ತೆಲುಗು ಚಮಕ್'ನಲ್ಲಿ ನಾನಿಗೆ ಜೋಡಿಯಾಗಲಿದ್ದಾರೆ ಬುಲ್'ಬುಲ್

First Published 29, Jan 2018, 10:38 AM IST
Rachita Ram Will Act in Telugu Chamak
Highlights

ಚಿತ್ರ ತಂಡದ ಪ್ರಕಾರ ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಸ್ಯಾಂಡಲ್‌'ವುಡ್‌ನಲ್ಲಿ ಗೆದ್ದಿದೆ.

ಬೆಂಗಳೂರು (ಜ.29): ಚಿತ್ರ ತಂಡದ ಪ್ರಕಾರ ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಸ್ಯಾಂಡಲ್‌'ವುಡ್‌ನಲ್ಲಿ ಗೆದ್ದಿದೆ.

ಅದೇ ಖುಷಿಯಲ್ಲಿ ನಿರ್ಮಾಪಕ ಚಂದ್ರಶೇಖರ್ ಈ ಚಿತ್ರವನ್ನು ತೆಲುಗಿನಲ್ಲೂ ನಿರ್ಮಾಣ ಮಾಡಲು ಹೊರಟಿದ್ದಾರಂತೆ. ಸದ್ಯಕ್ಕೆ ಲಭ್ಯವಾಗಿರುವ ಮೂಲಗಳ ಪ್ರಕಾರ ಅಲ್ಲಿ ‘ಚಮಕ್’ಗೆ ‘ಈಗ’ ಖ್ಯಾತಿ ನಟ ನಾನಿ ಹೀರೋ ಆಗಲಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಅವರೇ ನಾನಿ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಸದ್ಯಕ್ಕೆ ಫೈನಲ್ ಆಗುವುದಷ್ಟೇ ಬಾಕಿ.

ಈ ಚಿತ್ರದ ಮೂಲಕ ಕನ್ನಡದ ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ಟಾಲಿವುಡ್‌ಗೆ ಹಾರುತ್ತಿದ್ದಾರೆನ್ನುವ ಮಾಹಿತಿಯೂ ಲಭ್ಯವಾಗಿದೆ. ಚಮಕ್ ಚಿತ್ರ ತಂಡದ ಮೂಲಗಳು ಈ ಮಾಹಿತಿಯನ್ನು ನೀಡಿವೆ. ಇಷ್ಟಕ್ಕೂ ತೆಲುಗಿಗೆ ಬುಲ್'ಬುಲ್ ಬೆಡಗಿ ರಚಿತಾ ರಾಮ್ ಚಮಕ್ ಕೊಡಲು ಹೊರಟಿದ್ದು ಹೇಗೆ ಅಂತ ಹುಡುಕ ಹೊರಟರೆ ಅದಕ್ಕೆ ‘ಅಯೋಗ್ಯ’ನ ನಂಟು ಬೆಸೆದುಕೊಳ್ಳುತ್ತದೆ.

ಮಹೇಶ್ ನಿರ್ದೇಶನದ ‘ಅಯೋಗ್ಯ’ ಚಿತ್ರಕ್ಕೆ ಚಂದ್ರಶೇಖರ್ ಅವರೇ ನಿರ್ಮಾಪಕರು. ಸದ್ಯಕ್ಕೆ ಆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಅದೇ ವೇಳೆ ಚಮಕ್ ಚಿತ್ರವನ್ನು ಟಾಲಿವುಡ್‌ನಲ್ಲೂ ನಿರ್ಮಿಸಲು ಹೊರಟಿರುವ ನಿರ್ಮಾಪಕ ಚಂದ್ರಶೇಖರ್ ಅವರಿಗೆ ಅಲ್ಲಿನ ನಾಯಕಿಯರಿಗಿಂತ ರಚಿತಾರಾಮ್ ಅವರೇ ನಾಯಕಿಯಾದ್ರೆ ಸೂಕ್ತ ಎನ್ನುವ ಅಭಿಪ್ರಾಯ ಇದೆಯಂತೆ. ಹಾಗಾಗಿ ‘ಚಮಕ್’ ತೆಲುಗಿನಲ್ಲಿ ನಿರ್ಮಾಣವಾಗುವುದಾದರೆ ರಚಿತಾರಾಮ್ ನಾಯಕಿ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.

 

loader