ಶ್ರೀಮುರುಳಿ ಜತೆಗೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಮತ್ತೆ ತೆರೆ ಹಂಚಿಕೊಳ್ಳಲು ರೆಡಿ ಆಗಿದ್ದಾರೆ. ಚೇತನ್‌ಕುಮಾರ್‌ ನಿರ್ದೇಶನದ ‘ಭರಾಟೆ’ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸಹೃದಯ ಓದುಗರು ಐಟಂ ಸಾಂಗ್‌ ಅಂತ ಭಾವಿಸಬಾರದು. ಇದು ಇಂಟ್ರಡಕ್ಷನ್‌ ಸಾಂಗ್‌.

‘ಇದೊಂದು ಇಂಟ್ರಡಕ್ಷನ್‌ ಸಾಂಗ್‌. ಚಿತ್ರದ ಟೈಟಲ್‌ ಭರಾಟೆ ಪದದ ನಿಜ ಅರ್ಥವನ್ನು ಹೇಳುವುದರ ಜತೆಗೆ ಚಿತ್ರವೇನು ಅಂತ ವರ್ಣಿಸುವ ಹಾಡು. ನನ್ನದೇ ಸಾಹಿತ್ಯ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಆ ಹಾಡಿಗೆ ಓರ್ವ ಜನಪ್ರಿಯ ನಟಿಯನ್ನು ಕರೆ ತರಬೇಕೆನ್ನುವುದು ನನ್ನ ಯೋಚನೆ ಆಗಿತ್ತು. ಯಾರು ಸೂಕ್ತ ಅಂತ ಸಾಕಷ್ಟುಆಲೋಚಿಸಿದೆ. ಕೊನೆಗೆ ಸೂಕ್ತ ಎನಿಸಿದ್ದು ರಚಿತಾ ರಾಮ್‌. ಅವರ ಆಗಮನವೇ ಒಂಥರ ಖುಷಿ ಕೊಟ್ಟಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್‌.

ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಚಿತ್ರೀಕರಿಸಲು ಚಿತ್ರ ತಂಡ ಫ್ಲ್ಯಾನ್‌ ಹಾಕಿಕೊಂಡಿದೆ. ಅದ್ಧೂರಿ ಸೆಟ್‌ ರೆಡಿ ಆಗಿದೆ. ಮೋಹನ್‌ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸಹ ಕಲಾವಿದರು ಸಾಥ್‌ ನೀಡುತ್ತಿದ್ದಾರೆ. ‘ಭರಾಟೆ’ಗೆ ಇನ್ನು ನಾಲ್ಕೈದು ದಿನಗಳ ಚಿತ್ರೀಕರಣ ಬಾಕಿಯಿದೆ. ಅದು ಮುಗಿದರೆ ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಕಾಲಿಡಲಿದೆ.