ದೇಶಕ ಸತ್ಯಪ್ರಕಾಶ್ ಬಾಲ್ಯದ ಗೆಳೆಯರಾಗಿದ್ದರಿಂದ ಒಟ್ಟಾಗಿ ತಂಡ ಮಾಡಿಕೊಂಡು ಸಿನೆಮಾ ಮಾಡಬೇಕೆಂದು ತೀರ್ಮಾನ ಮಾಡಿದ್ವಿ. ಈ ನಡುವೆ ಜಯನಗರ 4th ಬ್ಲಾಕ್ ಅನ್ನೊ ಕಿರು ಚಿತ್ರ ಮಾಡಿದ್ವಿ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಬಂತು. ಕೆಲವೊಂದು ಸೀರಿಯಲ್ಲುಗಳಲ್ಲೂ ನಾನು ಅಭಿನಯಿಸಿದ್ದೇನೆ.

ತಿಳಿ ಹಾಸ್ಯದ ಮೂಲಕ ರಂಜಿಸಿರುವ ನಿಮ್ಮ ಅನುಭವ ಹೇಗಿತ್ತು?

ರಾಮಾ ರಾಮಾ ರೇ,  ಶೇ.80 ರಸ್ತೆ ಬಳಿಯೇ ನಡೆಯುವ ಸಿನೆಮಾ. ಹಳ್ಳಿ ಹುಡುಗನ ಮ್ಯಾನರಿಸಂ ಇರುವ ಪಾತ್ರ. ಸ್ವಾಭಾವಿಕವಾಗಿ ಪಾತ್ರ ಮೂಡಿ ಬಂದಿದೆ. ಈ ಚಿತ್ರದಲ್ಲಿ ತಾತನ ಪಾತ್ರ ಮಾಡಿರುವ ಜಯರಾಮಣ್ಣ ಸಾಕಷ್ಟು ನನ್ನನ್ನು ತಿದ್ದಿ ತೀಡಿದ್ದಾರೆ. ಈಗ ನನ್ನ ಪಾತ್ರದಲ್ಲಿ ಏನಾದರೂ ಒಳ್ಳೆಯ ಅಂಶಗಳಿದ್ದರೆ ಅದಕ್ಕೆ ಅವರೇ ಕಾರಣ.

ಜನರ ಪ್ರತಿಕ್ರಿಯೆ ಬಗ್ಗೆ ಏನಂತೀರಾ?

ಮೊದಲು ನಮ್ಮ ಚಿತ್ರಕ್ಕೆ ಪಬ್ಲಿಸಿಟಿಯೇ ಇರಲಿಲ್ಲ. ಈಗ ಜನರ ಬಾಯಿಂದ ಬಾಯಿಗೆ ಹರಡುತ್ತಾ ಇದೆ. ಮೊನ್ನೆ ಈಶ್ವರಿ ಥಿಯೇಟರ್ ಹೊರಗೆ ಜನರ ರೆಸ್ಪಾನ್ಸ್ ನೋಡಲು ಹೋಗಿ ನಿಂತಿದ್ದೆ. ಅಲ್ಲಿದ ಒಬ್ಬ ನನಗೆ ಬ್ಲಾಕ್'ನಲ್ಲಿ ಟಿಕೆಟ್ ಮಾರೋಕೆ ಬಂದಿದ್ದ, ಜನರಿಂದ ಸಾಕಷ್ಟು ಒಳ್ಳೆ ರೆಸ್ಪಾನ್ಸ್ ಬರ್ತಾ ಇದೆ. ಜನರು ಈ ಚಿತ್ರದ ಬಗ್ಗೆ ತೋರುತ್ತಿರುವ ಆಸಕ್ತಿ ಬಗ್ಗೆ ಹೇಳಲು ಮಾತೇ ಬರುತ್ತಿಲ್ಲ.

Follow Us:
Download App:
  • android
  • ios