ಬೆಂಗಳೂರು(ನ.29): ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ವಿಶ್ವದಾದ್ಯಂತ ತೆರೆ ಕಂಡಿದೆ. ಈ ಮೂಲಕ ಅಭಿಮಾನಿಗಳ ಬಹುದಿನಗಳ ಕಾಯುವಿಕೆ ಅಂತ್ಯ ಕಂಡಿದೆ.

2.0 ಚಿತ್ರ ದಕ್ಷಿಣ ಭಾರತೀಯ ಸಿನಿಮಾ ರಂಗ ಮತ್ತು ಬಾಲಿವುಡ್ ರಂಗವನ್ನು ಭವಿಷ್ಯದಲ್ಲಿ ಮತ್ತಷ್ಟು ಬೆಸೆಯಬಲ್ಲ ಚಿತ್ರವಾಗಿ ಮಾರ್ಪಾಡುಗೊಂಡರೆ ಅಚ್ಚರಿಯಿಲ್ಲ ಅಂತಾರೆ ಸಿನಿ ತಜ್ಞರು. ಕಾರಣ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಜನಿ ಜೊತೆ ನಟಿಸಿದ್ದು, ಸಿನಿಮಾ ವಿಕ್ಷೀಸಲು ಉತ್ತರ, ದಕ್ಷಿಣ ಎರಡೂ ಒಂದಾಗಿರುವುದು ಉತ್ತಮ ಬೆಳವಣಿಗೆ.

2010ರಲ್ಲಿ ತೆರೆ ಕಂಡಿದ್ದ ರಜಿನಿ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ರೋಬೋ ಚಿತ್ರದ ಮುಂದಿನ ಅವತರಣಿಕೆಯೇ 2.0 ಎನ್ನಬಹುದು. ಕಾರಣ 2.0 ಚಿತ್ರದಲ್ಲೂ ರಜನಿ ಈ ಮೊದಲಿನ ಡಾ. ವಾಸಿ ಪಾತ್ರವನ್ನೇ ಮಾಡಿದ್ದಾರೆ. ಅಲ್ಲದೇ ರೋಬೋ ಚಿತ್ರದ ಪ್ರಮುಖ ಪಾತ್ರಧಾರಿ ಚಿಟ್ಟಿಯೇ ಇಲ್ಲಿಯೂ ಮೋಡಿ ಮಾಡಿದ್ದಾನೆ.

ಅದರಂತೆ ಚಿತ್ರದ ಮತ್ತೊಂದು ಪ್ರಮುಖ ಪಾತ್ರಧಾರಿ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ.ರಿಚರ್ಡ್ಸ್(ಅಕ್ಷಯ್ ಕುಮಾರ್) ವೈಜ್ಞಾನಿಕ ಸಂಶೋಧನೆಯೊಂದನ್ನು ಕೈಗೊಂಡ ವೇಳೆ ಅದು ತಪ್ಪು ದಾರಿ ಹಿಡಿದ ಪರಿಣಾಮ ಅಕ್ಷಯ್ ಬೃಹತ್ ಹಕ್ಕಿ ರೂಪದ ಹೊಸ ಜೀವಿಯಾಗಿ ರೂಪಾಂತರಗೊಳ್ಳುತ್ತಾರೆ.

ಮನುಕುಲಕ್ಕೆ ಮಾರಕವಾಗುವ ಡಾ.ರಿಚರ್ಡ್ಸ್ ನನ್ನು ತಡೆಯಲು ಡಾ. ವಾಸಿ ಮತ್ತೆ ಚಿಟ್ಟಿಯನ್ನು ಜೀವಂತಗೊಳಿಸುವ ಮತ್ತು ಚಿಟ್ಟು ಡಾ. ರಿಚರ್ಡ್ಸ್ ನ ಅಟ್ಟಹಸವನ್ನು ಕೊನೆಗಾಣಿಸುವುದೇ ಚಿತ್ರದ ತಿರುಳು.

2010ರ ರೋಬೋ ಚಿತ್ರಕ್ಕೂ, 2.0 ಚಿತ್ರಕ್ಕೂ ತಂತ್ರಜ್ಞಾನ ಬಳಕೆಯಲ್ಲಿ ಅಗಾಧವಾದ ವ್ಯತ್ಯಾಸವಿರುವುದು ತೆರೆ ಮೇಲೆ ಸ್ಪಷ್ಟವಾಘಿ ಗೋಚರವಾಗುತ್ತದೆ. ಚಿಟ್ಟಿ, ಡಾ.ರಿಚರ್ಡ್ಸ್ ನಡುವಿನ ಹೊಡೆದಾಟದ ದೃಶ್ಯಗಳು, ಅಕ್ಷಯ್ ವಿನಾಶರೂಪಿ ಹಕ್ಕಿಯಾಗಿ ಬದಲಾಗುವ ದೃಶ್ಯ ಎಲ್ಲವೂ ಕಣ್ಣ ಮುಂದೆ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತದೆ.

ಇನ್ನು 2.0 ಚಿತ್ರಕ್ಕೆ ರಾಜ್ಯವೂ ಸೇರಿದಂತೆ ವಿಶ್ವದಾದ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿದ್ದು, ಚಿತ್ರತಂಡದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ನಿರ್ದೇಶಕ ಎಸ್.ಶಂಕರ್ ಹೇಳಿದಂತೆ ಚಿತ್ರದ ಒಟ್ಟು ಬಜೆಟ್ 500 ಕೋಟಿ ರೂ. ಆಗಿದ್ದು, ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಈಗಾಗಲೇ 370 ಕೋಟಿ ರೂ. ಗೆ ಮಾರಾಟವಾಗಿದೆ.

ಇನ್ನು 2.0 ಚಿತ್ರ ಬಿಡುಗಡೆಯ ಕುರಿತು ಟ್ವೀಟ್ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್, ನಾವೆಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ರಜನಿಕಾಂತ್‌ರ 2.0 ಚಿತ್ರದ ಫೋಟೋಗಳಿವು....