ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುದೀಪ್ ಪತ್ನಿ ಪ್ರಿಯಾ
ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವುದೆಂದರೆ ಯಮಲೋಕಕ್ಕೆ ಪ್ರಯಾಣ ಬೆಳೆಸಿದಂತೆ. ಒಂದೆಡೆ ನಮ್ಮ ಮೆಟ್ರೋ ಕೆಲಸ, ಮತ್ತೊಂದೆಡೆ ಗುಂಡಿ ಬಿದ್ದು, ಕಿತ್ತೋಗಿರೋ ರಸ್ತೆಗಳು. ಆ ಟ್ರಾಫಿಕ್ ನಡುವೆ ಮನೆಗೆ ಸೇರವ ವಿಶ್ವಾಸವೇ ಯಾರಿಗೂ ಇರೋಲ್ಲ. ಈ ಪರಿಸ್ಥಿತಿಗೆ ಸ್ಯಾಂಡಲ್‌ವುಡ್ ನಟ ಸುದೀಪ್ ಪತ್ನಿ ಮರುಗಿದ್ದು ಹೀಗೆ...
ಆಫೀಸ್ ಟೆನ್ಷನ್, ಮನೆಗೆ ಸೇರೋ ತವಕ, ಟ್ರಾಫಿಕ್ ಕಿರಿಕಿರಿ....ಇದರ ಮಧ್ಯೆ ಕೆರೆಯಂತಾದ ರಸ್ತೆಗಳು. ಬೆಂಗಳೂರು ಮಂದಿ ಬಹುತೇಕ ತಮ್ಮ ಜೀವನವನ್ನು ಟ್ರಾಫಿಕ್ ಜಂಜಾಟದಿಂದ, ಕಿತ್ತು ಹೋಗಿರುವ ರಸ್ತೆಯಲ್ಲಿಯೇ ಕಳೆಯುತ್ತಾರೆ. ಪ್ರಯಾಣವೆಂದರೆ ಸಾಕು, ಇವರಿಗೆ ತಲೆ ನೋವು.
ಜೀವನದ ಬಹುಪಾಲು ಭಾಗವನ್ನು ಟ್ರಾಫಿಕ್‌ನಲ್ಲಿಯೇ ಕಳೆಯುವ ಬೆಂಗಳೂರಿಗರಿಗೆ, ರಸ್ತೆ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಬಿಬಿಎಂಪಿ, ಜನ ಪ್ರತಿನಿಧಿಗಳ ಆದ್ಯ ಕರ್ತವ್ಯ. ಆದರೆ, ಎಕ್ಕುಟ್ಟು ಹೋಗಿರೋ ರಸ್ತೆ ನೋಡಿ, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ರಾಧಕೃಷ್ಣನ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸಂಬಂಧಿಸಿದ ಅಧಿಕಾರಿಗಳು, ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಕಾರು ಡ್ರೈವರ್ ಬರ್ತಡೆಗೆ ಕಿಚ್ಚ ಸುದೀಪ್ ವಿಶ್
ಕೆಲವು ದಿನಗಳ ಹಿಂದೆ #SaveBellandur ಪೇಜಿನಲ್ಲಿ ಹಾಳಾಗಿರುವ ರಸ್ತೆ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಅದನ್ನೇ ರಿಟ್ವೀಟ್ ಮಾಡಿ 'ನಾನೂ ಸಂಚರಿಸುವ ಮಾರ್ಗವಿದು, ಸ್ಥಳಿಯರ ಆಕ್ರೋಶ ನನಗೆ ಅರ್ಥವಾಗುತ್ತದೆ. ಬೇಸರವೇನೆಂದರೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ದಯವಿಟ್ಟು ಈ ಬಗ್ಗೆ ಗಮನ ಹರಸಿ, ತಕ್ಷಣವೇ ಕ್ರಮ ಕೈಗೊಳ್ಳಿ' ಎಂದು ಆಗ್ರಹಿಸಿದ್ದಾರೆ.
ಸ್ಯಾಂಡಲ್‌ವುಡ್ ಬಾದ್ ಶಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ವಿಚಾರ, ಸ್ನೇಹಿತರಿಗೆ ಶುಭಕೋರುವ ವಿಷಯ ಬಿಟ್ಟರೆ, ಇಂಥ ವಿಚಾರವಾಗಿ ಯಾವತ್ತೂ ಮಾತನಾಡಿದ್ದೇ ಇಲ್ಲ. ಆದರೆ ಅವರೇ ಈ ವಿಚಾರವಾಗಿ ಮಾತನಾಡಿದ್ದಾರೆಂದರೆ, ಈ ರಸ್ತೆಗಳ ಅವಸ್ಥೆ ಹೇಗಿರಬಹುದೆಂದು ಎಂಥವರೂ ಬೇಕಾದರೂ ಗೆಸ್ ಮಾಡಬಹುದು.
ಬೆಂಗಳೂರಿನ ಹಲನಾಯಕನಹಳ್ಳಿ, ಕಸವನಹಳ್ಳಿ, ದೊಡ್ಡಕನ್ನೇಲಿ, ಜುನ್ನಸಾಂದ್ರ ರಸ್ತೆಗಳು ಹದಗೆಟ್ಟಿದ್ದು, ಇಲ್ಲಿ ಸಂಚರಿಸುವುದೆಂದರೆ ನರಕ ಯಾತನೆ. ದಯವಿಟ್ಟು ತೀರ ಹದಗೆಟ್ಟಿರುವ ರಸ್ತೆಗಳೆಡೆಗೆ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಿ ಎಂಬುವುದು ಗಾರ್ಡನ್ ಸಿಟಿ ವಾಸಿಗಳ ಆಗ್ರಹವೂ ಹೌದು.