ರಾಜ್ಯದ 420 ಪರದೆಯಲ್ಲಿ ‘2.0’ | ರಜನಿಕಾಂತ್‌ ಅಭಿನಯದ ಅದ್ಧೂರಿ ಸಿನಿಮಾ ಮೊದಲ ದಿನವೇ 950 ಶೋ |  ದೇಶಾದ್ಯಂತ 5000 ಚಿತ್ರಮಂದಿರಗಳಲ್ಲಿ ಪ್ರದರ್ಶನ 

ಬೆಂಗಳೂರು (ನ.30):  ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ಅಕ್ಷಯ್‌ ಕುಮಾರ್‌ ನಟನೆಯ ‘2.0’ ಚಿತ್ರಕ್ಕೆ ಭಾರತ ಸೇರಿದಂತೆ ವಿಶ್ವಾದ್ಯಂತ ಅದ್ಧೂರಿ ಸ್ವಾಗತ ಸಿಕ್ಕಿದೆ.

‘ರೋಬೋ’ ಚಿತ್ರದ ಮುಂದುವರಿಕೆಯ ಭಾಗವಾಗಿರುವ, ಎಸ್‌. ಶಂಕರ್‌ ನಿರ್ದೇಶನದ ಬಹುಕೋಟಿ ವೆಚ್ಚದ ಸಿನಿಮಾ ಇದಾಗಿದ್ದು, ಕರ್ನಾಟಕದಲ್ಲೇ 420ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ತೆರೆಕಂಡಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 950 ಶೋ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿದೆ.

ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ. ಎಲ್ಲ ಕಡೆ 3ಡಿ ತಂತ್ರಜ್ಞಾನದಲ್ಲಿ ಪ್ರದರ್ಶನಗೊಂಡಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಅತ್ಯಂತ ಹೆಚ್ಚು ಶೋಗಳಿವೆ. ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ 18, ಮೀನಾಕ್ಷಿ ಮಾಲ್‌ನಲ್ಲಿ 20 ಹಾಗೂ ರಾಕ್‌ಲೈನ್‌ ಸಿನಿಮಾಸ್‌ನಲ್ಲಿ 12 ಶೋಗಳ ಪ್ರದರ್ಶನ ಕಂಡಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ 4,500 ಸಾವಿರದಿಂದ 5000 ಸಾವಿರ ಚಿತ್ರಮಂದಿರಗಳಲ್ಲಿ ರಜನಿಕಾಂತ್‌ ಅವರ ‘2.0’ ಸಿನಿಮಾ ಮೊದಲ ದಿನ ಅಬ್ಬರಿಸಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರವೊಂದು ಉತ್ತರ ಭಾರತದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಒಟ್ಟು 600ಕ್ಕೂ ಹೆಚ್ಚು ಸ್ಕ್ರೀನ್‌ಗಳನ್ನು ಸಿನಿಮಾ ಆವರಿಸಿಕೊಂಡಿದೆ. ಇದಕ್ಕೆ ಕಾರಣ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವುದು.

ಶಾಲೆ, ಕಾಲೇಜುಗಳಿಗೆ ರಜೆ:

ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಹೀಗೆ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲ ಕಡೆ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇ​ಶ, ಕರ್ನಾಟಕ, ಕೇರಳ ಸೇರಿದಂತೆ ಎಲ್ಲ ಕಡೆ ರಜನಿಕಾಂತ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ತಮಿಳುನಾಡಿನಲ್ಲಂತೂ ತಮ್ಮ ಆರಾಧ್ಯ ದೈವ ರಜನಿಕಾಂತ್‌ ಚಿತ್ರದ ಯಶಸ್ಸಿಗಾಗಿ ಸಾಕಷ್ಟುಅಭಿಮಾನಗಳು ನೆಲದ ಮೇಲೆ ಊಟ ಮಾಡುವ ಮೂಲಕ ಹರಕೆ ತೀರಿಸಿದರು. ‘2.0’ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಕೆಲವು ಶಾಲಾ- ಕಾಲೇಜುಗಳಿಗೆ ರಜೆ ಕೂಡ ಘೋಷಿಸಲಾಗಿತ್ತು.

