ಆರ್‌ಎಸ್‌ಎಸ್ ಬಗ್ಗೆ ಸತ್ಯದರ್ಶನ ಮಾಡುವ ವೆಬ್ ಸಿರೀಸ್, ಸಿನಿಮಾ ಮಾಡ್ತೇನೆ: ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್!
ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ತಂದೆ ಹಾಗೂ ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರಗಳಾದ ಬಾಹುಬಲಿ, ಆರ್‌ಆರ್‌ಆರ್‌ನಂಥ ಚಿತ್ರಗಳಿಗೆ ಚಿತ್ರಕಥೆ ಬರೆದ ಹಿರಿಯ ಕಥೆಗಾರ ವಿಜಯೇಂದ್ರ ಪ್ರಸಾದ್ ಆರ್‌ಎಸ್‌ಎಸ್ ಕುರಿತಾಗಿ ಚಿತ್ರವನ್ನು ನಿರ್ದೇಶನ ಮಾಡುವುದರೊಂದಿಗೆ ವೆಬ್ ಸಿರೀಸ್ ಮಾಡುವುದಾಗಿ ಹೇಳಿದ್ದಾರೆ. ಆರ್‌ಎಸ್‌ಎಸ್ ಕುರಿತಾದ ಚಿತ್ರವನ್ನು ಮಾಡಲು ನಮಗೆ ಹೇಳಿದ ಬಳಿಕ, ಈ ಸಂಘಟನೆಯ ಬಗ್ಗೆ ಅಧ್ಯಯನ ಮಾಡಿದೆ. ಅದರ ಬೆನ್ನಲ್ಲಿಯೇ ತಾವು ತಿಳಿದುಕೊಂಡಿದ್ದರಲ್ಲಿ ಎಷ್ಟು ತಪ್ಪಿದೆ ಎನ್ನುವುದು ಅರ್ಥವಾಗಿದೆ ಎಂದಿದ್ದಾರೆ.
ನವದೆಹಲಿ (ಆ. 20): ಬಾಹುಬಲಿ, ಆರ್‌ಆರ್‌ಆರ್ ಹಾಗೂ ಭಜರಂಗಿ ಭಾಯಿಜಾನ್‌ರಂಥ ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಕೆಲಸ ಮಾಡಿದ್ದ, ತೆಲುಗು ಚಿತ್ರರಂಗದ ಖ್ಯಾತ ಚಿತ್ರಕಥೆಗಾರ ಮತ್ತು ರಾಜ್ಯಸಭಾ ಸಂಸದ ವಿಜಯೇಂದ್ರ ಪ್ರಸಾದ್, ಶೀಘ್ರದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾಗಿ ತಯಾರಾಗಲಿರುವ ಚಿತ್ರ ಹಾಗೂ ವೆಬ್ ಸಿರೀಸ್‌ಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ತಂದೆಯಾಗಿರುವ ವಿಜಯೇಂದ್ರ ಪ್ರಸಾದ್, ಆರ್‌ಎಸ್‌ಎಸ್ ಕುರಿತಾಗಿ ಬರುತ್ತಿರುವ ಚಿತ್ರ ಹಾಗೂ ವೆಬ್‌ಸಿರೀಸ್ ಎರಡನ್ನೂ ತಾವೇ ನಿರ್ದೇಶನ ಮಾಡುತ್ತಿರುವುದಾಗಿ ಹೇಳಿದ್ದಾರೆ. ಕಳೆದ ಮಂಗಳವಾರ,ವಿಜಯವಾಡದಲ್ಲಿ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರಾಮ್ ಮಾಧವ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್, ಆರ್‌ಎಸ್‌ಎಸ್ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವೆಬ್ ಸಿರೀಸ್ ಹಾಗೂ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ಆರಂಭಿಸಿದ ದಿನದಿಂದಲೂ, ಸಂಘಟನೆಯ ಬಗ್ಗೆ ತಮ್ಮಲ್ಲಿದ್ದ ನಕಾರಾತ್ಮಕ ಅಭಿಪ್ರಾಯ ಬದಲಾಗಿದೆ ಎಂದು ಹೇಳಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಆರ್‌ಎಸ್‌ಎಸ್ ಮತ್ತು ಕೆಬಿ ಹೆಡಗೇವಾರ್, ಎಂಎಸ್ ಗೋಲ್ವಾಲ್ಕರ್, ವೀರ್ ಸಾವರ್ಕರ್, ಕೆಎಸ್ ಸುದರ್ಶನ್, ಮೋಹನ್ ಭಾಗವತ್ ಮತ್ತು ಇತರರು ಸೇರಿದಂತೆ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಕುರಿತು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು 2018 ರಲ್ಲಿ ಮೊದಲ ಬಾರಿಗೆ ವರದಿಯಾಗಿತ್ತು.
