ಐತಿಹಾಸಿಕ ಸಿನಿಮಾದ ಕನಸು ನನಗೂ ಇದೆ. ಆದ್ರೆ ಆ ಸಿನಿಮಾ ತಾಂತ್ರಿಕವಾಗಿ ಹೇಗಿರುತ್ತೆ ಅನ್ನೋದೇ ಕುತೂಹಲ..!   ಹೀಗೆಂದಿದ್ದು ಪುನೀತ್ ರಾಜ್‌ಕುಮಾರ್. ಅದಕ್ಕೆ ಕಾರಣವಾಗಿದ್ದು ನಿರ್ಮಾಪಕ ಮುನಿರತ್ನ ಅವರ ಮತ್ತೊಂದು ಐತಿಹಾಸಿಕ ಸಿನಿಮಾ ಯೋಜನೆ!

ಬೆಂಗಳೂರು (ಜ.1): ಐತಿಹಾಸಿಕ ಸಿನಿಮಾದ ಕನಸು ನನಗೂ ಇದೆ. ಆದ್ರೆ ಆ ಸಿನಿಮಾ ತಾಂತ್ರಿಕವಾಗಿ ಹೇಗಿರುತ್ತೆ ಅನ್ನೋದೇ ಕುತೂಹಲ..! ಹೀಗೆಂದಿದ್ದು ಪುನೀತ್ ರಾಜ್‌ಕುಮಾರ್. ಅದಕ್ಕೆ ಕಾರಣವಾಗಿದ್ದು ನಿರ್ಮಾಪಕ ಮುನಿರತ್ನ ಅವರ ಮತ್ತೊಂದು ಐತಿಹಾಸಿಕ ಸಿನಿಮಾ ಯೋಜನೆ!

ನಿರ್ಮಾಪಕ ಮುನಿರತ್ನ ಮತ್ತೊಂದು ಐತಿಹಾಸಿಕ ಸಿನಿಮಾ ಮಾಡಲು ಹೊರಟಿದ್ದಾರೆ. ‘ಕುರುಕ್ಷೇತ್ರ’ದ ನಂತರ ಅವರೀಗ ಚಂದ್ರಗುಪ್ತ ಮತ್ತು ಚಾಣಕ್ಯನ ಮೇಲೆ ಕಣ್ಣಿಟ್ಟಿದ್ದಾರೆ. ಆ ಚಿತ್ರದಲ್ಲಿ ಸುದೀಪ್, ಪುನೀತ್ ಹಾಗೂ ಉಪೇಂದ್ರ ಅವರನ್ನು ಒಗ್ಗೂಡಿಸುವ ಆಸೆಯಿದೆ ಎಂದಿದ್ದಾರೆ. ಆ ಮಾತಿಗೆ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

‘ಬಾಲ ನಟನಾಗಿದ್ದಾಗಲೇ ಐತಿಹಾಸಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದೆ. ಆದರೂ ಈಗ ಅಂತಹ ಸಿನಿಮಾಗಳಲ್ಲಿ ಮತ್ತೆ ಅಭಿನಯಿಸುವ ಆಸೆಯಿದೆ. ಆದರೆ, ತಾಂತ್ರಿಕವಾಗಿ ಆ ಸಿನಿಮಾಗಳು ಹೇಗೆ ಬರಬಹುದು ಎನ್ನುವ ಕುತೂಹಲ, ಅನುಮಾನ ನನಗಿದೆ. ಹಾಗಾಗಿ ಅವೆಲ್ಲ ನಾವಂದುಕೊಂಡಷ್ಟು ಸುಲಭವಿಲ್ಲ. ಇವತ್ತು ನಾವೆಲ್ಲ ಐತಿಹಾಸಿಕ ಸಿನಿಮಾ ಅಂದ್ರೆ ‘ಬಾಹುಬಲಿ’ ಬಗ್ಗೆ ಮಾತನಾಡುತ್ತೇವೆ. ಅದಕ್ಕೆ ಕಾರಣ ಆ ಸಿನಿಮಾದ ತಾಂತ್ರಿಕ ಅದ್ಧೂರಿತನ.