ಪಕ್ಷಿಗಳ ಉಳಿವಿಗೆ ಸ್ಟಾರ್‌ಗಳ ಕಾದಾಟ:

ಈ ಹಿಂದೆ ಬಂದ ‘ರೋಬೋ’ ಚಿತ್ರದ ಮುಂದುವರಿಕೆಯ ಕತೆಯಾದ್ದರಿಂದ ಇಲ್ಲೂ ರಜನಿಕಾಂತ್‌ ದ್ವಿಪಾತ್ರ ಮಾಡಿದ್ದಾರೆ. ವಿಜ್ಞಾನಿ ಹಾಗೂ ಚಿಟ್ಟಿಹೀಗೆ ಎರಡು ಪಾತ್ರಗಳಲ್ಲಿ ನಟಿಸಿರುವ ರಜನಿಕಾಂತ್‌ ಅವರ ಚಿಟ್ಟಿಪಾತ್ರ ಹಾಗೂ ಅಕ್ಷಯ್‌ ಕುಮಾರ್‌ ಮಾಡಿರುವ ಪಕ್ಷಿರಾಜನ್‌ ಪಾತ್ರಗಳು ಮುಖಾಮುಖಿ ಆಗುತ್ತವೆ.

ಮೊಬೈಲ್‌ ಮೂಲಕ ಹೇಳುತ್ತಿರುವ ಮಾನವೀಯ ಕತೆ ಇದಾಗಿದ್ದು, ಮೊಬೈಲ್‌ ಟವರ್‌ಗಳಿಂದ ಪಕ್ಷಿಗಳು ನಾಶವಾಗುತ್ತಿರುವುದನ್ನು ನೋಡುವ ಪಕ್ಷಿರಾಜನ್‌, ಅವುಗಳ ಉಳಿವಿಗೆ ಮುಂದಾಗಿ ಸಾವು ಕಾಣುತ್ತಾರೆ. ಹೀಗೆ ಸಾವು ಕಾಣುವ ಅಕ್ಷಯಕುಮಾರ್‌, ದೆವ್ವದ ರೂಪದಲ್ಲಿ ಬಂದು ಪಕ್ಷಿಗಳ ನಾಶಕ್ಕೆ ಕಾರಣವಾಗುತ್ತಿರುವ ಆಧುನಿಕ ಸಂಪರ್ಕ ಮಾಧ್ಯಮದ ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬುದು ಚಿತ್ರದ ಕತೆ.

ರಜನಿಕಾಂತ್‌ ಚಿತ್ರದಲ್ಲಿ ಕೆಜಿಎಫ್‌ ಯಶ್‌!

ರಜನಿಕಾಂತ್‌ ಅಭಿನಯದ ಬಹುನಿರೀಕ್ಷೆಯ ‘2.0’ ಚಿತ್ರದ ನಡುವೆ ‘ಕೆ.ಜಿ.ಎಫ್‌’ ಸಿನಿಮಾ ಕೂಡ ಸದ್ದು ಮಾಡಿದೆ. ಅಂದರೆ ವಿದೇಶಗಳಲ್ಲಿ ಎಲ್ಲೆಲ್ಲಿ ರಜನಿಕಾಂತ್‌ ಸಿನಿಮಾ ತೆರೆಗೆ ಬರುತ್ತಿದೆಯೋ ಅಲ್ಲೆಲ್ಲ ನಟ ಯಶ್‌ ಹಾಗೂ ಪ್ರಶಾಂತ್‌ ನೀಲ್‌ ನಟನೆಯ ‘ಕೆ.ಜಿ.ಎಫ್‌’ ಚಿತ್ರದ ಟ್ರೇಲರ್‌ ಪ್ರದರ್ಶನ ಮಾಡಲಾಗಿದೆ.

ಚಿತ್ರದ ಹೈಲೈಟ್ಸ್‌ ಏನು:

ಅದ್ಧೂರಿ ಗ್ರಾಫಿಕ್ಸ್‌ ಇರುವ ಸಿನಿಮಾ ಇದಾಗಿದ್ದು, ರಜನಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಮಕ್ಕಳ ಸಮೇತ ನೋಡುವಂತಹ ಚಿತ್ರ. ಭಾರತೀಯ ಸಿನಿಮಾ ಪರದೆ ಮೇಲೆ ತೆರೆ ಕಂಡ ಹಾಲಿವುಡ್‌ ಶೈಲಿಯ ಸಿನಿಮಾ ಇದಾಗಿದೆ. ಹೀಗಾಗಿ ತಾಂತ್ರಿಕತೆಯದ್ದೇ ಮೇಲುಗೈ ಇರುವ ಈ ಚಿತ್ರದಲ್ಲಿ ರಜನಿಕಾಂತ್‌ ಹಾಗೂ ಅಕ್ಷಯ್‌ ಕುಮಾರ್‌ ಅವರ ಪಾತ್ರಗಳೇ ಪ್ರಮುಖ ಆಕರ್ಷಣೆ.