ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ ಇಂದಿಗೆ ಐದು ವರ್ಷಗಳಾಗಿದ್ದು, ಅವರ ನೆನಪಿನಲ್ಲಿ ಅಭಿಮಾನಿಗಳು ರಕ್ತದಾನದಂತಹ ವಿಶೇಷ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಆ್ಯಂಕರ್ ಅನುಶ್ರೀ ಅವರು ಅಪ್ಪು ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು: ಎಲ್ಲರ ಬಾಯಲ್ಲಿಯೂ ಅಪ್ಪು ಎಂದೇ ಕರೆಸಿಕೊಳ್ತಿರೋ,ಕನ್ನಡದ ಕಣ್ಮಣಿ ಎಂದೇ ಬಿಂಬಿತವಾಗಿರುವ ನಟ ಪುನೀತ್ ರಾಜ್ಕುಮಾರ್ ಅವರು ಎಲ್ಲರನ್ನೂ ಅಗಲಿ ಇಂದಿಗೆ ಅರ್ಥಾತ್ ಅಕ್ಟೋಬರ್ 29 ರಂದು ಐದು ವರ್ಷಗಳೇ ಗತಿಸಿವೆ. ಪುನೀತ್ ರಾಜ್ಕುಮಾರ್ ಅವರು ಕೇವಲ 46 ವರ್ಷ ವಯಸ್ಸಿನಲ್ಲಿ ಅಗಲಿದ್ದಾರೆ. ಬದುಕಿರುವಾಗಲೂ ಹಲವರ ಬಾಳಿಗೆ ಬೆಳಕಾಗಿ, ಮೃತರಾದ ಮೇಲೂ ಅಂಗಾಂಗ ದಾನದ ಮೂಲಕ ಹಲವರ ಬದುಕನ್ನು ಹಸನುಗೊಳಿಸಿರುವ ಅಪ್ಪು, ಅವರನ್ನು ನೆನೆದು ಅವರು ಲಕ್ಷಾಂತರ ಫ್ಯಾನ್ಸ್ ಇಂದು ಕಣ್ಣೀರಿನ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಪುನೀತ್ ಅವರ ಹಲವು ಅಭಿಮಾನಿಗಳು ಇಂದು ರಕ್ತದಾನದಂಥ ವಿಶೇಷ ಕಾರ್ಯಗಳನ್ನೂ ನೆರವೇರಿಸುತ್ತಿದ್ದಾರೆ.
ಪತ್ನಿ ಭಾವುಕ ಪೋಸ್ಟ್
ಇದರ ನಡುವೆಯೇ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಅವರು ಪತಿಯ ಅಗಲಿಕೆಯ ಕಣ್ಣೀರಿನ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. 5 ವರ್ಷಗಳ ಸವಿನೆನಪಿನಲ್ಲಿ... ಎಂದು ಶೀರ್ಷಿಕೆ ಕೊಟ್ಟು ಬರೆದಿರುವ ಅಶ್ವಿನಿ (Ashwini Puneet Rajkumar)ಅವರು, ಕಾಲ ಸರಿದರೂ ಅಪ್ಪು ಅವರ ನೆನಪುಗಳು ನಮ್ಮ ಹೃದಯದಲ್ಲಿ ಸದಾ ಹಸಿರಾಗಿವೆ. ಪ್ರೀತಿ ಮತ್ತು ಸೌಜನ್ಯದಿಂದ ಅವರು ಬದುಕಿಕ ರೀತಿ ನಮಗೆ ಎಂದೆಂದಿಗೂ ಆದರ್ಶ. ಅವರ ಸ್ಫೂರ್ತಿಯ ಬೆಳಕು ನಮ್ಮ ಹಾದಿಗೆ ದಾರಿದೀಪವಾಗಿ, ಮುಂದಿನ ದಿನಗಳನ್ನು ಭರವಸೆ ಮತ್ತು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಅಪ್ಪು ಅವರ ಅಸಂಖ್ಯ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಆ್ಯಂಕರ್ ಅನುಶ್ರೀ ಅವರೂ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮ್ಮನ್ನು ಕಳೆದುಕೊಂಡ ನೋವು ಮನಸ್ಸು ಇನ್ನೂ ಒಪ್ಪಿಲ್ಲ, ಒಪ್ಪಲ್ಲ. ನಿಮ್ಮನ್ನು ತೆರೆ ಮೇಲೆ ನೋಡಿದಾಗ ಸಿಗ್ತಿದ್ದ ಆ ಖುಷಿ ಇನ್ನೂ ಮಾಸಿಲ್ಲ. ನಿಮ್ಮನ್ನು ಪ್ರೀತಿಸೋಕೆ ಕಾರಣ ಹುಡುಕಬೇಕಿಲ್ಲ. ಆದರೆ ನಿಮ್ಮನ್ನು ಮರೆಯೋಕೆಕಾಲಗಳು ಸಾಕಾಗೊಲ್ಲ ಎಂದಿರುವ ಅನುಶ್ರೀ ಅವರು, ಹೇಳೋದು ತುಂಬಾ ಇದೆ… ಪರಮಾತ್ಮ ನಿಮ್ಮಲ್ಲಿ ನಮ್ಮ ಜೀವ ಇದೆ ಎಂದು ಭಾವುಕ ಶೀರ್ಷಿಕೆ ಕೊಟ್ಟಿದ್ದಾರೆ.
ಜಿಮ್ ಸೆಷನ್ ನಂತರ ಕುಸಿದಿದ್ದ ನಟ
ಡಾ. ರಮಣ ರಾವ್ ಅವರು, ಪುನೀತ್ ರಾಜ್ಕುಮಾರ್ ಅವರೊಂದಿಗಿನ ತಮ್ಮ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡು ಈಚೆಗೆ ಅವರ ನಿಧನದ ಕುರಿತು ಹೇಳಿದ್ದರು. ಜಿಮ್ ಸೆಷನ್ ನಂತರ ಅವರು ಕುಸಿದು ಬಿದಿದ್ದರು. ಪುನೀತ್ ರಾಜ್ಕುಮಾರ್ ಅವರು, ಅಕ್ಟೋಬರ್ 29, 2021 ರಂದು ಹೃದಯಾಘಾತದಿಂದ ನಿಧನರಾದರು. ಆದಾಗ್ಯೂ, ಅವರ ವೈದ್ಯರ ಪ್ರಕಾರ ಅವರ ಸಾವಿಗೆ ಮುಂಚಿನ ವ್ಯಾಯಾಮವು ಅವರ ಸಾಮಾನ್ಯ ಫಿಟ್ನೆಸ್ ದಿನಚರಿಗಿಂತ ಭಿನ್ನವಾಗಿತ್ತು. ಆ ದಿನ ಪುನೀತ್ ಮೊದಲ ಬಾರಿಗೆ ಕಿಕ್ಬಾಕ್ಸಿಂಗ್ ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ.