 ಈ ಕಾಲಕ್ಕೆ ಹೇಗಿರಬೇಕು, ಹೇಗೆಲ್ಲ ತೋರಿಸಬಹುದು ಅನ್ನೋದಕ್ಕೆ ಈ ಚಿತ್ರ ಮಾದರಿಯಂತಿದೆ. ಒಳ್ಳೆಯ ಕತೆ ಹೇಳಬೇಕು ನಿಜ, ಆದ್ರೆ ಅದಕ್ಕೆ ತಕ್ಕನಾಗಿ ತೆರೆ ಮೇಲೆ ತಾಂತ್ರಿಕತೆ ತರಬೇಕು. ಆಗ ಮಾತ್ರ ಐತಿಹಾಸಿಕ ಸಿನಿಮಾಗಳಿಗೆ ಜನಮನ್ನಣೆ ಸಿಗುತ್ತೆ . ಹಾಕಿದ ಬಂಡವಾಳವೂ ಬರುತ್ತೆ’ಎಂದರು ಪುನೀತ್ ರಾಜ್‌ಕುಮಾರ್. ‘ಮುನಿರತ್ನ ಹೊಸ ಸಿನಿಮಾದ ವಿಚಾರ ಖಂಡಿತಾ ನನಗೆ ಗೊತ್ತಿಲ್ಲ. ಅವರು ಹೈದರಬಾದ್‌ನಲ್ಲಿ ಕುಳಿತು ನೀಡಿದ ಹೇಳಿಕೆಯನ್ನು ಪತ್ರಿಕೆಗಳಲ್ಲಿ ಓದಿದಾಗಲೇ ನನಗೆ ಗೊತ್ತಾಗಿದ್ದು. ಅವರ ಆಸೆ, ಆಲೋಚನೆ ನಿಜಕ್ಕೂ ಅದ್ಭುತವಾಗಿದೆ.

ಕನ್ನಡದಲ್ಲಿ ಅಂತಹ ಪ್ರಯತ್ನಗಳು ನಿಟ್ಟಿನಲ್ಲಿ ‘ಕುರುಕ್ಷೇತ್ರ’ ಒಂದೊಳ್ಳೆ ಪ್ರಯತ್ನ. ದೊಡ್ಡ ಮಟ್ಟದಲ್ಲಿ ಹಣ ಹಾಕಿ ಸಿನಿಮಾ ಮಾಡುವುದು ಇವತ್ತು ಅಷ್ಟು ಸುಲಭವಿಲ್ಲ. ಪ್ರೇಕ್ಷಕರು ಮೆಚ್ಚಿಕೊಂಡಾಗಲೇ ನಿರ್ಮಾಪಕರಿಗೆ ಹಾಕಿದ ಬಂಡವಾಳ ಬರುತ್ತೆ. ಜನರಿಗೆ ಮೆಚ್ಚುಗೆ ಆಗದಿದ್ದರೆ ನಿರ್ಮಾಪಕನಿಗೆ ನಷ್ಟ. ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡುವಾಗ ಇವೆಲ್ಲ ಲೆಕ್ಕಾಚಾರಗಳು ಇದ್ದೇ ಇರುತ್ತವೆ. ಇರಲೇಬೇಕು ಕೂಡ’ ಎನ್ನುವುದು ಪುನೀತ್ ರಾಜ್‌ಕುಮಾರ್ ಅಭಿಮತ. ಇನ್ನು ಮೂವರು ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅವರಿಗೂ ಖುಷಿಯಿದೆ. ‘ಇಂತಹ ಅವಕಾಶಗಳು ಬರುವುದೇ ಅಪರೂಪ. ಬಂದ್ರೆ ಖುಷಿ ಆಗುತ್ತೆ. ಸದ್ಯಕ್ಕೆ ಅದೆಲ್ಲ ಮುನಿರತ್ನ ಆಲೋಚನೆ ಮಾತ್ರ’ ಎನ್ನುತ್ತಾರೆ ಪುನೀತ್.