ಹಾಗಂತ ನನಗೇನು ಬೇಸರ ಇಲ್ಲ. ಇಷ್ಟು ದಿನ ಮನೆಯಲ್ಲಿ ಹಬ್ಬ ಆಚರಿಸುತ್ತಿದ್ದೆ. ಮನೆಯವರ ಜತೆಗೆ ಹಬ್ಬದ ಸಂಭ್ರಮ, ಸಡಗರ ಇರುತ್ತಿತ್ತು. ಫಾರ್ ಎ ಚೇಂಜ್ ಈಗ ಶೂಟಿಂಗ್ ಸೆಟ್‌ನಲ್ಲಿ. ಅದು ಕೂಡ ಒಂಥರ ಖುಷಿ. ಸಣ್ಣವರಿದ್ದಾಗಿನಿಂದಲೂ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವುದು, ಸಂಜೆ ದೀಪ ಹಚ್ಚಿ, ಆ ಬೆಳಕಲ್ಲಿ ಸಂಭ್ರಮಿಸುವುದು ಇದ್ದೇ ಇತ್ತು.

ಈಗಲೂ ಅದು ಮಾಮೂಲು. ಹಬ್ಬಕ್ಕೆ ಅಡುಗೆ, ಪೂಜೆ ಅಂತ ನಾನೇನು ಬ್ಯುಸಿ ಇರೋದಿಲ್ಲ. ಆದ್ರೆ ಮನೆಯಲ್ಲಿ ತಯಾರಾದ ಬಗೆ ಬಗೆಯ ಊಟ ಮಾಡಿ, ನೆಮ್ಮದಿಯಿಂದ ನಿದ್ದೆ ಮಾಡುವುದು, ಇಲ್ಲವೇ ಒಳ್ಳೆಯ ಸಿನಿಮಾ ನೋಡುವುದು ನನಗಿಷ್ಟ.

ದೀಪಾವಳಿ ಅಂದ್ರೆ ಪಟಾಕಿ ಹೊಡೆಯುವುದೇ ಹಬ್ಬ ಅಂತ ಎಲ್ಲರೂ ಭಾವಿಸಿದ್ದಾರೆ. ನಾನು ಪಟಾಕಿ ಹೊಡೆಯುವುದನ್ನು ನಿಲ್ಲಿಸಿ, ಹತ್ತು ವರ್ಷಗಳೇ ಕಳೆದಿವೆ. ನಾನಷ್ಟೇ ಅಲ್ಲ, ಮನೆಯಲ್ಲಿ ಯಾರೂ ಕೂಡ ಪಟಾಕಿ ಹೊಡೆಯುವುದಿಲ್ಲ.  ಪಟಾಕಿ ಸುಡುವುದು ಅಂದ್ರೆ ದುಡ್ಡು ಸುಟ್ಟ ಹಾಗೆಯೇ. ಜತೆಗೆ ಅದರಿಂದಾಗುವ ಪರಿಸರ ಮಾಲಿನ್ಯವೂ ತುಂಬಾ. ಹಾಗಾಗಿ ನಾನು ಪಟಾಕಿ ಸಿಡಿಸುವುದನ್ನು ನಿಲ್ಲಿಸಿಬಿಟ್ಟೆ. ಪಟಾಕಿ ಹೊಡೆಯುವುದರ ಆಚೆ ದೀಪಾವಳಿ ಬೆಳಕಿನ ಹಬ್ಬ. ಸಂಜೆ ದೀಪ ಹಚ್ಚಿ, ಆ ಬೆಳಕಲ್ಲಿ ಹಬ್ಬದ ಆಚರಿಸುವುದರಲ್ಲೇ ಅದರ ನಿಜವಾದ ಸಂಭ್ರಮ.

ಹೆಣ್ಣು ಮಕ್ಕಳಿಗೆ ಪ್ರತಿ ಹಬ್ಬವೂ ವಿಶೇಷ ಆಗುವುದು ಉಡುಗೆ ತೊಡುಗೆಯ ಕಾರಣಕ್ಕೆ. ನನಗೂ ಅದರ ಆಸೆಯಿದೆ. ಹೊಸ ಬಟ್ಟೆಗಳ ಮೂಲಕ ಶೃಂಗಾರ ಗೊಂಡು ಓಡಾಡುವುದೇ ಖುಷಿ.