ವಿಜಯವಾಡದ ಕೆವಿಎಸ್‌ಆರ್ ಸಿದ್ಧಾರ್ಥ ಫಾರ್ಮಾಸ್ಯುಟಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ರಾಮ್ ಮಾಧವ್ ಅವರ ‘ಪಾರ್ಟಿಷನ್ಡ್ ಫ್ರೀಡಮ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಜಯೇಂದ್ರ ಪ್ರಸಾದ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, 'ನಿಮ್ಮೆಲ್ಲರ ಮುಂದೆ ಒಂದು ವಿಷಯವನ್ನು ಒಪ್ಪಿಕೊಳ್ಳಲು ಬಯಸುತ್ತೇನೆ. ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ನನಗೆ ಆರೆಸ್ಸೆಸ್ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆರ್‌ಎಸ್‌ಎಸ್‌ನವರೇ ಗಾಂಧಿಯನ್ನು ಕೊಂದಿದ್ದರು ಎಂದು ಇತರ ವ್ಯಕ್ತಿಗಳಂತೆ ನಾನು ನಂಬಿದ್ದೆ. ನಾಲ್ಕು ವರ್ಷದ ಹಿಂದೆ ಸ್ವತಃ ಆರ್‌ಎಸ್‌ಎಸ್ ಕಡೆಯಿಂದ ನನಗೆ ಸಂಘಟನೆಯ ಬಗ್ಗೆ ಚಿತ್ರ ನಿರ್ದೇಶನ ಹಾಗೂ ಚಿತ್ರಕಥೆ ಮಾಡುವಂತೆ ಕರೆ ಬಂದಿತ್ತು. ಇದಕ್ಕಾಗಿ ನನಗೆ ಸಂಭಾವನೆ ಸಿಕ್ಕಿದ ಬೆನ್ನಲ್ಲಿಯೇ, ನಾಗ್ಪುರದಲ್ಲಿನ ಕೇಂದ್ರ ಕಚೇರಿಗೆ ಹೋಗಿ ಸರಸಂಘಚಾಲಕ್ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದೆ. ಅಲ್ಲಿಯೇ ಒಂದು ದಿನ ಉಳಿದುಕೊಂಡು ಆರ್‌ಎಸ್‌ಎಸ್ ಎಂದರೇನು ಅನ್ನೋದನ್ನ ಅರ್ಥ ಮಾಡಿಕೊಂಡೆ. ಅದಾದ ಬಳಿಕ ನನಗೆ ಬಹಳ ಪಶ್ಚಾತ್ತಾಪ ಕಾಡಿತು. ಇಷ್ಟು ದಿನ ಇಷ್ಟು ದೊಡ್ಡ ಸಂಸ್ಥೆಯ ಬಗ್ಗೆಯೇ ಸರಿಯಾಗಿ ನನಗ ತಿಳಿದಿರಲಿಲ್ಲ. ಹೌದು, ಆರ್‌ಎಸ್‌ಎಸ್ ಇಲ್ಲದಿದ್ದರೆ ಕಾಶ್ಮೀರವೇ ಇರುತ್ತಿರಲಿಲ್ಲ. ಅದು ಪಾಕಿಸ್ತಾನದೊಂದಿಗೆ ವಿಲೀನವಾಗಿರುತ್ತಿತ್ತು. ಇದೇ ಪಾಕಿಸ್ತಾನದ ಕಾರಣದಿಂದಾಗು ಲಕ್ಷಾಂತರ ಹಿಂದುಗಳು ಸಾಯುತ್ತಿದ್ದರು' ಎಂದು ಹೇಳಿದ್ದಾರೆ.
ಕಥೆ ನೋಡಿ ಖುಷಿಪಟ್ಟ ಮೋಹನ್ ಭಾಗವತ್: ಕೇವಲ ಎರಡು ತಿಂಗಳ ಒಳಗಾಗಿ ನಾನು ಚಿತ್ರಕ್ಕಾಗಿ ಕಥೆಯನ್ನು ಬರೆದೆ. ಮೋಹನ್ ಭಾಗವತ್ ಕೂಡ ಇದಕ್ಕೆ ಖುಷಿ ಪಟ್ಟರು. 'ಎಲ್ಲರಿಗೂ ಒಂದು ಸಂತೋಷದ ಸುದ್ದಿ ಹೇಳಲು ಬಯಸುತ್ತೇನೆ. ಶೀಘ್ರದಲ್ಲಿಯೇ ಆರ್‌ಎಸ್‌ಎಸ್ ಕುರಿತಾದ ಸಿನಿಮಾ ಹಾಗೂ ವೆಬ್ ಸಿರೀಸ್ ಆರಂಭವಾಗಲಿದೆ. ಇದನ್ನು ನಾನೇ ನಿರ್ದೇಶನ ಮಾಡಲಿದ್ದೇನೆ' ಎಂದಿದ್ದಾರೆ. ಹೌದು ಆರ್‌ಎಸ್‌ಎಸ್ ಒಂದು ತಪ್ಪು ಮಾಡಿದೆ. ಅದು ಎಂದಿಗೂ ಸಾರ್ವಜನಿಕರೊಂದಿಗೆ ಮುಕ್ತವಾಗಿ ಮಾತನಾಡಲಿಲ್ಲ. ಈ ಅಂತರವನ್ನು ಎಷ್ಟು ಕಡಿಮೆ ಮಾಡಲು ಸಾಧ್ಯವೋ ಅಷ್ಟು ಕಡಿಮೆ ಮಾಡಲು ಬಯಸುತ್ತೇವೆ. ಆರ್ ಎಸ್‌ಎಸ್‌ನ ಶ್ರೇಷ್ಠತೆಯ ಕುರಿತಾಗಿ ನಾವೆಲ್ಲರೂ ಹೆಮ್ಮೆ ಪಡುವಂಥ ಅಂಶಗಳು ಇದರಲ್ಲಿ ಖಂಡಿತಾ ಇರಲಿದೆ ಎಂದಿದ್ದಾರೆ.
ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!
ಇತ್ತೀಚೆಗೆ ಮಿಡ್ ಡೇ ಪತ್ರಿಕೆಯಲ್ಲಿ ನೀಡಿದ್ದ ಸಂದರ್ಶನದಲ್ಲಿ ಚಿತ್ರಕ್ಕೆ ತಾವೇ ನಿರ್ದೇಶನ ಮಾಡುವುದಾಗಿ ಹೇಳಿದ್ದ ಅವರು, "ಭಗವಾ ಧ್ವಜ' ಎನ್ನುವ ಟೈಟಲ್ ಇಟ್ಟಿದ್ದಾಗಿ ಹೇಳಿದ್ದರು. ಆರ್‌ಎಸ್‌ಎಸ್‌ನ ಬಲವಾದ ಕಥೆಯು ತನ್ನನ್ನು ನಿರ್ದೇಶನಕ್ಕೆ ಮರಳುವಂತೆ ಮಾಡಿತು ಮತ್ತು ಚಿತ್ರಕ್ಕಾಗಿ ನಟರ ಆಯ್ಕೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್‌ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆ ಬಾಗಿದ್ದೇನೆ: ಸಿಎಂ ಬೊಮ್ಮಾಯಿ
100 ಕೋಟಿಯ ಬಜೆಟ್, ಅಕ್ಷಯ್ ಕುಮಾರ್ ಹೀರೋ: ಮೂಲಗಳ ಪ್ರಕಾರ ಚಿತ್ರಕ್ಕೆ ಅಕ್ಷಯ್ ಕುಮಾರ್ ಹಿರೋ ಆಗುವ ಸಾಧ್ಯತೆ ಇದ್ದು, ಕರ್ನಾಟಕ ಬಿಜೆಪಿಯ ಮುಖಂಡರೊಬ್ಬರು ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಒಟ್ಟಾರೆ 100 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಕಾಣಲಿದೆ.